ವಿಜಯಪುರ : ದೇವಣಗಾಂವ್ ಚೆಕ್ಪೋಸ್ಟ್ ಬಳಿ ದಾಖಲೆ ಇಲ್ಲದ 9 ಲಕ್ಷ ಹಣದ ಜೊತೆ ಸೀರೆ, ಬಟ್ಟೆ ಜಪ್ತಿ - ಅಕ್ರಮ ಹಣ ಸಾಗಾಟ
🎬 Watch Now: Feature Video
ವಿಜಯಪುರ: ಸೂಕ್ತ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 9 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಆಲಮೇಲ ತಾಲೂಕಿನ ದೇವಣಗಾಂವ್ ಚೆಕ್ಪೋಸ್ಟ್ ಬಳಿ ನಡೆದಿದೆ. ಚುನಾವಣೆ ಆಗಮಿಸುತ್ತಿರುವ ಹಿನ್ನೆಲೆ ಚೆಕ್ಪೋಸ್ಟ್ಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ಕೈಗೊಂಡಿದ್ದಾರೆ. ಈ ವೇಳೆ ಕೇರಳ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಸಮೀರ್ ಅಲಿ ವಲಕ್ಕಿನ್ ಎಂಬಾತ ಬಳಿ ಒಟ್ಟು 9 ಲಕ್ಷ ರೂಪಾಯಿ ಹಣ ದೊರೆತಿದೆ. ಈ ಹಣವನ್ನು ಕೇರಳದಿಂದ ಅಫ್ಜಲಪುರಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಹಣ ಮತ್ತು ಕಾರನ್ನು ಸೀಜ್ ಮಾಡಿದ್ದು, ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೀರೆ, ಬಟ್ಟೆ ವಶ : ಮತ್ತೊಂದು ವಾಹನದಲ್ಲಿ ಸಾಗಿಸುತ್ತಿದ್ದ ಆಧಾರರಹಿತ ಸೀರೆ, ಬಟ್ಟೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಒಟ್ಟು 260 ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಡಚಣದಿಂದ ಬಟ್ಟೆ ಖರೀದಿಸಿ ಕಲಬುರಗಿಯ ಆಳಂದಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸೀರೆಗಳೊಂದಿಗೆ ವ್ಯಕ್ತಿಯನ್ನು ಆಲಮೇಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
49 ಲಕ್ಷ ರೂಪಾಯಿ ಜಪ್ತಿ: ಮಹಾರಾಷ್ಟ್ರ ಗಡಿಯ ಧೂಳಖೇಡ ಚೆಕ್ಪೋಸ್ಟ್ ಬಳಿ ದಾಖಲೆ ಇಲ್ಲದೇ ಹಣ ಸಾಗಿಸಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನಿಂದ ಬರೋಬ್ಬರಿ 49 ಲಕ್ಷ ರೂಪಾಯಿ ಹಣ ಜಪ್ತಿ ಮಾಡಲಾಗಿದೆ. ಘಟನೆ ಮಧ್ಯರಾತ್ರಿ 2ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಸೋಲಾಪೂರದಿಂದ ವಿಜಯಪುರದ ಇಂಡಿಗೆ ಕ್ಯಾಂಟರ್ ವಾಹನದಲ್ಲಿ ಸೂಕ್ತ ದಾಖಲೆ ಇಲ್ಲದೇ ಹಣವನ್ನು ಚಾಲಕ ತನ್ನ ಕಾಲಿನ ಕೆಳಭಾಗದಲ್ಲಿ ಬ್ಯಾಗಿನಲ್ಲಿಟ್ಟು ಸಾಗಿಸುತ್ತಿದ್ದ. ಚಾಲಕನ ಅನುಮಾನಾಸ್ಪದ ವರ್ತನೆ ಕಂಡ ಇಂಡಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಅವರು ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ಒಟ್ಟು 49 ಲಕ್ಷ ರೂ. ಹಣ ಪತ್ತೆಯಾಗಿದೆ. ಇದು ಇಂಡಿ ಪಟ್ಟಣದ ಎಪಿಎಂಸಿ ವರ್ತಕ ಮಂಜುನಾಥ ಎನ್ನುವವರಿಗೆ ಸೇರಿದ ನಗದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದಾಖಲೆ ಇಲ್ಲದ ₹ 9 ಲಕ್ಷ ಹಣ ಚೆಕ್ಪೋಸ್ಟ್ನಲ್ಲಿ ಸೀಜ್ : ಎಸ್ಪಿ ಎನ್ ಯತೀಶ್