ನ್ಯೂಯಾರ್ಕ್: ಯೋಗರ್ಟ್ ಅಥವಾ ಕೆನೆಭರಿತ ಮೊಸರು ಕೇವಲ ಕರುಳಿನ ಆರೋಗ್ಯಕ್ಕೆ ಮಾತ್ರವೇ ಒಳ್ಳೆಯದಲ್ಲ. ಇದು ನಿಮ್ಮ ಮೂಡ್ (ಮನಸ್ಥಿತಿ) ಬದಲಾಯಿಸುವಲ್ಲೂ ಕೂಡ ಪರಿಣಾಮಕಾರಿಯಾಗಿದೆ ಎಂದು ಹೊಸ ಸಂಶೋಧನೆ ತಿಳಿಸಿದೆ.
ಯುನಿರ್ವಸಿಟಿ ಆಫ್ ವರ್ಜೀನಿಯಾ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು ಪತ್ತೆ ಮಾಡಿದಂತೆ, ಯೋಗರ್ಟ್ ಮತ್ತು ಹುದುಗಿಸಿದ ಆಹಾರದಲ್ಲಿ ಲ್ಯಾಕ್ಟೋಬಾಸಿಲ್ಲಿ ಎಂಬ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಇದು ಒತ್ತಡ, ಖಿನ್ನತೆ ಹಾಗು ಆತಂಕ ತಡೆಯುವಲ್ಲೂ ಸಹಾಯ ಮಾಡುತ್ತದೆ.
ಈ ಅಧ್ಯಯನ ವರದಿಯನ್ನು ಜರ್ನಲ್ ಬ್ರೈನ್, ಬಿಹೇವಿಯರ್ ಮತ್ತು ಇಮ್ಯೂನಿಟಿಯಲ್ಲಿ ಪ್ರಕಟಿಸಲಾಗಿದೆ. ಈ ಮೂಲಕ ಆತಂಕ, ಖಿನ್ನತೆ ಮತ್ತು ಇತರೆ ಮಾನಸಿಕ ಆರೋಗ್ಯ ಪರಿಸ್ಥಿತಿ ನಿರ್ವಹಣೆಗೆ ಸಂಶೋಧನೆ ಹೊಸ ಚಿಕಿತ್ಸೆಯ ದಾರಿ ತೋರಿಸಿದೆ.
ಅಧ್ಯಯನದಲ್ಲಿ ಪತ್ತೆ ಮಾಡಿದಂತೆ ಲ್ಯಾಕ್ಟೋಬಾಸಿಲ್ಲಿ ಇತರೆ ಎಲ್ಲಾ ಸೂಕ್ಷ್ಮಾಣುಗಳನ್ನು ನೈಸರ್ಗಿಕವಾಗಿ ನಮ್ಮ ದೇಹದಿಂದ ಬೇರ್ಪಡಿಸುತ್ತದೆ ಎಂದು ಸಂಶೋಧಕ ಅಲ್ಬನ್ ಗಲ್ಟಿಯರ್ ತಿಳಿಸಿದ್ದಾರೆ. ಕರುಳಿನಲ್ಲಿರುವ ಲ್ಯಾಕ್ಟೋಬಾಸಿಲ್ಲಿ ಇಮ್ಯೂನ್ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಮನಸ್ಥಿತಿಯ ಅಸ್ವಸ್ಥತೆಯ ಮೇಲೆ ಪ್ರಭಾವ ಬೀರುತ್ತದೆ. ಈ ಮೂಲಕ ಆತಂಕ ಮತ್ತು ಖಿನ್ನತೆಗೆ ಚಿಕಿತ್ಸೆಗೆ ಹೊಸ ದಾರಿ ಕಾಣಬಹುದು.
ನಮ್ಮ ತಂಡ ಲ್ಯಾಕ್ಟೋಬಾಸಿಲ್ಲಿಯನ್ನು ನಿರ್ದಿಷ್ಟವಾಗಿ ಗಮನಿಸಿದೆ. ಈ ಹಿಂದಿನ ಅಧ್ಯಯನದಲ್ಲಿ ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಈ ಬ್ಯಾಕ್ಟೀರಿಯಾಗಳು ಭರವಸೆದಾಯಕ ಫಲಿತಾಂಶವನ್ನು ತೋರಿಸಿದ್ದವು. ನಾವು ನಮ್ಮ ಮುಂಚಿನ ಅಧ್ಯಯನದಲ್ಲಿ ಲ್ಯಾಕ್ಟೋಬಾಸಿಲ್ಲಿ ಮೂಡ್ ಸುಧಾರಿಸುವಲ್ಲಿ ಪ್ರಯೋಜನಕಾರಿಯಾಗಿರುತ್ತದೆ ಎಂಬ ಅರಿವು ಹೊಂದಿದ್ದೆವು. ಆದರೆ ಇದರ ಹಿಂದಿನ ಕಾರಣ ಅಸ್ಪಷ್ಟವಾಗಿತ್ತು. ಸೂಕ್ಷ್ಮಾಣುಗಳ ಅಧ್ಯಯನದಲ್ಲಿನ ತಾಂತ್ರಿಕ ಸವಾಲುಗಳು ಎದುರಾದ ಹಿನ್ನೆಲೆಯಲ್ಲಿ ಇದರ ಬಗ್ಗೆ ತಿಳಿಯಲಿಲ್ಲ. ಆದರೆ ಇದೀಗ ಗಲ್ಟಿಯರ್ ತಂಡ, ಖಿನ್ನತೆ ಸಂಶೋಧನೆಯನ್ನು ಬ್ಯಾಕ್ಟೀರಿಯಾಗಳ ಸಂಗ್ರಹ ಬಳಕೆ ಮಾಡಿ ಅಧ್ಯಯನ ಮಾಡಲು ಮುಂದಾಗಿದೆ. ಇದರಲ್ಲಿ ಲ್ಯಾಕ್ಟೋಬಾಸಿಲ್ಲಿ ಎರಡು ತಳಿ ಸೇರಿದಂತೆ ಇತರೆ ಆರು ಬ್ಯಾಕ್ಟೀರಿಯಾ ತಳಿಗಳಿವೆ.
ಅಧ್ಯಯನದ ಫಲಿತಾಂಶವು ಹೇಗೆ ಲ್ಯಾಕ್ಟೋಬಾಸಿಲ್ಲಿ ನಡವಳಿಕೆ ಮೇಲೆ ಪರಿಣಾಮ ಬೀರುತ್ತದೆ, ಹೇಗೆ ಬ್ಯಾಕ್ಟೀರಿಯಾಗಳ ಕೊರತೆ ಖಿನ್ನತೆ ಮತ್ತು ಆತಂಕವನ್ನು ಕೆಟ್ಟದಾಗಿಸುತ್ತದೆ ಎಂದು ವಿವರಿಸಿದೆ. ಲ್ಯಾಕ್ಟೋಬಾಸಿಲ್ಲಿ ಎಂಬುದು ಲ್ಯಾಕ್ಟೋಬಾಸಿಲೇಸಿಯಾ ಕುಟುಂಬಕ್ಕೆ ಸೇರಿದ್ದು, ಇದು ಪ್ರತಿರೋಧಕ ಮಧ್ಯವರ್ತಿ ಮಟ್ಟವನ್ನು ನಿರ್ವಹಣೆ ಮಾಡುತ್ತದೆ. ಈ ಮೂಲಕ ಒತ್ತಡದ ವಿರುದ್ಧ ದೇಹವನ್ನು ನಿಯಂತ್ರಿಸುತ್ತದೆ. ಹಾಗೆಯೇ ಖಿನ್ನತೆ ನಿವಾರಣೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಟಿಬಿ ವಿರುದ್ಧ ಹೋರಾಡಬಲ್ಲ ಪ್ರೋಟಿನ್ ಕಂಡು ಹಿಡಿದ ಐಎಲ್ಎಸ್ ಸಂಶೋಧಕರು