ನವದೆಹಲಿ: ಯುವಜನತೆ ದಿನಕ್ಕೆ 70 ಗಂಟೆಗಳ ಕಾಲ ಕೆಲಸ ನಿರ್ವಹಿಸಬೇಕು ಎಂಬ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿಕೆ ಇದೀಗ ಆರೋಗ್ಯವಲಯದಲ್ಲೂ ಹೊಸ ಚರ್ಚೆಗೆ ದಾರಿಯಾಗಿದೆ. ಈ ರೀತಿಯ ಕೆಲಸದ ಮಾದರಿಯಿಂದ ಹೃದಯಾಘಾತ, ಒತ್ತಡ, ಆತಂಕ ಮತ್ತು ಬೆನ್ನು ನೋವಿನಂತಹ ಸಮಸ್ಯೆಗಳು ಕಾಡುತ್ತವೆ ಎಂದು ದೇಶಾದ್ಯಂತ ಅನೇಕ ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬೆಂಗಳೂರಿನ ಹೃದಯರೋಗ ತಜ್ಞೆ ಡಾ ದೀಪಲ್ ಕೃಷ್ಣಮೂರ್ತಿ, ದಿನಕ್ಕೆ ಇರುವುದು 24 ಗಂಟೆ. ನಾವು ವಾರದ ಆರು ದಿನಗಳ ಕಾಲ ದಿನಕ್ಕೆ 12 ಗಂಟೆ ಕೆಲಸ ಮಾಡಿದರೆ ಉಳಿಯುವುದು 12 ಗಂಟೆ. ಇದರಲ್ಲಿ ನಿದ್ರೆಗೆ 8 ಗಂಟೆ ಹೋದರೆ, ಉಳಿಯುವುದು 4 ಗಂಟೆ. ಈ ನಾಲ್ಕು ಗಂಟೆಯಲ್ಲಿ ಬೆಂಗಳೂರಿನ ರಸ್ತೆಗಳ ಮೇಲೆ 2 ಗಂಟೆ ಕಳೆದು ಹೋಗುತ್ತದೆ. ಇನ್ನು ಉಳಿಯುವುದು ಕೇವಲ 2 ಗಂಟೆ ಅಷ್ಟೆ. ಅದರಲ್ಲಿ ನಾವು ಬ್ರಶ್, ಸ್ನಾನ, ಊಟಗಳನ್ನು ಮುಗಿಸಿಕೊಳ್ಳಬೇಕು ಎಂದಿದ್ದಾರೆ.
ಅಷ್ಟೇ ಅಲ್ಲದೇ, ಈ ಕೆಲಸದ ಅವಧಿಯು ನಿಮಗೆ ಸಾಮಾಜೀಕರಣಕ್ಕೆ ಯಾವುದೇ ಸಮಯವನ್ನು ನೀಡುವುದೊಲ್ಲ. ಕುಟುಂಬದ ಜೊತೆ ಮಾತನಾಡಲು, ವ್ಯಾಯಾಮ ಮಾಡಲು ಸಮಯ ಇರುವುದಿಲ್ಲ. ಮನರಂಜನೆಗೆ ಸಮಯ ಇರುವುದಿಲ್ಲ. ಇನ್ನು ಕಂಪನಿಗಳು, ಕೆಲಸದ ಸಮಯ ಮುಗಿದ ಬಳಿಕವೂ ಇಮೇಲ್ ಮತ್ತು ಕರೆಗಳಿಗೆ ಉತ್ತರಿಸುವುದುನ್ನು ನಿರೀಕ್ಷೆ ಮಾಡುವುದು ಸುಳ್ಳಲ್ಲ. ಹೀಗಾದ್ರೆ ಯುವ ಜನತೆ ಹೃದಯಾಘಾತಕ್ಕೆ ಒಳಗಾಗದೇ ಇರುತ್ತಾರೆಯೆ ಎಂದು ಪ್ರಶ್ನಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ದೀರ್ಘ ಕೆಲಸದ ಅವಧಿ ಅಂದರೆ ವಾರಕ್ಕೆ 30 ರಿಂದ 40ಗಂಟೆಗಳ ಕೆಲಸದ ಅವಧಿಗೆ ಹೋಲಿಕೆ ಮಾಡಿದಾಗ ವಾರಕ್ಕೆ 55 ಗಂಟೆ ಕೆಲಸದ ನಿರ್ವಹಿಸುವುದರಿಂದ ಪಾರ್ಶ್ವವಾಯು ಅಪಾಯ ಶೇ 35ರಷ್ಟಿದೆ. 17ರಷ್ಟು ಹೃದಯಾಘಾತದ ಅಪಾಯ ಇದೆ.
ಡಬ್ಲ್ಯೂಎಚ್ಒ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು 2021ರಲ್ಲಿ ಎನ್ವರಮೆಂಟಲ್ ಇಂಟರ್ನ್ಯಾಷನಲ್ನಲ್ಲಿ ಪ್ರಕಟಿಸಿದ ವರದಿಯಲ್ಲಿ 2016ರಲ್ಲಿ ದೀರ್ಘ ಕಾಲ ಕೆಲಸದಲ್ಲಿ ತೊಡಗಿದ 7,45,000 ಮಂದಿ ಸಾವನ್ನಪ್ಪಿದ್ದು, ಇದಕ್ಕೆ ಪ್ರಮುಖ ಕಾರಣ ಪಾರ್ಶ್ವವಾಯು ಮತ್ತು ಹೃದಯ ಸಮಸ್ಯೆಯಾಗಿದೆ. 2000ದಲ್ಲಿ ಇದರ ಪ್ರಮಾಣ ಶೇ 29ರಷ್ಟಿದೆ.
ವಾರಕ್ಕೆ 70ಗಂಟೆಗಳ ಕೆಲಸ ಸಾಮಾನ್ಯವಲ್ಲ, ಇದನ್ನು ಶಿಫಾರಸು ಮಾಡುವುದಿಲ್ಲ ಎಂದು ಮ್ಯಾಕ್ಸ್ ಹೆಲ್ತ್ ಕೇರ್ನ ಎಂಡೋಕ್ರೈನಾಲೊಜಿ ಮತ್ತು ಡಯಾಬೀಟಿಸ್ನ ವೈದ್ಯ ಡಾ ಅಂಬರೀಶ್ ಮಿತಲ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
70 ಗಂಟೆಗಳ ದೀರ್ಘ ಕೆಲಸದ ಅವಧಿಯು ಕುಟುಂಬದಲ್ಲಿ ಚಿಂತೆ ಮತ್ತು ಮಕ್ಕಳಲ್ಲಿ ಆಟಿಸಂ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಮಕ್ಕಳ ತಜ್ಞೆ ಡಾ. ಮನಿನಿ ಎಕ್ಸ್ನಲ್ಲಿ ತಿಳಿಸಿದ್ದಾರೆ. ಈ ರೀತಿಯ ಕೆಲಸದ ಸಂಸ್ಕೃತಿ, ಕೆಲಸದ ವಿಸ್ತರಣೆ ಅವಧಿಯಿಂದ ಕುಟುಂಬಗಳು ಬಳಲುತ್ತದೆ. ಇತ್ತೀಚಿನ ದಿನಗಳಲ್ಲಿ ಆಟಿಸಂ ಹೊಂದಿರುವ ಮಕ್ಕಳ ಸಂಖ್ಯೆ ಏರಿಕೆಯಾಗಿದ್ದು, ಇದಕ್ಕೆ ಕಾರಣ ಪೋಷಕರು ತಮ್ಮ ಮಕ್ಕಳೊಂದಿಗೆ ಸಂಭಾಷಣೆ ನಡೆಸಲು ಬಿಡುವು ಸಿಗದೇ ಇರುವುದಾಗಿದೆ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ವೈದ್ಯ ಡಾ ಸಿದ್ಧಾರ್ಥ್ ಉನ್ನಿತನ್ ಇದೊಂದು ಹಾಸ್ಯಾಸ್ಪದ ಹೇಳಿಕೆ. ಈ ರೀತಿ ಕೆಲಸದ ಅವಧಿ ವಿಸ್ತರಣೆಯಿಂದಾಗಿ ನನ್ನ ಮನೋವೈದ್ಯೆ ಹೆಂಡತಿಗೆ ಆತಂಕ, ಒತ್ತಡದ ಕೇಸ್ಗಳು ಹೆಚ್ಚಾಗುತ್ತದೆ. ನನಗೆ ಬೆನ್ನು ನೋವಿನಂತ ಪ್ರಕರಣ ಹೆಚ್ಚಾಗುತ್ತದೆ ಎಂದಿದ್ದಾರೆ. ಅನೇಕ ವೈದ್ಯರು ಈ ದೀರ್ಘಾವಧಿ ಕೆಲಸವನ್ನು ಒತ್ತಾಯಿಸಬಾರದು. ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ವಾರಕ್ಕೆ 70 ತಾಸು ಕೆಲಸ: ಪರ-ವಿರೋಧ ಚರ್ಚೆ ಹುಟ್ಟು ಹಾಕಿದ ಇನ್ಫೊಸಿಸ್ ಮೂರ್ತಿ ಹೇಳಿಕೆ