ಮಾಸಿಕ ಋತುಚಕ್ರಕ್ಕೆ ಒಳಗಾಗುವ ಮಹಿಳೆ ಅಶುದ್ಧ ಎಂದು ಪರಿಗಣಿಸಿ, ಆಕೆಯನ್ನು ಹಲವು ದೈವಿಕ ಚಟುವಟಿಕೆಯಿಂದ ದೂರವಿಡಲಾಗುತ್ತದೆ. ಜೊತೆಗೆ ಆಕೆಗೆ ಅನೇಕ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಲಾಗುತ್ತದೆ. ಇಂದಿಗೂ ಕೂಡ ಅನೇಕ ದೇಗುಲಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಅನುಮತಿ ಇಲ್ಲದಿರುವುದನ್ನು ಕಾಣಬಹುದು. ಇದಕ್ಕೆ ವಿರುದ್ಧವಾಗಿ ಪುರುಷರಿಗೆ ದೇಗುಲಕ್ಕೆ ಪ್ರವೇಶ ನೀಡದ ಅನೇಕ ದೇಗುಲಗಳನ್ನು ನಾವು ಕಾಣಬಹುದಾಗಿದೆ. ಈ ದೇವಾಲಯಗಳಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಕುಮಾರಿ ಅಮ್ಮನ್ ದೇಗುಲ: ಕನ್ಯಾಕುಮಾರಿಯಲ್ಲಿರುವ ಈ ದೇಗುಲಕ್ಕೆ ವಿವಾಹಿತ ಪುರುಷರಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಶಿವನನ್ನು ಒಲಿಸಿಕೊಳ್ಳುವ ಉದ್ದೇಶದಿಂದ ಪಾರ್ವತಿ ಇಲ್ಲಿ ತಪಸ್ಸು ಮಾಡಿದಳು ಎಂಬ ನಂಬಿಕೆ ಇದೆ. ಈ ದೇಗುಲಕ್ಕೆ ಅವಿವಾಹಿತ ಮಹಿಳೆಯರು ಹೆಚ್ಚಾಗಿ ಭೇಟಿ ನೀಡುವುದು ವಿಶೇಷ. ಇಲ್ಲಿ ಕನ್ಯಾ ಪೂಜೆಯಂದು ಪುರುಷರು ಮಹಿಳೆಯರ ಪಾದ ತೊಳೆಯುತ್ತಾರೆ.
ಮಾತಾ ದೇವಾಲಯ: ಬಿಹಾರದ ಮುಜಾಫರ್ಪುರದಲ್ಲಿ ಈ ದೇಗುಲವಿದೆ. ಮಹಿಳೆಯರು ಯಾವುದೇ ಸಮಯದಲ್ಲಿ ಈ ದೇಗುಲಕ್ಕೆ ಪ್ರವೇಶ ಮಾಡಬಹುದು. ಅವರ ಋತುಚಕ್ರದ ಸಮಯದಲ್ಲಿ ಕೂಡ ಮಹಿಳೆಯರು ಮುಕ್ತವಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ದೇಗುಲದಲ್ಲಿ ಪುರುಷ ಅರ್ಚಕರಿಗೂ ಕೂಡ ಅವಕಾಶ ಇಲ್ಲ. ಪುರುಷರು ಪ್ರವೇಶ ದ್ವಾರದ ಹೊರಗೆ ನಿಂತು ದೇವರಿಗೆ ಸಮಸ್ಕರಿಸುತ್ತಾರೆ.
ಅಟ್ಟುಕಲ್ ಭಗವತಿ ದೇಗುಲ: ಕೇರಳದಲ್ಲಿ ಪ್ರಸಿದ್ಧವಾಗಿರುವ ಈ ದೇಗುಲದಲ್ಲಿ ವರ್ಷಕ್ಕೆ ಒಮ್ಮೆ ನಡೆಯುವ ಪೊಂಗಲ್ ಹಬ್ಬದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ. ಈ ಹಬ್ಬದ ಸಂಭ್ರಮದಲ್ಲಿ ಮಹಿಳೆಯರು ಭಾಗಿಯಾಗುವ ಸಂಖ್ಯೆ ಅಗಾಧವಾಗಿದ್ದು, ಇದು ಗಿನ್ನೆಸ್ ದಾಖಲೆಯನ್ನು ಪಡೆದಿದೆ. ಫೆಬ್ರವರಿ- ಮಾರ್ಚ್ನಲ್ಲಿ 10 ದಿನಗಳ ಕಾಲ ಇಲ್ಲಿ ಹಬ್ಬ ಜರುಗುತ್ತದೆ.
ಬ್ರಹ್ಮ ದೇವಾಲಯ: ರಾಜಸ್ಥಾನದಲ್ಲಿರುವ ಇರುವ ಈ ದೇಗುಲಕ್ಕೆ ಪುರುಷರಿಗೆ ಪ್ರವೇಶ ಇಲ್ಲ. ಪುರಾಣಗಳ ಪ್ರಕಾರ, ಬ್ರಹ್ಮ ಮತ್ತು ಸರಸ್ವತಿ ಹತ್ತಿರದ ನದಿ ಬಳಿ ಯಜ್ಞವನ್ನು ಮಾಡಲು ನಿರ್ಧರಿಸಿದರು. ಯಜ್ಞಕ್ಕೆ ಸರಸ್ವತಿ ತಡವಾಗಿ ಬಂದ ಕಾರಣ ಬ್ರಹ್ಮ ದೇವನು ದೇವಿ ಗಾಯತ್ರಿಯನ್ನು ಮದುವೆಯಾಗಿ ಪೂಜೆಯನ್ನು ಮುಗಿಸಿದರು. ಇದರಿಂದ ಕುಪಿತಳಾದ ಸರಸ್ವತಿ, ಈ ದೇಗುಲಕ್ಕೆ ಪ್ರವೇಶ ನೀಡಿದ ಪುರುಷರು ವೈವಾಹಿಕ ಜೀವನದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಶಾಪ ಇತ್ತಳು. ಇದೇ ಕಾರಣಕ್ಕೆ ಇಲ್ಲಿ ವಿವಾಹಿತ ಪುರುಷರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂಬ ನಂಬಿಕೆ ಇದೆ.
ಕಾಮಾಕ್ಯ ದೇಗುಲ: ಅಸ್ಸೋಂನ ಗುವಾಹಟಿಯ ಸುಪ್ರಸಿದ್ಧ ದೇಗುಲ ಇದಾಗಿದೆ. ದೇವಿ ಶಕ್ತಿ ಪೀಠದಲ್ಲಿ ಇದು ಪಂದು ಪ್ರಮುಖವಾಗಿದೆ. ಈ ದೇಗುಲಕ್ಕೆ ಕೂಡ ಕೆಲವು ತಿಂಗಳ ಕಾಲ ಪುರುಷರಿಗೆ ಪ್ರವೇಶ ನೀಡುವುದಿಲ್ಲ. ಮಹಿಳೆಯರು ತಮ್ಮ ಮಾಸಿಕ ಋತುಚಕ್ರದ ಸಮಯದಲ್ಲಿ ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಕೂಡ ಮಹಿಳಾ ಅರ್ಚಕರೇ ದೇವಿ ಪೂಜೆ ನೆರವೇರಿಸುತ್ತಾರೆ.
ಇದನ್ನೂ ಓದಿ: ಸೌಟು ಹಿಡಿಯೋ ಕೈಯಲ್ಲಿ ಟ್ರ್ಯಾಕ್ಟರ್ ಸ್ಟೇರಿಂಗ್.. ಕೃಷಿಯಲ್ಲಿ ರಾಮನಗರ ಶಾಂತಮ್ಮನ ಯಶೋಗಾಥೆ