ಪುರುಷರಿಗಿಂತ ಮಹಿಳೆಯರಿಗೆ ಆಸ್ತಮಾ ಹೆಚ್ಚು ಅಪಾಯಕಾರಿ. ಅದರಲ್ಲೂ ಪ್ರೌಢಾವಸ್ಥೆ, ಗರ್ಭಾವಸ್ಥೆ ಅಥವಾ ಋತುಚಕ್ರದ ಸಮಯದಲ್ಲಿ ಅಸ್ತಮಾ ಹೊಂದಿರುವ ಮಹಿಳೆಯರಲ್ಲಿ ಇದು ಮತ್ತಷ್ಟು ತೀವ್ರಗೊಂಡು ಮತ್ತು ಶ್ವಾಸಕೋಶದ ಸಮಸ್ಯೆಯಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯೊಂದು ಹೇಳಿದೆ.
ಬ್ರಿಟನ್ ಮೂಲದ ಸಂಸ್ಥೆ ಕೈಗೊಂಡ ಅಧ್ಯಯನವು ವೇಳೆ ಸ್ತ್ರೀ ಹಾರ್ಮೋನುಗಳು ಅಸ್ತಮಾವನ್ನು ಉಲ್ಬಣಗೊಳಿಸುವ ಬಗ್ಗೆ ಕಂಡುಕೊಂಡಿದೆ. ಅಲ್ಲದೇ, ಸಾಮಾನ್ಯವಾದ ಶ್ವಾಸಕೋಶದ ಸ್ಥಿತಿಯ ಬಗ್ಗೆ ಲಿಂಗವಾರು ಹೆಚ್ಚಿನ ಸಂಶೋಧನೆ ನಡೆಸಲು ಅಧ್ಯಯನ ದಾರಿ ಮಾಡಿಕೊಟ್ಟಿದೆ.
ಪ್ರಪಂಚದಾದ್ಯಂತ ಸುಮಾರು 136 ಮಿಲಿಯನ್ ಮಹಿಳೆಯರು ಅಸ್ತಮಾದಿಂದ ಬಳಲುತ್ತಿದ್ದಾರೆ. ಬ್ರಿಟನ್ನಲ್ಲಿ ಕಳೆದ ಐದು ವರ್ಷಗಳಲ್ಲಿ 2,300 ಪುರುಷರು ಮೃತಪಟ್ಟಿದ್ದಾರೆ. 5,100ಕ್ಕೂ ಹೆಚ್ಚು ಮಹಿಳೆಯರು ಈ ಸಮಸ್ಯೆಗೆ ತುತ್ತಾಗಿದ್ಧಾರೆ. ಸ್ತ್ರೀಯರ ಹಾರ್ಮೋನುಗಳ ಏರಿಳಿತಗಳು ಅಸ್ತಮಾ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು ಅಥವಾ ಮಾರಣಾಂತಿಕ ದಾಳಿಗೂ ಕಾರಣವಾಗಬಹುದು ಎಂದು ಅನೇಕ ಜನರಿಗೆ ತಿಳಿದಿಲ್ಲ ಎಂದು ವರದಿ ತಿಳಿದಿದೆ.
ಅಸ್ತಮಾವನ್ನು ಬಹಳ ಜನ ಕಡೆಗಣಿಸುತ್ತಾರೆ ಅಥವಾ ನಿರಾಕರಿಸುತ್ತಾರೆ. ಬಾಲ್ಯದಲ್ಲಿ ಹುಡುಗರಲ್ಲಿ ಖಾಯಿಲೆ ಅಧಿಕವಾಗಿ ಇರುತ್ತದೆ. ಆದಾಗ್ಯೂ, ಪ್ರೌಢಾವಸ್ಥೆಯ ನಂತರ ಅದು ವ್ಯತಿರಿಕ್ತವಾಗುತ್ತಾ ಹೋಗುತ್ತದೆ. ಆದರೆ, ಮಹಿಳೆಯರಲ್ಲಿ ಇದು ಹೆಚ್ಚಾಗುತ್ತಲೇ ಹೋಗಿ ಮತ್ತಷ್ಟು ತೀವ್ರವಾಗಿರುತ್ತದೆ ಎಂದು ಅಸ್ತಮಾ ಮತ್ತು ಶ್ವಾಸಕೋಶದ ಸಂಶೋಧನೆ ಮತ್ತು ಆವಿಷ್ಕಾರದ ನಿರ್ದೇಶಕ ಡಾ.ಸಮಂತಾ ವಾಕರ್ ಹೇಳಿದ್ದಾರೆ.
ಮಹಿಳೆಯರು ಇದರಿಂದ ಏಕೆ ಆಸ್ಪತ್ರೆಗೆ ದಾಖಲಾಗುತ್ತಾರೆ ಮತ್ತು ಸಾವನ್ನಪ್ಪುತ್ತಾರೆ. ಅಲ್ಲದೇ, ಇದಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ಮಹಿಳೆಯರಿಗೆ ಹೇಗೆ ಸಹಾಯ ಮಾಡಬಲ್ಲವು ಎಂಬ ಬಗ್ಗೆ ಸಂಶೋಧನೆ ಅಗತ್ಯ ಎಂದು ಎಡಿನ್ಬರ್ಗ್ ವಿಶ್ವವಿದ್ಯಾನಿಲಯದ ಸಂಶೋಧಕ ಮೊಮ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಾಕ್ಡೌನ್ ವೇಳೆ ಹೆಚ್ಚಿದ ಹೆಚ್ಐವಿ ಸೋಂಕು: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ