ದೇಶಾದ್ಯಂತ ಅದ್ಧೂರಿಯಿಂದ ಆಚರಿಸುವ ಹಬ್ಬ 'ದೀಪಾವಳಿ'ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಬ್ಬವನ್ನು ಹಣತೆ ಬೆಳಗಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆ. ಆದರೆ, ಪಟಾಕಿ ಸಿಡಿಸುವಾಗ ನಮ್ಮ ಕಣ್ಣುಗಳ ಸುರಕ್ಷತೆ ವಿಚಾರದಲ್ಲಿ ಜಾಗರೂಕರಾಗಿರಬೇಕು. ಸಂತೋಷದಿಂದ ಆಚರಿಸುವ ಹಬ್ಬ ಪಟಾಕಿಯ ವಿಚಾರದಲ್ಲಿ ನಾವು ತೋರುವ ನಿರ್ಲಕ್ಷ್ಯದಿಂದಾಗಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಪಟಾಕಿ ಹೊತ್ತಿಸುವಾಗ ದುರಂತ ಸಂಭವಿಸಿದರೆ ಏನು ಮಾಡಬೇಕು ಎಂದು ಭಾರತದ ಆರ್ಬಿಸಿಟ್‌ನ ಕಂಟ್ರಿ ಡೈರೆಕ್ಟರ್ ಡಾ. ರಿಷಿ ರಾಜ್ ಬೋರಾಹ್ ಸಲಹೆ ನೀಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳು; ಪರಿಸರ ಸ್ನೇಹಿ ಪಟಾಕಿಗಳನ್ನು ಆರಿಸುವುದು, ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸುವುದು, ಪಟಾಕಿ ಸಿಡಿಸುವಾಗ ಕೊಂಚ ಅಂತರವನ್ನು ಕಾಪಾಡಿಕೊಳ್ಳುವುದು, ಮಕ್ಕಳನ್ನು ಪಟಾಕಿ ಸಿಡಿಸುವ ಜಾಗದಿಂದ ದೂರ ನಿಲ್ಲಿಸಿವುದು. ಇಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಕೆಲವೊಮ್ಮೆ ನಾವೆಷ್ಟೇ ಮುಂಜಾಗ್ರತೆ ಮಾಡಿದರೂ ಅಪಘಾತಗಳು ಸಂಭವಿಸುವ ಸಾಧ್ಯತೆಯಿರುತ್ತದೆ. ಹೀಗಾಗಿ ಪಟಾಕಿ ಸಿಡಿಸುವಾಗ ನೀವು ಅಥವಾ ನಿಮ್ಮ ಸುತ್ತಮುತ್ತಲಿನ ಯಾರದ್ದಾದರೂ ಕಣ್ಣಿಗೆ ಗಾಯವಾದರೆ, ತಕ್ಷಣ ಈ ಕ್ರಮಗಳನ್ನು ಅನುಸರಿಸಿ.
ಶಾಂತವಾಗಿರಿ; ಪಟಾಕಿಯಿಂದ ಕಣ್ಣಿಗೆ ಸಮಸ್ಯೆ ಆದ ತಕ್ಷಣ ನಿಮಗೆ ಸಾಧ್ಯವಾದಷ್ಟು ಶಾಂತವಾಗಿರುವುದು ಬಹಳ ಮುಖ್ಯ. ಪ್ಯಾನಿಕ್ ಆಗಬೇಡಿ. ದೀರ್ಘ ಉಸಿರನ್ನು ತೆಗೆದುಕೊಳ್ಳಿ. ನಿಮ್ಮ ಶಾಂತತೆಯಲ್ಲಿ ಕಾಪಾಡಿಕೊಳ್ಳಿ. ಹೆಚ್ಚು ಕೂಲ್ ಆಗಿರಲು ಪ್ರಯತ್ನಿಸಿ.
ಕಣ್ಣನ್ನು ಉಜ್ಜಬೇಡಿ; ಈ ಸಂದರ್ಭದಲ್ಲಿ ಕಣ್ಣನ್ನು ಮುಟ್ಟುವುದು ಅಥವಾ ಉಜ್ಜುವುದನ್ನು ಮಾಡಬೇಡಿ. ಏಕೆಂದರೆ ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.
ಕಣ್ಣುಗಳನ್ನು ತೊಳೆಯಿರಿ; ಕಣ್ಣಿನಲ್ಲಿ ಏನಾದರೂ ಕಣಗಳು ಅಥವಾ ಹುಡಿಗಳು ಕಾಣಿಸುತ್ತಿದ್ದರೆ ಶುದ್ಧ ನೀರಿನಿಂದ ನಿಧಾನವಾಗಿ ತೊಳೆಯಿರಿ. ಲಭ್ಯವಿದ್ದರೆ ಕ್ರಿಮಿನಾಶಕ ಲವಣಯುಕ್ತ ದ್ರಾವಣವನ್ನು (sterile saline) ಬಳಸಿ. ಆದರೆ ಈ ವೇಳೆ ಟ್ಯಾಪ್ ನೀರು ಬಳಸುವುದನ್ನು ತಪ್ಪಿಸಿ. ಇದು ಕಣ್ಣನ್ನು ಮತ್ತಷ್ಟು ಕೆರಳಿಸುವ ಸಾಧ್ಯತೆಯಿದೆ.
ಗಾಯಗೊಂಡ ಕಣ್ಣನ್ನು ರಕ್ಷಿಸಿ; ಗಾಯಗೊಂಡಿರುವ ಕಣ್ಣನ್ನು ಸ್ವಚ್ಛವಾದ, ಮೃದುವಾದ ಹತ್ತಿ ಬಟ್ಟೆಯಿಂದ ಮುಚ್ಚುವ ಮೂಲಕ ರಕ್ಷಿಸಿ. ಇದು ಮತ್ತಷ್ಟು ತೊಂದರೆಯನ್ನು ತಡೆಗಟ್ಟುತ್ತದೆ. ಕಣ್ಣಿನ ಚಲನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವೈದ್ಯರ ಬಳಿ ತೆರಳಿ; ಕಣ್ಣಿಗೆ ಗಾಯವಾದಾಗ ವೈದ್ಯರ ಬಳಿ ಹೋಗುವುದು ಸೂಕ್ತ. ಚಿಕಿತ್ಸೆ ನೀಡದೇ ಬಿಟ್ಟರೆ ಸಣ್ಣ ಗಾಯಗಳು ದೃಷ್ಟಿಗೆ ಪರಿಣಾಮ ಬೀರಬಹುದು. ಸಂಪೂರ್ಣ ಪರೀಕ್ಷೆ ಮತ್ತು ಸರಿಯಾದ ಚಿಕಿತ್ಸೆಗಾಗಿ ಕಣ್ಣಿನ ತಜ್ಞರನ್ನು ಸಂಪರ್ಕಿಸಿ ಅಥವಾ ಹತ್ತಿರದ ಆಸ್ಪತ್ರೆಗೆ ಕೂಡಲೇ ಭೇಟಿ ನೀಡಿ, ಪರೀಕ್ಷಿಸಿಕೊಳ್ಳಿ.
ಪಟಾಕಿ ಸಿಡಿಸುವಾಗ ಕಣ್ಣಿಗೆ ಗಾಯವಾದಲ್ಲಿ ಏನು ಮಾಡಬೇಕೆಂದು ತಿಳಿಯುವುದು ಎಷ್ಟು ಮುಖ್ಯವೋ, ಏನು ಮಾಡಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕೂಡ ಅಷ್ಟೇ ಅಗತ್ಯ. ಹಾಗಾಗಿ ಈ ತಪ್ಪುಗಳನ್ನು ನೀವು ಮಾಡಬೇಡಿ..
ಗಾಯವನ್ನು ನಿರ್ಲಕ್ಷಿಸಬೇಡಿ; ಕಣ್ಣಿಗೆ ಸಣ್ಣ ಗಾಯ ಆಗಿದೆ. ಯಾವುದೇ ನೋವಿಲ್ಲ ಎಂದು ತಳ್ಳಿ ಹಾಕಬೇಡಿ. ಮುಂದಾಗುವ ಪರಿಣಾಮಗಳನ್ನು ತಡೆಗಟ್ಟಲು ಮತ್ತು ದೃಷ್ಟಿಯನ್ನು ಕಾಪಾಡಿಕೊಳ್ಳಲು ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಗತ್ಯ.
ಸ್ವಯಂ ಔಷಧಿ ಬೇಡ; ಯಾವುದೇ ಗಾಯ ಆಗಿಲ್ಲ ಎಂದು ತಿಳಿದುಕೊಂಡು ವೈದ್ಯರ ಮಾರ್ಗದರ್ಶನವಿಲ್ಲದೇ ಕಣ್ಣಿನ ಹನಿಗಳನ್ನು ಬಳಸುವುದನ್ನು ತಪ್ಪಿಸಿ. ಯಾವುದೇ ಮುಲಾಮುಗಳನ್ನು ಹಚ್ಚಬೇಡಿ. ಇವು ಕೆಲವೊಮ್ಮೆ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಇನ್ನು ಕಣ್ಣಿನಲ್ಲಿ ಯಾವುದಾದರೂ ವಸ್ತು ಕಂಡರೆ, ನೀವೇ ತೆಗೆದುಹಾಕಲು ಪ್ರಯತ್ನಿಸಬೇಡಿ. ಇದು ಮತ್ತಷ್ಟು ಹಾನಿ ಉಂಟುಮಾಡಬಹುದು. ಬದಲಾಗಿ ಆಸ್ಪತ್ರೆಗೆ ತೆರಳುವುದು ಸೂಕ್ತ.
ಇದನ್ನೂ ಓದಿ: ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣ ಹೆಚ್ಚಳ: ಪತ್ತೆ ಹೇಗೆ? ರೋಗ ಲಕ್ಷಣಗಳು ಗೊತ್ತೇ?