ಹೈದರಾಬಾದ್, ತೆಲಂಗಾಣ: ನಮ್ಮ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ಪ್ರಮುಖವಾಗಿ ಆಹಾರವು ಅತಿಮುಖ್ಯ ಅಂಶಗಳಲ್ಲೊಂದು. ನೀವು ಸರಿಯಾದ ಆಹಾರವನ್ನು ಸೇವಿಸುವ ಗುಣ ಅಥವಾ ಅಭ್ಯಾಸ ಹೊಂದಿದ್ದರೆ, ಅರ್ಧ ರೋಗಗಳನ್ನ ಗೆದ್ದಂತೆ. ಅಷ್ಟೇ ಅಲ್ಲ ಬಹುತೇಕ ಕಾಯಿಲೆಗಳನ್ನು ತಡೆಯುವ ಶಕ್ತಿಯನ್ನು ಹೊಂದಿರುತ್ತೀರಾ ಎಂದೇ ಅರ್ಥ. ಸಸ್ಯಾಹಾರಿ ಆಹಾರವು ಅನೇಕ ರೋಗಗಳನ್ನು ತಡೆಯುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಸಂಪೂರ್ಣವಾಗಿ ಸಸ್ಯಾಹಾರವನ್ನು ಸೇವಿಸುವವರು ಪೌಷ್ಟಿಕಾಂಶದ ಕೊರತೆ ತಪ್ಪಿಸಲು ಸರಿಯಾದ ಕಾಳಜಿ ವಹಿಸಬೇಕಾಗಿರುವುದು ಅತ್ಯಗತ್ಯವಾಗಿದೆ.
ಸಸ್ಯಾಹಾರವು ತುಂಬಾ ಆರೋಗ್ಯಕರ ಎಂದು ಹೇಳಲಾಗುತ್ತದೆ. ಆದರೆ ಮಾಂಸದ ಮಟ್ಟದಲ್ಲಿ ಪ್ರೋಟೀನ್‌ಗಳನ್ನು ಹೊಂದಿರುವುದಿಲ್ಲ ಎಂದು ಅನೇಕ ಜನರಲ್ಲಿ ಅಭಿಪ್ರಾಯವಿದೆ. ಸಸ್ಯಾಹಾರಿಗಳು ಪ್ರೋಟೀನ್ ಜೊತೆಗೆ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆಯಲು ಕಾಳುಗಳು ಮತ್ತು ಧಾನ್ಯಗಳಂತಹ ವಿವಿಧ ಆಹಾರಗಳನ್ನು ಬಳಕೆ ಮಾಡುತ್ತಾರೆ. ಮಾಂಸಹಾರ ಬದಲು ನಾವು ಯಾವರೀತಿಯ ಸಸ್ಯಾಹಾರಿ ಆಹಾರ ಸೇವಿಸಿದ್ರೆ ಪೋಷಕಾಂಶಗಳು ದೊರೆಯುತ್ತವೆ ಎಂಬುದರ ಕುರಿತು ತಿಳಿದುಕೊಳ್ಳಬೇಕು.
ಬೇಳೆಕಾಳುಗಳು, ತರಕಾರಿಗಳು, ಕ್ಯಾರೆಟ್, ಅಣಬೆ, ಲೆಟಿಸ್ ಮುಂತಾದ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಮೊಟ್ಟೆ ತಿನ್ನುವವರು ಅವುಗಳನ್ನು ಪ್ರೋಟೀನ್‌ಗಾಗಿ ತೆಗೆದುಕೊಳ್ಳಬಹುದು. ಸಸ್ಯಾಹಾರಿಗಳು ಧಾನ್ಯಗಳು, ಬೇಳೆಕಾಳುಗಳು, ಬೀಜಗಳು ಮತ್ತು ತರಕಾರಿಗಳಂತಹ ಆಹಾರಗಳ ಮೂಲಕ ತಮ್ಮ ಅಗತ್ಯ ಕ್ಯಾಲೋರಿಗಳು ಮತ್ತು ಪೋಷಕಾಂಶಗಳನ್ನು ಪಡೆಯಬಹುದು. ಕೆಲವು ಸಸ್ಯಾಹಾರಿಗಳು ಹಾಲು ಮತ್ತು ಮೊಟ್ಟೆಗಳನ್ನು ತಿನ್ನುತ್ತಾರೆ. ಇವುಗಳನ್ನು ಸೇವಿಸುವವರಿಗೂ ಮಾಂಸಾಹಾರಿಗಳಷ್ಟೇ ಪ್ರಮಾಣದ ಪೋಷಕಾಂಶಗಳು ಲಭಿಸುತ್ತವೆ. ಸಸ್ಯಾಹಾರಿಗಳು ತಮ್ಮ ಆಹಾರದಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು.
ಲ್ಯಾಕ್ಟೋ ವೆಜಿಟೇರಿಯನ್, ಓವೋ ವೆಜಿಟೇರಿಯನ್, ಪ್ಯೂರ್ ವೆಜಿಟೇರಿಯನ್, ವೆಗನ್ ಹೀಗೆ ವಿವಿಧ ರೀತಿಯ ಸಸ್ಯಾಹಾರಿಗಳಿವೆ. ಲ್ಯಾಕ್ಟೋ ಸಸ್ಯಾಹಾರಿಗಳು ಅವರು ಇಷ್ಟಪಡುವ ಯಾವುದೇ ಡೈರಿ ಉತ್ಪನ್ನಗಳನ್ನು ಸೇವಿಸುತ್ತಾರೆ. ಓವೋ ಸಸ್ಯಾಹಾರಿಗಳು ಮೊಟ್ಟೆಗಳನ್ನು ತಿನ್ನುತ್ತಾರೆ. ಸಸ್ಯಾಹಾರಿಗಳು ತರಕಾರಿಗಳು ಮತ್ತು ಸಸ್ಯಗಳಿಂದ ಉತ್ಪತ್ತಿಯಾಗುವ ಆಹಾರವನ್ನು ಮಾತ್ರ ತಿನ್ನುತ್ತಾರೆ. ಅವರು ಡೈರಿ ಉತ್ಪನ್ನಗಳನ್ನು ಸಹ ತೆಗೆದುಕೊಳ್ಳುವುದಿಲ್ಲ. ಸಸ್ಯಾಹಾರಿಗಳು ತಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಸಮತೋಲಿತ ಆಹಾರವನ್ನು ಸೇವಿಸಬೇಕು ಎಂದು ಖ್ಯಾತ ಆಹಾರ ತಜ್ಞೆ ಡಾ.ಶ್ರಾವ್ಯ ಹೇಳುತ್ತಾರೆ.
ಸಸ್ಯಾಹಾರಿ ಡಯಟ್ನಿಂದ ದೂರವಿರಿ : ಲ್ಯಾಕ್ಟೋ ಸಸ್ಯಾಹಾರಿಗಳು ಪನೀರ್‌ನಂತಹ ಡೈರಿ ಉತ್ಪನ್ನಗಳನ್ನು ಸೇವಿಸಿದರೆ ಹೆಚ್ಚಿನ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಳನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ಹೆಚ್ಚು ಮೊಟ್ಟೆಗಳನ್ನು ಸೇವಿಸುವ ಮತ್ತು ಡೈರಿ ಉತ್ಪನ್ನಗಳನ್ನು ತ್ಯಜಿಸುವ ಓವೋ ಸಸ್ಯಾಹಾರಿಗಳು ತಮ್ಮ ಆಹಾರದಲ್ಲಿ ಎಲ್ಲ ರೀತಿಯ ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ಆಗಾಗ್ಗೆ ಹಣ್ಣುಗಳನ್ನು ತಿನ್ನಲು ಸಹ ಸಲಹೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ ಡಾ.ಶ್ರಾವ್ಯ.
ಸಸ್ಯಾಹಾರಿಗಳು ತೂಕವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೇ ಹೆಚ್ಚು ಕಾಲ ಬದುಕುತ್ತಾರೆ. ಸಸ್ಯಾಹಾರಿಗಳು ಕಡಿಮೆ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿದ್ದಾರೆ. ಮಾಂಸಾಹಾರಿಗಳಿಗೆ ಹೋಲಿಸಿದರೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ಕಡಿಮೆ ಎನ್ನಬಹುದು. ಸಸ್ಯಾಹಾರಿಗಳಿಗೆ ಕ್ಯಾನ್ಸರ್ ಮತ್ತು ದೀರ್ಘಕಾಲದ ಕಾಯಿಲೆಗಳು ಮತ್ತು ಹೃದ್ರೋಗದ ಅಪಾಯ ಕಡಿಮೆ ಎಂದು ಅಧ್ಯಯನಗಳು ತೋರಿಸಿ ಕೊಟ್ಟಿವೆ.
ನಾವು ಹೆಚ್ಚು ಹಣ್ಣುಗಳು, ತರಕಾರಿಗಳು ಮತ್ತು ಕಚ್ಚಾ ಧಾನ್ಯಗಳನ್ನು ಸೇವಿಸಿದಾಗ, ನಮ್ಮ ಆರೋಗ್ಯಕ್ಕೆ ಉತ್ತಮವಾದ ನಿರೋಧಕಗಳು ಮತ್ತು ಸಾಕಷ್ಟು ಫೈಬರ್ ಸಿಗುತ್ತದೆ. ಸಸ್ಯಾಹಾರವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಾಂಸಾಹಾರ ಸೇವಿಸುವವರೂ ಸಹ ಇದನ್ನು ಕಡಿಮೆ ಮಾಡುವುದರಿಂದ ಬೊಜ್ಜು, ಟೈಪ್-2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಪಾರಾಗಬಹುದು ಎಂದು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ.
ಇವುಗಳನ್ನು ಆಗಾಗ ಸೇವಿಸಿ: ಸಸ್ಯಾಹಾರಿ ಆಹಾರದ ಡಯಟ್ ಯಾರು ಅನುಸರಿಸುತ್ತಾರೋ ಅವರು ತಮ್ಮ ಆಹಾರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕು. ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ದೇಹಕ್ಕೆ ಒದಗಿಸಬೇಕು. ಬೀಜಗಳನ್ನು ಹೆಚ್ಚು ತಿನ್ನಬೇಕು. ಜೊತೆಗೆ ವಿಟಮಿನ್ ಸಿ ಇರುವ ಆಹಾರಗಳನ್ನು ಸೇವಿಸಿ. ಶುಂಠಿ, ಬೆಳ್ಳುಳ್ಳಿ ಮತ್ತು ತುಳಸಿಯಂತಹ ವಸ್ತುಗಳನ್ನು ಸಹ ತೆಗೆದುಕೊಳ್ಳಬೇಕು. ಇದರಿಂದ ಮಳೆಗಾಲದಲ್ಲಿ ಸೋಂಕುಗಳ ಬಾಧೆಯಿಂದ ಪಾರಾಗಬಹುದು ಎಂದು ವೈದ್ಯೆ ಶ್ರಾವ್ಯಾ ಸಲಹೆ ನೀಡಿದ್ದಾರೆ.
ಸಸ್ಯಾಹಾರಿಗಳು ತಾವು ಸೇವಿಸುವ ಆಹಾರವು ಆರೋಗ್ಯಕರವಾಗಿದೆಯೋ ಅಥವಾ ಇಲ್ಲವೋ ಎಂಬುದು ಖಚಿತಪಡಿಸಿಕೊಳ್ಳಬೇಕು. ಅದು ಸಸ್ಯಾಹಾರಿಯಾಗಿರಲಿ ಅಥವಾ ಇಲ್ಲದಿರಲಿ ಫ್ರೆಂಚ್ ಫ್ರೈಗಳಂತಹ ಎಣ್ಣೆಯನ್ನು ಹೆಚ್ಚು ಬಳಸುವ ಆಹಾರಗಳನ್ನು ತಿನ್ನುವುದು ಅಪಾಯಕಾರಿ. ಸಸ್ಯಾಹಾರಿ ಆಹಾರದಿಂದ ಪ್ರಯೋಜನ ಪಡೆಯಲು ಸಂಸ್ಕರಿಸಿದ ಆಹಾರಗಳಿಂದ ದೂರವಿರಬೇಕು. ನಮ್ಮ ದೇಹದಲ್ಲಿ ಪ್ರೋಟೀನ್ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಅದಕ್ಕಾಗಿಯೇ ನೀವು ಪ್ರತಿ ಸೇವಿಸುವ ಆಹಾರದಲ್ಲಿ ಪ್ರೋಟೀನ್ ಇರುವಂತೆ ನೋಡಿಕೊಳ್ಳಬೇಕು. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ತಮ್ಮ ಆಹಾರದಲ್ಲಿ ಕಡಿಮೆ ಇರುವಂತೆ ನೋಡಿಕೊಳ್ಳಬೇಕು.
ಈ ಮುನ್ನೆಚ್ಚರಿಕೆಗಳು ಅತ್ಯಗತ್ಯ. ಆರೋಗ್ಯಕರ ಸಸ್ಯಾಹಾರವನ್ನು ಹೊಂದಲು ಸಕ್ಕರೆ ಆಹಾರಗಳು, ಸಿಹಿತಿಂಡಿಗಳು ಮತ್ತು ಸಂಸ್ಕರಿಸಿದ ಧಾನ್ಯಗಳ ಸೇವನೆಯನ್ನು ಕಡಿಮೆ ಮಾಡಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹಣ್ಣಿನ ರಸದ ಬದಲು ಹಣ್ಣುಗಳನ್ನು ತಿನ್ನಲು ಹೇಳುತ್ತಾರೆ. ಸಸ್ಯ ಮೂಲದ ಆಹಾರವನ್ನು ಸೇವಿಸುವ ಮೂಲಕ ಪೌಷ್ಟಿಕಾಂಶದ ಕೊರತೆಯನ್ನು ತಪ್ಪಿಸಬಹುದು. ಅಗತ್ಯವಿದ್ದರೆ, ವೈದ್ಯರ ಸಲಹೆಯ ಮೇರೆಗೆ ಪೂರಕ ಆಹಾರಗಳನ್ನು ತೆಗೆದುಕೊಳ್ಳಲು ಒಳಿತು.
ಓದಿ: ದಿನಕ್ಕೆ ಕನಿಷ್ಠ 4 ಸಾವಿರ ಹೆಜ್ಜೆ ಹಾಕಿ... ಸಾವನ್ನು ತಡೆ ಗಟ್ಟಿ..!!