ನವದೆಹಲಿ: ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಕಳೆದೊಂದು ವರ್ಷದಿಂದ ಏರಿಕೆ ಕಾಣುತ್ತಿದ್ದು, ಈ ಪೈಕಿ ಅತಿ ಹೆಚ್ಚು ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ತಿಳಿಸಿದೆ. ರಾಜ್ಯಸಭೆಯಲ್ಲಿ ಮಾಹಿತಿ ನೀಡಿರುವ ಆರೋಗ್ಯ ಸಚಿವಾಲಯ, 2022ರಲ್ಲಿ 14,61,427 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾದರೆ, 2021ರಲ್ಲಿ 14,26,447 ಪ್ರಕರಣಗಳು, 2020ರಲ್ಲಿ 13,92,179 ಪ್ರಕರಣಗಳು ದಾಖಲಾಗಿದೆ ಎಂದು ಅಂಕಿಅಂಶ ಒದಗಿಸಿದೆ.
ಇದರಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇಲ್ಲಿ ಕಳೆದೆರಡು ವರ್ಷದಿಂದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. 2020ರಲ್ಲಿ 2.01 ಲಕ್ಷ ಪ್ರಕರಣಗಳು ದಾಖಲಾದರೆ, 2022ರಲ್ಲಿ 2.10 ಲಕ್ಷ ಪ್ರಕರಣಗಳು ಕಂಡುಬಂದಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ. ಇಲ್ಲಿ 1,21,717 ಪ್ರಕರಣ ವರದಿಯಾಗಿದೆ. ಪಶ್ಚಿಮ ಬಂಗಾಳ 1,13,581, ಬಿಹಾರ 1,09,274 ಮತ್ತು ತಮಿಳುನಾಡಿನಲ್ಲಿ 93,536 ಪ್ರಕರಣಗಳು ದಾಖಲಾಗಿವೆ.
ಸಾವಿನ ಸಂಖ್ಯೆಯಲ್ಲೂ ಯುಪಿ ಮೊದಲು: ಕ್ಯಾನ್ಸರ್ ರೋಗಿಗಳ ಸಾವಿನ ಪ್ರಮಾಣದಲ್ಲೂ ಉತ್ತರ ಪ್ರದೇಶವೇ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಬಿಹಾರ ಇದೆ. ಈ ದತ್ತಾಂಶವನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕ್ಯಾನ್ಸರ್ ರೆಜಿಸ್ಟ್ರಿಯಿಂದ ಪಡೆಯಲಾಗಿದೆ. ತಜ್ಞರು ಹೇಳುವಂತೆ, ಕ್ಯಾನ್ಸರ್ ಪ್ರಕರಣಗಳು ಅಧಿಸೂಚಿತವಾಗಿದ್ದು 15 ರಾಜ್ಯದಲ್ಲಿ ಇದರ ಪ್ರಮಾಣ ಕಡಿಮೆ ಇದೆ ಎಂದಿದ್ದಾರೆ.
ಸರ್ಕಾರದಿಂದ ಅಗತ್ಯ ಕ್ರಮ: ಕ್ಯಾನ್ಸರ್ ಪೀಡಿತ ರೋಗಿಗೆ ಆರೋಗ್ಯ ಕಾಳಜಿ ಸಂಬಂಧ ಸಹಾಯ ನೀಡಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಕ್ಯಾನ್ಸರ್‌ಪೀಡಿತರಿಗೆ ಚಿಕಿತ್ಸೆ ಉಚಿತವಾಗಿದೆ. ಇಲ್ಲವೇ ಇದು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿದೆ. ಅಲ್ಲದೇ, ಆಯುಷ್ಮಾನ್ ಭಾರತ್ ಪ್ರಧಾನಿ ಮಂತ್ರಿ ಜನ್ ಆರೋಗ್ಯ ಯೋಜನೆಯಡಿಯಲ್ಲಿಯೂ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧ ಪರಿಯೋಜನಾದ ಅಡಿಯಲ್ಲಿ ಎಲ್ಲ ರಾಜ್ಯದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಜೆನೆರಿಕ್ ಔಷಧಿಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: Lung cancer: ಭಾರತದಲ್ಲಿ ಸಾವಿನ ದರ ಹೆಚ್ಚಿಸುತ್ತಿದೆ ಶ್ವಾಸಕೋಶದ ಕ್ಯಾನ್ಸರ್: ಆರಂಭದಲ್ಲೇ ಮಾಡಬೇಕಿದೆ ಪತ್ತೆ