ಪರ್ಥ್ (ಆಸ್ಟ್ರೇಲಿಯಾ) : ಇನ್ಸ್ಟಾಗ್ರಾಮ್, ಟಿಕ್ ಟಾಕ್ ಮತ್ತು ಫೇಸ್ ಬುಕ್ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ವೇಪಿಂಗ್ ಮಾಡುವುದನ್ನು ಉತ್ತೇಜಿಸುವ ರೀತಿಯಲ್ಲಿ ವಿಡಿಯೋಗಳನ್ನು ತೋರಿಸುತ್ತಿವೆ. ಇ-ಸಿಗರೇಟ್ ಸೇದುವುದು ಸಾಮಾಜಿಕವಾಗಿ ಒಪ್ಪಿಕೊಂಡ ಚಟವಾಗಿದೆ ಎನ್ನುವ ರೀತಿಯಲ್ಲಿ ಈ ಪ್ಲಾಟ್ಫಾರ್ಮ್ಗಳು ಬಿಂಬಿಸುತ್ತಿರುವುದು ಕಂಡು ಬರುತ್ತಿದೆ. ಆಸ್ಟ್ರೇಲಿಯಾದಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ತೋರಿಸುವುದನ್ನು ನಿಷೇಧಿಸಿ ದಶಕಗಳೇ ಆಗಿ ಹೋಗಿರುವುದು ಗಮನಾರ್ಹ.
ಆದರೆ ಇ-ಸಿಗರೇಟ್ಗಳಿಗೆ ಈ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ವ್ಯಾಪಕ ಉತ್ತೇಜನ ನೀಡುತ್ತಿರುವುದು ಕಳವಳಕಾರಿಯಾಗಿದೆ. ಧೂಮಪಾನ ಆರೋಗ್ಯಕ್ಕೆ ಹಾನಿಕರವೆಂಬುದನ್ನು ಜನತೆಗೆ ತಿಳಿಸಲು ಕಳೆದ ಅನೇಕ ದಶಕಗಳಿಂದ ಮಾಡಲಾಗುತ್ತಿರುವ ಪ್ರಯತ್ನಗಳು ಇನ್ನು ಮುಂದೆ ನಿರರ್ಥಕವಾಗಲಿವೆ. ಬಹುತೇಕ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳ ನೀತಿ ನಿಯಮಗಳ ಪ್ರಕಾರ ಇ-ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವಂತಿಲ್ಲ. ಆದಾಗ್ಯೂ ಈ ನಿಯಮಗಳನ್ನು ಕಡೆಗಣಿಸಿ ಈ - ಸಿಗರೇಟ್ ಒಳ್ಳೆಯದು ಎನ್ನುವ ರೀತಿಯಲ್ಲಿ ಪ್ರಚಾರ ನೀಡಲಾಗುತ್ತಿದೆ.
ಪ್ರಚೋದಕ ವಿಡಿಯೋಗಳಿಂದ ವೇಪಿಂಗ್ ಹೆಚ್ಚಳ: ಆಸ್ಟ್ರೇಲಿಯಾ ಸೇರಿದಂತೆ ಜಾಗತಿಕವಾಗಿ ಯುವ ಸಮುದಾಯದಲ್ಲಿ ಇ-ಸಿಗರೇಟ್ ಬಳಕೆ ವೇಗವಾಗಿ ಬೆಳೆಯುತ್ತಿದೆ. ಆದರೆ ಇ-ಸಿಗರೇಟ್‌ಗಳಿಂದ ಉಂಟಾಗುವ ಆರೋಗ್ಯ ಹಾನಿಯ ಬಗ್ಗೆ ತಿಳಿದೇ ಇದೆ. ವೇಪಿಂಗ್ ಬಗ್ಗೆ ಪ್ರಚೋದನಕಾರಿ ಸಾಮಾಜಿಕ ಮಾಧ್ಯಮ ಮೆಸೇಜುಗಳು ವಿಶೇಷವಾಗಿ ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಬಳಸುವ ಯುವ ಜನರ ಮೇಲೆ ಪರಿಣಾಮ ಬೀರಬಹುದು. ಕೆಲವು ಸಂದರ್ಭಗಳಲ್ಲಿ, ಈ ಸಂದೇಶಗಳು ಹದಿಹರೆಯದವರನ್ನು ಸ್ಪಷ್ಟವಾಗಿ ದಾರಿ ತಪ್ಪಿಸುತ್ತವೆ ಎಂಬುದು ಖಚಿತ.
ಇ-ಸಿಗರೆಟ್‌ಗಳನ್ನು ಒಳಗೊಂಡಿರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ವೀಕ್ಷಿಸುವ ಯುವಜನರು ಇ-ಸಿಗರೇಟ್‌ಗಳ ಬಗ್ಗೆ ಮೆಚ್ಚುಗೆ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ತೋರಿಸಿದೆ. ಇ-ಸಿಗರೇಟ್ ಜಾಹೀರಾತು ಮತ್ತು ಕಂಟೆಂಟ್ ಕ್ರಿಯೇಟರ್ಸ್ ರಚಿಸಿದ ವಿಷಯ ಎರಡರಲ್ಲೂ ಇದು ನಿಜವಾಗಿದೆ. ಇ-ಸಿಗರೇಟ್ ಕಂಪನಿಗಳಿಗೆ ಕಂಟೆಂಟ್ ಕ್ರಿಯೇಟರ್ಸ್ ಪರಿಣಾಮಕಾರಿಯಾಗಿ ಮಾರ್ಕೆಟಿಂಗ್ ಕೆಲಸವನ್ನು ಮಾಡುತ್ತಿದ್ದಾರೆ.
ಆರೋಗ್ಯಕ್ಕೆ ಹಾನಿ ಇಲ್ಲ ಎನ್ನುವ ಟಿಕ್ಟಾಕ್ ಕುತಂತ್ರ: ಟಿಕ್ಟಾಕ್ ಯಾವ ರೀತಿಯಲ್ಲಿ ಇ-ಸಿಗರೇಟ್‌ಗಳ ಬಳಕೆಗೆ ಪ್ರಚೋದನೆ ನೀಡುತ್ತಿದೆ ಮತ್ತು ಹೇಗೆ ಜಾಹೀರಾತು ಪ್ರದರ್ಶಿಸುತ್ತಿದೆ ಎಂಬುದನ್ನು ಅಧ್ಯಯನದಲ್ಲಿ ಪರೀಕ್ಷೆ ಮಾಡಲಾಗಿದೆ. ಅಧ್ಯಯನದಲ್ಲಿ ಬಳಕೆದಾರರು ರಚಿಸಿದ 264 ಇಂಗ್ಲಿಷ್ ಭಾಷೆಯಲ್ಲಿರುವ ಇ-ಸಿಗರೇಟ್ ಕುರಿತಾದ ವೀಡಿಯೊಗಳನ್ನು ಪರಿಶೀಲನೆ ಮಾಡಲಾಯಿತು ಮತ್ತು ಇವೆಲ್ಲವೂ ಟಿಕ್ಟಾಕ್ನ ನಿಯಮಗಳಿಗೆ ವಿರುದ್ಧವಾಗಿರುವುದು ಕಂಡು ಬಂದಿದೆ. ಇವುಗಳಲ್ಲಿ ಬಹುತೇಕ ಅಂದರೆ ಶೇ 98 ರಷ್ಟು ವೀಡಿಯೊಗಳು ಇ-ಸಿಗರೇಟ್ ಅನ್ನು ಒಳ್ಳೆಯದು ಎಂದು ತೋರಿಸಿವೆ. ಇವುಗಳಲ್ಲಿನ ಮೂರನೇ ಒಂದು ಭಾಗದಷ್ಟು ವಿಡಿಯೋಗಳು ಸ್ಪಷ್ಟವಾಗಿ ಟಿಕದ ಟಾಕ್ ನಿಯಮ ಉಲ್ಲಂಘಿಸಿವೆ ಮತ್ತು ವೇಪಿಂಗ್ ಉತ್ಪನ್ನಗಳನ್ನು ಕೊಳ್ಳುವಂತೆ ಪ್ರಚೋದಿಸಿವೆ.
ಮುಂದಿನ ದಾರಿ ಯಾವುದು?: ಕಂಟೆಂಟ್ ಬಗ್ಗೆ ನೀತಿ ನಿಯಮಗಳನ್ನು ಸೋಷಿಯಲ್ ಮೀಡಿಯಾಗಳೇ ತಯಾರಿಸಿ ಅದನ್ನು ಅವು ಪಾಲಿಸಲಿ ಎಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮ ಕಂಪನಿಗಳ ನೀತಿಗಳನ್ನು ಸಾಮಾನ್ಯವಾಗಿ ಉಲ್ಲಂಘಿಸಲಾಗುತ್ತದೆ ಮತ್ತು ಇದಕ್ಕೆ ಯಾವುದೇ ಶಿಕ್ಷೆಯಾಗುವುದಿಲ್ಲ. ತಮ್ಮ ನೀತಿಗಳನ್ನು ಉಲ್ಲಂಘಿಸುವ ಜನರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸೋಷಿಯಲ್ ಮೀಡಿಯಾ ಕಂಪನಿಗಳು ಹಣಕಾಸು ಪ್ರತಿಫಲಗಳನ್ನು ಪಡೆಯುತ್ತವೆ ಎಂಬುದು ಖಚಿತ.
ಟಿಕ್‌ಟಾಕ್‌ನಲ್ಲಿ ಇ-ಸಿಗರೇಟ್ ಪ್ರಚೋದಕ ಕಂಟೆಂಟ್ ಹರಡುವಿಕೆ ನಿರ್ಬಂಧಿಸಲು ಪ್ರಸ್ತುತ ನೀತಿಗಳು ಮತ್ತು ಮಾಡರೇಶನ್ ಪ್ರಕ್ರಿಯೆಗಳು ಸಾಕಾಗುವುದಿಲ್ಲ. ಇದು ಯುವ ಸಾಮಾಜಿಕ ಮಾಧ್ಯಮ ಬಳಕೆದಾರರು ಇ-ಸಿಗರೇಟ್ ಹೆಚ್ಚೆಚ್ಚು ಬಳಸುವಂತೆ ಪ್ರಚೋದನೆ ನೀಡುತ್ತಿದೆ. ಭವಿಷ್ಯದಲ್ಲಿ ಯುವಸಮುದಾಯಕ್ಕೆ ಎದುರಾಗಬಹುದಾದ ಆರೋಗ್ಯ ಸಮಸ್ಯೆಯನ್ನು ನಿಯಂತ್ರಿಸಬೇಕಾದರೆ ಇ-ಸಿಗರೇಟ್ ಕಂಟೆಂಟ್ ಮತ್ತು ಅದರ ಪ್ರಚಾರದ ಮೇಲೆ ಹೆಚ್ಚಿನ ನಿಯಂತ್ರಣದ ಅಗತ್ಯವಿದೆ.
ಇದನ್ನೂ ಓದಿ : ನೋಕಿಯಾ ಬಜೆಟ್ ಸ್ಮಾರ್ಟ್ಫೋನ್ C22 ಭಾರತದಲ್ಲಿ ಬಿಡುಗಡೆ: ಬೆಲೆ 7,999 ರೂ.