ಸದ್ಯದ ಋತುಮಾನದಲ್ಲಿ ಬಹುತೇಕರು ಜ್ವರ, ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿರುವುದನ್ನು ಕಾಣಬಹುದು. ಕೊರೊನಾ ಬಳಿಕ ವೈರಸ್ ದಾಳಿ ಹೆಚ್ಚಾಗಿರುವುದು ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಸೋಂಕುಗಳಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸುವಂತೆ ಅನೇಕ ತಜ್ಞರು ಕೂಡ ಎಚ್ಚರಿಸಿದ್ದಾರೆ. ಕೋವಿಡ್ ನಿಯಮ ಪಾಲನೆಯೊಂದಿಗೆ ಈ ವೇಳೆ ದೇಹದ ಇಮ್ಯೂನಿಟಿಯನ್ನು ಹೆಚ್ಚಿಸಿಕೊಳ್ಳುವುದು ಅತ್ಯವಶ್ಯಕ. ಇದಕ್ಕೆ ಆಹಾರ ಕ್ರಮದಲ್ಲಿ ಬದಲಾವಣೆ ಮಾಡುವುದು ಅಗತ್ಯ. ಸದ್ಯ ಹೆಚ್ಚಾಗುತ್ತಿರುವ ನೆಗಡಿ, ಕೆಮ್ಮಿನ ದಾಳಿಗೆ ಒಳಗಾಗಬಾರದು ಎಂದರೆ ಮನೆಯಲ್ಲಿ ಕೆಲವು ಉಪಶಮನ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಅರಿಶಿಣ: ಇದರಲ್ಲಿರುವ ಕರ್ಕ್ಯುಮಿನ್ ಪ್ರತಿರೋಧಕ ಗುಣ ಹೊಂದಿದೆ. ಇದರು ನಿಮ್ಮ ಇಮ್ಯೂನಿಟಿ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಜ್ವರದ ಲಕ್ಷಣ ಕಾಡಿದರೆ, ಅರಿಶಿಣ ಬಳಿಕೆಯನ್ನು ಹೆಚ್ಚು ಮಾಡಿ. ಬಿಸಿ ಹಾಲಿಗೆ ಕೊಂಚ ಅರಿಶಿಣ ಮತ್ತು ಸ್ವಲ್ಪ ಕಾಳು ಮೆಣಸಿನ ಪುಡಿ ಬೆರೆಸಿ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇದರಿಂದ ಗಂಟಲಿನ ನೋವು, ಕಫ ಸೇರಿದಂತೆ ಇನ್ನಿತರ ಸಮಸ್ಯೆಗೆ ಪರಿಹಾರ ಕಾಣಬಹುದು
ಶುಂಠಿ: ಜ್ವರ ಮತ್ತು ಶೀತದಿಂದ ರಕ್ಷಿಸುವುದರ ಜೊತೆಗೆ ಇದು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ದೇಹವನ್ನು ಬೆಚ್ಚಗಿರಿಸಲು ಕೂಡ ಸಹಾಯ ಮಾಡುತ್ತದೆ. ಶುಂಠಿ ಬೆರೆಸಿದ ನೀರನ್ನು ಚೆನ್ನಾಗಿ ಕುದಿಸಿ, ಆರಿಸಿ, ಶೋಧಿಸಿ ಕುಡಿಯಬಹುದು. ಇಲ್ಲವಾದಲ್ಲಿ ಇದನ್ನು ಟೀ ಅಥವಾ ಸೂಪ್ಗೆ ಸೇರಿಸುವ ಮೂಲಕ ಕುಡಿಯುವುದರಿಂದಲೂ ಲಾಭ ಇದೆ.
ಬೆಳ್ಳಳ್ಳಿ: ಆ್ಯಂಟಿ ವೈರಲ್ ಮತ್ತು ಮೈಕ್ರೊಬೈಲ್ ಗುಣಗಳು ಇದರಲ್ಲಿ ಹೆಚ್ಚಿದೆ. ಇದು ಜ್ವರ ಮತ್ತು ಶೀತದ ವಿರುದ್ಧ ಹೋರಾಡುವ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯದ ಡಯಟ್ ಆಹಾರದಲ್ಲಿ ಇದನ್ನು ಬಳಕೆ ಮಾಡುವುದರಿಂದ ಇನ್ನಿತರೆ ಸೋಂಕನ್ನು ಕೂಡ ತಡೆಯಬಹುದಾಗಿದೆ.
ವಿಟಮಿನ್ ಸಿ: ಪ್ರತಿರಕ್ಷಣಾ ವ್ಯವಸ್ಥೆಯ ವೃದ್ಧಿಗೆ ಇದು ಹೆಚ್ಚಿನ ಸಹಾಯ ಮಾಡುತ್ತದೆ. ವಿಟಮಿನ್ ಸಿಯಿಂದಾಗಿ ದೇಹದಲ್ಲಿ ಉತ್ತೇಜನ ಕೂಡ ಸಿಗುತ್ತದೆ. ವಿಟಮಿನ್ ಸಿ ಯಥೇಚ್ಛವಾಗಿ ಕಿತ್ತಳೆ, ಸಿಹಿ ಗೆಣಸು, ದಪ್ಪ ಮೆಣಸಿನಕಾಯಿ, ನಿಂಬೆ ಹಣ್ಣು ಸೇರಿದಂತೆ ಹಲವು ತರಕಾತಿ ಮತ್ತು ಹಣ್ಣುಗಳಲ್ಲಿ ಇರುತ್ತದೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಉಸಿರಾಟದ ಸೋಂಕಿನ ಸಮಸ್ಯೆಯಿಂದಲೂ ದೂರ ಇರಬಹುದಾಗಿದೆ.
ಈರುಳ್ಳಿ: ಈರುಳ್ಳಿ ಸೇವನೆಯಿಂದ ಕೂಡ ಕೆಮ್ಮು ನೆಗಡಿಗೆ ಪರಿಹಾರ ಕಾಣಬಹುದು. ಈರುಳ್ಳಿಯಲ್ಲಿ ಗಂಧಕ ಹೆಚ್ಚಾಗಿರುತ್ತದೆ. ಇದು ದೇಹದಲ್ಲಿ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಶೀತ ಮತ್ತು ಕೆಮ್ಮು ಶಮನವಾಗುತ್ತದೆ.
ತುಳಸಿ ಎಲೆ: ತುಳಸಿ ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಶೀಲೀಂಧ್ರ ವಿರೋದಿ ಮತ್ತು ಆಂಟಿ ವೈರಲ್ ಗುಣವನ್ನು ಹೊಂದಿದೆ. ತುಳಸಿಯನ್ನು ಹಾಗೆಯೇ ಕೂಡ ಸೇವನೆ ಮಾಡಬಹುದಾಗಿದೆ. ಇಲ್ಲವಾದಲ್ಲಿ ತುಳಸಿ ಎಲೆಯನ್ನು ನೀರು ಅಥವಾ ಚಹಾದೊಂದಿಗೆ ಕುದಿಸಿ ಸೇವಿಸುವುದರಿಂದ ಅನೇಕ ಪರಿಹಾರ ಕಾಣಬಹುದು.
ಇದನ್ನೂ ಓದಿ: ಹೆಚ್ಚು ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲ; ಆದ್ರೆ, ಈ ಅನುಕೂಲಗಳೂ ಇವೆ!