ನಿಂಬೆ ಹಣ್ಣಿನ ರಸದಿಂದ ತ್ವಚೆಯ ಆರೈಕೆ ಮಾಡಿಕೊಳ್ಳುವ ಹಲವಾರು ವಿಧಾನಗಳ ಬಗ್ಗೆ ತಾವು ಕೇಳಿ ತಿಳಿದುಕೊಂಡಿರಬಹುದು. ಫೇಸ್ ಮಾಸ್ಕ್ ಮತ್ತು ಫೇಸ್ ಪ್ಯಾಕ್ಗಳಲ್ಲಿ ನಿಂಬೆ ಹಣ್ಣಿನ ರಸ ಸೇರಿಸುವುದರಿಂದ ಹಲವಾರು ಆರೋಗ್ಯಕರ ಲಾಭಗಳಾಗುತ್ತವೆ. ಆದರೆ, ತ್ವಚೆಯ ಆರೈಕೆಗೆ ನಿಂಬೆ ಹಣ್ಣು ಬಳಸುವುದರಿಂದ ಆಗುವ ಹಾನಿಗಳ ಬಗ್ಗೆಯೂ ಕಳೆದ ಕೆಲ ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಹಾಗಾದರೆ ನಿಂಬೆಹಣ್ಣಿನ ರಸದಿಂದ ತ್ವಚೆಯ ಮೇಲಾಗುವ ಆರೋಗ್ಯಕರ ಹಾಗೂ ಅನಾರೋಗ್ಯಕರ ಪರಿಣಾಮಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ನಿಮ್ಮ ಮುಖದ ಆರೈಕೆಗೆ ನಿಂಬೆಹಣ್ಣು ಬಳಸುವುದರಿಂದಾಗುವ ಪ್ರಯೋಜನಗಳು:
- ಸತ್ತ ಚರ್ಮವನ್ನು ತೆಗೆದು ಹಾಕುವುದು: ನಿಂಬೆ ರಸವು ಗ್ಲೈಕೋಲಿಕ್ ಆಮ್ಲದಂತಹ ಆಲ್ಫಾ- ಹೈಡ್ರಾಕ್ಸಿ ಆಮ್ಲಗಳನ್ನು (AHA) ಹೊಂದಿರುತ್ತದೆ. ಈ ಆಮ್ಲಗಳು ಜೀವಕೋಶಗಳ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ಹಾಗೂ ಸತ್ತ ಕೋಶಗಳನ್ನು ಹೊರಹಾಕುವುದರಿಂದ ಇವನ್ನು ಸಾಮಾನ್ಯವಾಗಿ ತ್ವಚೆಯ ಆರೈಕೆಯಲ್ಲಿ ಬಳಸಲಾಗುತ್ತದೆ. ಹೀಗಾಗಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಅನೇಕರು ನಿಂಬೆರಸವನ್ನೇ ಬಳಸುತ್ತಾರೆ.
- ಮೊಡವೆ ನಿವಾರಕ: ನಿಂಬೆ ರಸವು ಅದರಲ್ಲಿರುವ ಆಮ್ಲೀಯ ಮಟ್ಟದ ಕಾರಣದಿಂದ ಸಂಕೋಚನ ಗುಣಗಳನ್ನು ಹೊಂದಿದೆ. ಕಡಿಮೆ ಪಿಎಚ್ ಮಟ್ಟ ಹೊಂದಿರುವ ವಸ್ತುಗಳು ಊರಿಯೂತ ಮತ್ತು ಮೊಡವೆಗಳಿಗೆ ಕಾರಣವಾಗಬಲ್ಲ ಜಿಡ್ಡಿನ ಅಂಶವನ್ನು ಕಡಿಮೆ ಮಾಡುತ್ತವೆ. ಅಲ್ಲದೆ ಒಂದು ರೀತಿಯ ಅಲ್ಫಾ ಹೈಡ್ರಾಕ್ಸಿ ಆ್ಯಸಿಡ್ ಆಗಿರುವ ಸಿಟ್ರಿಕ್ ಆ್ಯಸಿಡ್, ಮೊಡವೆಗಳಿಗೆ ಕಾರಣವಾಗಬಲ್ಲ ಸತ್ತ ಜೀವಕೋಶಗಳನ್ನು ಹೊರಹಾಕುತ್ತದೆ.
- ಕೊಲಾಜೆನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ: ತ್ವಚೆಯ ರಚನೆಯಲ್ಲಿನ ಮುಖ್ಯ ಪ್ರೋಟೀನ್ ಆಗಿರುವ ಕೊಲಾಜೆನ್ ತಯಾರಾಗಲು ಶರೀರಕ್ಕೆ ವಿಟಮಿನ್ ಸಿ ಬಹಳ ಅಗತ್ಯವಿದೆ. ವಿಟಮಿನ್ ಸಿ ಭರಿತ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಪೋಷಕಾಂಶ ದೊರೆತು ಕೊಲಾಜೆನ್ ಉತ್ಪಾದನೆಗೆ ಸಹಾಯವಾಗುತ್ತದೆ.
- ಕಪ್ಪುಕಲೆಗಳು ಅಥವಾ ಕೂದಲುಗಳ ಹೊಳೆಯುವಿಕೆ: ಸಿಟ್ರಸ್ ಹಣ್ಣಾದ ನಿಂಬೆಹಣ್ಣು ಮುಖದ ಮೇಲೆ ವಯಸ್ಸಿನ ಸುಕ್ಕು, ಕಲೆಗಳಾಗುವುದನ್ನು ಕಡಿಮೆ ಮಾಡುತ್ತದೆ ಹಾಗೂ ಮುಖದ ಮೇಲೆ ರೋಮಗಳು ಬೆಳೆಯದಂತೆ ಮಾಡುತ್ತದೆ.
- ಹೊಟ್ಟು ನಿವಾರಣೆ: ತಲೆಯಲ್ಲಿನ ಹೊಟ್ಟು ನಿವಾರಣೆಗಾಗಿ ನಿಂಬೆಹಣ್ಣನ್ನು ಹಲವಾರು ವರ್ಷಗಳಿಂದ ಬಳಸಲಾಗುತ್ತಿದೆ. ತಲೆ ಹೊಟ್ಟಿನಿಂದ ತ್ವಚೆಯ ಮೇಲಾಗುವ ಕಲೆಗಳನ್ನು ಸಹ ನಿಂಬೆ ರಸ ಹೋಗಲಾಡಿಸಬಲ್ಲದು.
- ಆ್ಯಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧ: ವಿಟಮಿನ್ ಸಿ ಪ್ರಬಲವಾದ ಆ್ಯಂಟಿ ಆಕ್ಸಿಡೆಂಟ್ ಆಗಿದೆ. ಅಂದರೆ ಇದು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡವು ಉರಿಯೂತ, ಕುಗ್ಗುವಿಕೆ ಮತ್ತು ವೇಗವಾಗಿ ಚರ್ಮದ ವಯಸ್ಸಾಗುವಿಕೆಗೆ ಕಾರಣವಾಗಬಹುದಾದ್ದರಿಂದ ನಿಂಬೆ ಹಣ್ಣಿನ ಈ ಗುಣ ಗಮನಾರ್ಹವಾಗಿದೆ. ನಿಂಬೆ ರಸ ವಿಟಮಿನ್ ಸಿ ಹೊಂದಿರುವುದರಿಂದ ಈ ಪರಿಣಾಮಗಳನ್ನು ತಡೆಯಲು ಸಹಾಯ ಮಾಡುತ್ತದೆ.
ನಿಮ್ಮ ಮುಖದ ಮೇಲೆ ನಿಂಬೆ ಬಳಸುವುದರಿಂದ ಆಗುವ ಅನಾನುಕೂಲಗಳು:
- ಉರಿಯುಂಟು ಮಾಡಬಹುದು: ತ್ವಚೆಯ ಆರೈಕೆಗೆ ನಿಂಬೆ ರಸ ಬಳಸುವುದರಿಂದ ತ್ವಚೆಗೆ ನೇರವಾಗಿ ಸುಟ್ಟ ಗಾಯವಾಗದಿರಬಹುದು, ಆದರೆ ತ್ವಚೆಗೆ ಕಿರಿಕಿರಿಯಾಗಬಹುದು. ನಿಂಬೆಯಲ್ಲಿರುವ ಆ್ಯಸಿಡ್ನಿಂದ ಈ ಪರಿಣಾಮ ಕಾಣಿಸಿಕೊಳ್ಳಬಹುದು. ತ್ವಚೆ ಸುಲಿಯುವುದು, ಒನಗುವುದು, ಜೋತು ಬೀಳುವುದು, ಕೆಂಪಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.
- ಸನ್ಬರ್ನ್: ತ್ವಚೆಯ ಮೇಲೆ ಸಿಟ್ರಸ್ ಹಣ್ಣುಗಳ ರಸವನ್ನು ನೇರವಾಗಿ ಹಚ್ಚುವುದರಿಂದ ಸನ್ಬರ್ನ್ ಆಗುವ ಅಪಾಯ ಹೆಚ್ಚಾಗಬಹುದು. ಸೂರ್ಯನ ಬಿಸಿಲಿರುವಾಗ ಹೊರಗೆ ಹೋಗುವುದಿದ್ದರೆ ಅಂಥ ಸಮಯದಲ್ಲಿ ಚರ್ಮಕ್ಕೆ ನಿಂಬೆ ರಸ ಬಳಸಕೂಡದು. ಅಲ್ಲದೇ ದೂರ ದೂರಿಗೆ ಹೋಗುವ ಪ್ಲಾನ್ ಇದ್ದರೆ ಅದಕ್ಕೂ ಕೆಲ ದಿನಗಳ ಮುನ್ನ ಮುಖಕ್ಕೆ ನಿಂಬೆರಸ ಬಳಸಬೇಡಿ.
- ಫೈಟೊಫೋಟೊಡರ್ಮಾಟಿಟಿಸ್: ಇದು ಸಿಟ್ರಸ್ ಹಣ್ಣುಗಳು ಮತ್ತು ಇತರ ವಸ್ತುಗಳಾದ ಪಾರ್ಸಲೇ, ಸೆಲೆರಿ ಮತ್ತು ಕ್ಯಾರೆಟ್ಗಳ ಕಾರಣದಿಂದ ಉಂಟಾಗಬಹುದಾದ ಸಮಸ್ಯೆಯಾಗಿದೆ. ನಿಮ್ಮ ಮುಖದ ಮೇಲೆ ಸಿಟ್ರಸ್ ಅಂಶಗಳಿದ್ದು, ಅದೇ ಸಮಯಕ್ಕೆ ಚರ್ಮದ ಮೇಲೆ ಯುವಿ ಕಿರಣಗಳು ಬಿದ್ದರೆ ಒಂದು ರೀತಿಯ ಉರಿಯೂತ ಉಂಟಾಗುತ್ತದೆ. ಇದರಿಂದ ಊತ, ನಿಮ್ಮ ಚರ್ಮದ ಮೇಲೆ ಉಬ್ಬುಗಳು, ಕೆಂಪು ಮತ್ತು ದದ್ದುಗಳು ಉಂಟಾಗಬಹುದು.
- ಹೈಪರ್ಪಿಗ್ಮೆಂಟೇಶನ್: ಹೈಪರ್ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ನಿಂಬೆ ರಸ ಹೆಚ್ಚಾಗಿ ಬಳಸಲ್ಪಡುತ್ತಿದ್ದರೂ, ವಾಸ್ತವದಲ್ಲಿ ಇದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಏಕೆಂದರೆ ನಿಂಬೆ ರಸದಿಂದ ಉಂಟಾಗುವ ಸನ್ಬರ್ನ್ ಗುಳ್ಳೆಗಳನ್ನು ಉಂಟು ಮಾಡಬಹುದು. ಅಂದರೆ ಸೌಂದರ್ಯ ಉತ್ಪನ್ನಗಳಲ್ಲಿನ ವಿಟಮಿನ್ ಸಿ ಮತ್ತು ನಿಮ್ಮ ಆಹಾರದಲ್ಲಿನ ವಿಟಮಿನ್ ಸಿ ಎರಡೂ ಭಿನ್ನ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.
ಕೆಲವು ಪರಿಸ್ಥಿತಿಗಳಲ್ಲಿ ನಿಂಬೆಯನ್ನು ಮುಖದ ಮೇಲೆ ಬಳಸಬಹುದು. ಆದರೆ ಅದಕ್ಕೂ ಮೊದಲು ಇಲ್ಲಿ ತಿಳಿಸಲಾದ 4 ಪ್ರಮುಖ ಸಲಹೆಗಳನ್ನು ಅನುಸರಿಸಿ:
- ನಿಮ್ಮ ಮುಖಕ್ಕೆ ನಿಂಬೆ ರಸ ಹಚ್ಚುವ ಮೊದಲು ಯಾವಾಗಲೂ ಪ್ಯಾಚ್ ಟೆಸ್ಟ್ ಮಾಡಿ. ನಿಮ್ಮ ತೋಳುಗಳ ಮೇಲೆ ಈ ಟೆಸ್ಟ್ ಮಾಡಬಹುದು ಮತ್ತು ತ್ವಚೆಯ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿಯಲು ಸ್ವಲ್ಪ ಸಮಯ ಕಾಯಿರಿ.
- ಯಾವಾಗಲೂ ನಿಂಬೆ ರಸವನ್ನು ರೋಸ್ ವಾಟರ್ ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ದುರ್ಬಲಗೊಳಿಸಿ. ಅದನ್ನು ನಿಮ್ಮ ಮುಖದ ಮೇಲೆ ನೇರವಾಗಿ ಬಳಸುವುದನ್ನು ತಪ್ಪಿಸಿ.
- ನಿಂಬೆ ರಸವನ್ನು ಹಚ್ಚಿದ ನಂತರ ಸನ್‌ಸ್ಕ್ರೀನ್ ಬಳಸುವುದು ಅತ್ಯಗತ್ಯ.
- ನೀವು ಫೇಸ್ ಪ್ಯಾಕ್‌ಗೆ ನಿಂಬೆ ರಸ ಸೇರಿಸುವುದಾದರೆ ತಾಜಾ ನಿಂಬೆಹಣ್ಣುಗಳನ್ನು ಬಳಸಿ.