ಬೆಂಗಳೂರು: ಹೊರಗೆ ಮಳೆ ಸುರಿಯುತ್ತಿರುವಾಗ ಕಾಫಿ ಕಪ್ ಜೊತೆಗೆ ಬಿಸಿ ಬಿಸಿಯಾದ ರುಚಿಕರ ಪಕೋಡವನ್ನು ಸವಿಯದಿದ್ದರೆ, ಮಳೆಗಾಲದ ಮೋಜನ್ನು ಮಿಸ್ ಮಾಡಿಕೊಂಡಂತೆ. ಬಿರು ಬೇಸಿಗೆಯ ಬಳಿಕ ಬರುವ ಈ ಋತುಮಾನ ಕೇವಲ ಖುಷಿ ಮತ್ತು ಉತ್ಸಾಹವನ್ನು ಮಾತ್ರ ನೀಡುವುದಿಲ್ಲ. ಜೊತೆಗೆ ನೆಚ್ಚಿನ ಹುರಿದ, ಕರಿದ ತಿಂಡಿಗಳ ಸವಿಯಲು ಕಾರಣವಾಗುತ್ತದೆ. ಇದೇ ಕಾರಣಕ್ಕೆ ಹಲವರಿಗೆ ಮಳೆಗಾಲವೂ ನೆಚ್ಚಿನ ಋತುಮಾನವಾಗುತ್ತದೆ. ಇದರ ಮೋಜಿಗೆ ಭಾರತೀಯ ಸ್ನಾಕ್ಸ್ಗಳು ಇನ್ನಷ್ಟು ಬಾಯಿ ರುಚಿ ಮಾಡುವುದು ಸುಳ್ಳಲ್ಲ. ಅಂತಹ ಕೆಲವು ರುಚಿಕರ ತಿಂಡಿಗಳನ್ನು ಈ ಬಾರಿಯ ಈ ಮಳೆಗಾಲದಲ್ಲಿ ಕುಟುಂಬದ ಜೊತೆಗೆ ಸೇರಿ ಆಹ್ಲಾದಿಸಬಹುದಾಗಿದೆ.
ಈರುಳ್ಳಿ ಪಕೋಡ: ಮಳೆಗಾಲದಲ್ಲಿ ಅನೇಕ ರೀತಿಯ ಪಕೋಡಗಳ ರುಚಿಯನ್ನು ಸವಿಯಲಾಗುತ್ತದೆ. ಆದರೆ, ಈ ಎಲ್ಲಾ ಪಕೋಡಗಳ ಮುಂದೆ ಸದಾ ಎಲ್ಲರ ಬಾಯಿ ಚಪ್ಪರಿಸುವಂತೆ ಮಾಡುವುದು ಸಾಂಪ್ರದಾಯಿಕ ಈರುಳ್ಳಿ ಪಕೋಡ. ಕಡಲೆ ಹಿಟ್ಟಿಗೆ ಖಾರ ಮೆಣಸಿನಕಾಯಿ ಮತ್ತು ಹೆಚ್ಚಿದ ಈರುಳ್ಳಿ, ಉಪ್ಪು ಹಾಕಿ ಎಣ್ಣೆಯಲ್ಲಿ ಕರಿದರೆ, ರುಚಿ ರುಚಿಯಾದ ಈರುಳ್ಳಿ ಪಕೋಡ ಸಿದ್ಧವಾಗುತ್ತದೆ. ಇದಕ್ಕೆ ರುಚಿಯನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡುವುದು ಬಿಸಿ ಬಿಸಿ ಟೀ ಆಗಿದೆ.
ಸಮೋಸ: ಭಾರತದಲ್ಲಿ ಮಾತ್ರವಲ್ಲದೇ, ವಿದೇಶದಲ್ಲೂ ಸದ್ದು ಮಾಡಿರುವ ಸಂಜೆ ತಿನಿಸು ಸಮೋಸವಾಗಿದೆ. ವಿವಿಧ ಬಗೆಯ ರುಚಿ ಕರ ಸಮೋಸ ನಿಮ್ಮ ಮಳೆಗಾಲದ ಮೂಡ್ ಅನ್ನು ಇನ್ನಷ್ಟು ತಾಜಾತನವನ್ನಾಗಿಸುತ್ತದೆ. ಇದರ ಜೊತೆಗೆ ಬಿಸಿ ಬಿಸಿ ಟೀ ನಿಮ್ಮ ದಿನವನ್ನು ಅದ್ಬುತವಾಗಿ ಮಾಡುತ್ತದೆ.
ಬ್ರೆಡ್ ಪಕೋಡ: ಪಕೋಡದಲ್ಲಿ ಅನೇಕ ರೀತಿಯ ಪಕೋಡ ಮಾಡುವುದು ಹೊಸತಲ್ಲ. ಅದರಲ್ಲೂ ಕುರುಂ ಕುರುಂ ಎನ್ನುವ ಬ್ರೆಡ್ ಪಕೋಡಗಳು ಮಕ್ಕಳು ಮಾತ್ರವಲ್ಲದೇ, ಎಲ್ಲರ ಮೆಚ್ಚಿನ ತಿಂಡಿ. ಇದಕ್ಕೆ ಬಿಸಿಯಾದ ಬೆಳ್ಳುಳ್ಳಿ- ಟೊಮೆಟೊ ಚಟ್ನಿ ಇದ್ದರೆ ಸ್ವಾದವನ್ನು ಹೆಚ್ಚಿವಂತೆ ಮಾಡುತ್ತದೆ.
ಮೂಂಗ್ ದಾಲ್ ಪಕೋಡ: ಕ್ರಿಸ್ಪಿ ಪಕೋಡಗಳನ್ನು ಮಾಡುವಾಗ ಇದರ ಜೊತೆಗೆ ಆರೋಗ್ಯದ ವಿಚಾರವೂ ಗಮನಕ್ಕೆ ಬರುವುದು ಸಹಜ. ಇದೇ ಕಾರಣಕ್ಕೆ ಹೆಸರು ಬೇಳೆ ಪಕೋಡ ಆನೇಕರ ಆಯ್ಕೆ ಆಗುತ್ತದೆ. ಸಾಕಷ್ಟು ಆರೋಗ್ಯಕರ ಗುಣ ಹೊಂದಿರುವ ಈ ಹೆಸರುಬೆಳೆಯ ಖಾರ ಖಾರವಾದ ಪಕೋಡ ನಿಮ್ಮ ಬಾಯಲ್ಲಿ ನೀರು ಬರುವಂತೆ ಮಾಡುವುದು ಸುಳ್ಳಲ್ಲ. ಇದರ ಜೊತೆಗೆ ರುಚಿಕರ ಕಾಫಿ ಮತ್ತಷ್ಟು ಸ್ವಾದವನ್ನು ಉಂಟು ಮಾಡುತ್ತದೆ.
ವಡಾ ಪಾವ್: ಮಳೆಗಾಲ ಸಂದರ್ಭದಲ್ಲಿನ ಅತ್ಯದ್ಬುತ ರುಚಿಕರ ಸ್ನಾಕ್ಗಳಲ್ಲಿ ಮತ್ತೊಂದು ವಡಾ ಪಾವ್ ಆಗಿದೆ. ಬ್ರೆಡ್ ಜೊತೆಗೆ ಬಿಸಿ ಬಿಸಿ ವಡೆ ಬಾಯಿಗಿಟ್ಟುಕೊಂಡರೆ ಅದು ಹಾಗೇ ಕರಗಿ ಹೋಗದೆ ಇರಲಾರದು. ಬೇಯಿಸಿದ ಆಲೂಗಡ್ಡೆಗೆ ಈರುಳ್ಳಿ, ಹಸಿರು ಮೆಣಸಿನಕಾಯಿ ಕೆಲವು ಮಸಾಲೆ ಬೆರೆಸಿ ಕಡಲೆ ಹಿಟ್ಟಿನೊಂದಿಗೆ ಕರೆಯಲಾಗುತ್ತದೆ. ಬಿಸಿ ಬಿಸಿ ವಡೆ ಬಳಿಕ ಅದನ್ನು ಬ್ರೆಡ್ನ ಮಧ್ಯೆ ಇರಿಸಿ, ತಿಂದರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ. ಮುಂಬೈನಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ಈ ವಡಾ ಪಾವ್ನೊಂದಿಗೆ ನಟಿ ಮಾಧುರಿ ದೀಕ್ಷಿತ್ ಆ್ಯಪಲ್ ಸಿಇಒ ಟಿಮ್ ಕುಕ್ ಅವರನ್ನು ಸ್ವಾಗತಿಸಿದ್ದನ್ನೂ ಕೂಡ ಮರೆಯುವಂತಿಲ್ಲ. ಅಷ್ಟರ ಮಟ್ಟಿಗೆ ಇದು ತಮ್ಮ ಛಾಪು ಹೊಂದಿದೆ.
ಇದನ್ನೂ ಓದಿ: ಚಹಾ, ಟೀ, ಚಾಯ್; ಹೆಸರಲ್ಲಿ ವಿಭಿನ್ನತೆ ಇರಬಹುದು.. ಆದರೆ, ಭಾವನೆಯಲ್ಲಿ ಅಲ್ಲ..