ತಿರುವನಂತಪುರಂ: ಕೇರಳದಲ್ಲಿ ಕೋವಿಡ್ ಹರಡಿದೆ ಎಂಬ ಸುದ್ದಿಯನ್ನು ಕೆಲವು ಫಟ್ಟಭದ್ರ ಹಿತಾಸಕ್ತಿಗಳು ಹರಡುವ ಪ್ರಯತ್ನ ಮಾಡುವ ಮೂಲಕ ಆತಂಕ ಸೃಷ್ಟಿ ಯತ್ನ ನಡೆಸಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕೆಲವು ಫಟ್ಟಭದ್ರ ಹಿತಾಸಕ್ತಿ ಹೊಂದಿರುವವರು ರಾಜ್ಯದಲ್ಲಿ ಕೋವಿಡ್ ಹರಡಿದೆ ಎಂದು ಆತಂಕ ಹೆಚ್ಚಿಸುವ ಕೆಲಸ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಕುರಿತು ಅಧಿಕಾರಿಗಳು ನಿರಂತರ ಕಣ್ಗಾವಲಿಟ್ಟು, ಎಲ್ಲಾ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ನವೆಂಬರ್ನಿಂದ ಸಂಗ್ರಹಿಸಲಾದ ಎಲ್ಲಾ ಮಾದರಿಗಳನ್ನು ಪರೀಕ್ಷೆಗಳಿಗೆ ಕಳುಹಿಸಲಾಗಿದೆ ಎಂದರು.
ಕಳೆದ ತಿಂಗಳು ಕೆಲವು ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ವೇಳೆ 79 ವರ್ಷದ ರಾಜ್ಯ ರಾಜಧಾನಿಯ ವ್ಯಕ್ತಿಯಲ್ಲಿ ಕೋವಿಡ್ ದೃಢಪಟ್ಟಿದ್ದು, ಅದರಲ್ಲಿ ಜೆಎನ್1 ತಳಿ ಇರುವುದು ಕಂಡು ಬಂದಿತ್ತು. ಅವರು ಹೋಮ್ ಐಸೋಲೇಷನ್ಗೆ ಒಳಗಾಗಿ ಇದೀಗ ಚೇತರಿಕೆ ಕಂಡಿದ್ದು, ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ತಿಂಗಳ ಭಾರತದಿಂದ ಸಿಂಗಾಪೂರ್ಗೆ ಪ್ರಯಾಣಿಸಿದ 15 ಮಂದಿಯಲ್ಲಿ ಜೆಎನ್1 ತಳಿ ದೃಢಪಟ್ಟಿತ್ತು. ಅದರ ಅರ್ಥ ಕೇರಳದಲ್ಲಿ ಮಾತ್ರವಲ್ಲದೇ ಸೋಂಕು ಇತರ ರಾಜ್ಯದಲ್ಲಿಯೂ ಇದೆ ಎಂದು. ನಮ್ಮ ಪ್ರೋಟೋಕಾಲ್ನಿಂದಾಗಿ ನಾವು ಅದನ್ನು ಪತ್ತೆ ಮಾಡಿದೆವು. ಡಿಸೆಂಬರ್ 13 ರಿಂದ 16ರವರೆಗೆ ಎಲ್ಲಾ ಸ್ಥಳದಲ್ಲಿ ನಮ್ಮ ವ್ಯವಸ್ಥೆಯು ತಪಾಸಣೆ ನಡೆಸಿದೆ. 1,192 ಆಸ್ಪತ್ರೆಗಳಲ್ಲಿ ಸೌಲಭ್ಯ ಲಭ್ಯತೆ ಪರಿಶೀಲನೆ ಮಾಡಲಾಗಿದೆ. ಸದ್ಯ 1,957 ಬೆಡ್, 2,454 ಐಸಿಯು ಬೆಡ್ ಮತ್ತು 937 ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂದರು
ಸದ್ಯ ದೇಶದಲ್ಲಿ 1,828 ಸಕ್ರಿಯವಾದ ಪ್ರಕರಣಗಳಿದ್ದು, ಕೇರಳದಲ್ಲಿ 1,634 ಪ್ರಕರಣಗಳು ಕಂಡು ಬಂದಿದೆ. ಭಾನುವಾರ ಕೇರಳದಲ್ಲಿ ಹೊಸದಾಗಿ 11 ಕೋವಿಡ್ ಪ್ರಕರಣ ದಾಖಲಾಗಿದೆ. ಇದರ ಜೊತೆಗೆ ಒಂದು ಕೋವಿಡ್ ಸೋಂಕಿನ ಸಾವು ಕೂಡ ದಾಖಲಾಗಿದೆ.
ಕೋವಿಡ್ 19 ಉಪ ತಳಿ ಆಗಿರುವ ಜೆಎನ್1 ಭಾರತದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಡಿಸೆಂಬರ್ 8ರಂದು ಪತ್ತೆಯಾಗಿದೆ. ಕೋವಿಡ್ 19ನ ಉಪತಳಿ ಜೆಎನ್1 ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಭಾರತೀಯ ಸಾರ್ಸ್-ಕೋವ್-2 ಜಿನೋಮ್ ಒಕ್ಕೂಟದ ಮುಖ್ಯಸ್ಥ ಡಾ ಎನ್ ಕೆ ಆರೋರಾ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: JN.1 ತಳಿ ಮೇಲೆ ಕಣ್ಗಾವಲಿಡಿ, ಕೋವಿಡ್ ಏರಿಕೆ ಕಾಣದಂತೆ ಜಾಗ್ರತೆ ವಹಿಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ