ನಿದ್ದೆ ಮಾಡುವಾಗ ನಮಗೆ ಯಾವುದೇ ಬೆಳಕು ಭಂಗ ತರಕೂಡದು. ಹಾರ್ಮೋನ್ಗಳ ಸಮತೋಲನ ಕಾಪಾಡಲು ಬಹುತೇಕ ಮಂದಿ ಸ್ಲೀಪ್ ಮಾಸ್ಕ್ ಬಳಸುವುದುಂಟು. ಮಲಗುವ ಸಮಯದಲ್ಲಿ ಕಣ್ಣಿನ ಮೇಲೆ ಹಾಕುವ ಈ ಮಾಸ್ಕ್ನಿಂದ ಗಾಢ ಕತ್ತಲೆ ಆವರಿಸಿ ಬೇಗ ನಿದ್ರೆ ಬರುತ್ತದೆ. ಹೀಗಾಗಿ, ಉತ್ತಮ ಗುಣಮಟ್ಟದ ನಿದ್ದೆಗಿದು ಸಹಾಯಕ. ಅದರಲ್ಲೂ ಪ್ರಯಾಣದ ಸಂದರ್ಭದಲ್ಲಿ ಮಲಗುವಾಗ ಯಾವುದೇ ಅಡಚಣೆ ಇಲ್ಲದೇ ನಿದ್ರೆಗೆ ಜಾರಲು ಇದರ ಬಳಕೆ ಹೆಚ್ಚು. ಸ್ಲೀಪ್ ಮಾಸ್ಕ್ಗಳು ಕೇವಲ ನಿದ್ರೆಗೆ ಮಾತ್ರವಲ್ಲ, ಮಿದುಳಿನ ಅರಿವಿನ ಸಾಮರ್ಥ್ಯವನ್ನೂ ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಹೊಸ ಅಧ್ಯಯನ ಹೇಳುತ್ತದೆ.
ನಿದ್ದೆ ಮಾಡುವ ಸಮಯವು ಹೆಚ್ಚು ನಿರ್ಣಾಯಕ. ಈ ವೇಳೆ ಮಿದುಳು ಜಾಗರೂಕತೆಯಿಂದ ಹೊಸ ಮಾಹಿತಿಗಳನ್ನು ಮಿದುಳಿಗೆ ಎನ್ಕೋಡ್ ಮಾಡುತ್ತದೆ. ನಿದ್ದೆಯ ಸಮಯದಲ್ಲಿ ಕೋಣೆಯಲ್ಲಿ ಉರಿಯುವ ಸಣ್ಣ ದೀಪ, ಕಿಟಕಿಯಿಂದ ನಿದ್ರೆಗೆ ಅಡ್ಡಿಪಡಿಸುವ ಬೀದಿದೀಪದ ಬೆಳಕುಗಳು ಅಡ್ಡಿಪಡಿಸುತ್ತದೆ. ಇಂಥ ಸಂದರ್ಭದಲ್ಲಿ ಸ್ಲೀಪ್ ಮಾಸ್ಕ್ ಧರಿಸಿ ಮಲಗುವುದರಿಂದ ಈ ರೀತಿಯ ಬೆಳಕನ್ನು ನಿರ್ಬಂಧಿಸಿ, ಅದು ಸ್ಮರಣಶಕ್ತಿ ವೃದ್ಧಿಗೆ ಸಹಾಯ ಮಾಡುತ್ತದೆ ಎನ್ನುವುದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿರುವ ಅಂಶ.
ರಾತ್ರಿಯಿಡೀ ಈ ರೀತಿಯ ಸ್ಲೀಪ್ ಮಾಸ್ಕ್ ಧರಿಸಿ ನಿದ್ರಿಸುವುದರಿಂದ ಮರುದಿನಕ್ಕೆ ಮಿದುಳನ್ನು ಎನ್ಕೋಡಿಂಗ್ ಮಾಡಲು ಇದು ನೆರವಾಗುತ್ತದೆ ಎಂದು ಕಾರ್ಡಿಫ್ ಯೂನಿವರ್ಸಿಟಿಯ ಮನಶಾಸ್ತ್ರಜ್ಞ ವಿವಿಯನ್ ಗ್ರೇಸ್ ತಿಳಿಸಿದ್ದಾರೆ. ಈ ಕುರಿತಾಗಿ ಸಂಶೋಧನಾ ಪತ್ರಿಕೆ ಮಂಡಿಸಿರುವ ಅವರು, ನಿದ್ರೆಯ ಮಾಸ್ಕ್ಗಳು ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಲು ಎರಡು ರೀತಿ ಪ್ರಯೋಗಗಳನ್ನು ನಡೆಸಿರುವುದಾಗಿ ತಿಳಿಸಿದ್ದಾರೆ.
ಮೊದಲ ಪ್ರಯೋಗದಲ್ಲಿ 18-35ರ ವಯೋಮಾನದ 94 ಮಂದಿ ಒಂದು ವಾರದ ಕಾಲ ಈ ಸ್ಲೀಪ್ ಮಾಸ್ಕ್ ಧರಿಸಿ ಮಲಗಿದ್ದಾರೆ. ಮತ್ತೊಂದು ವಾರ ಬೆಳಕುಗಳ ನಿಯಂತ್ರಿಸಿದ ಸ್ಥಿತಿಯಲ್ಲಿ ಮಲಗಿದ್ದಾರೆ. ಐದು ದಿನಗಳ ನಿದ್ರಾ ಅವಧಿಯ ಬಳಿಕ ಆರು ಮತ್ತು ಏಳನೇ ದಿನ ಅವರ ಅರಿವಿನ ಮಟ್ಟವನ್ನು ತಿಳಿಯಲಾಗಿದೆ. ಈ ಸಂದರ್ಭದಲ್ಲಿ ಸ್ಲೀಪ್ ಮಾಸ್ಕ್ ಅವರ ಎನ್ಕೋಡಿಂಗ್ನಲ್ಲಿ ಪ್ರಧಾನ ಪಾತ್ರವಹಿಸಿದೆ ಎಂದು ತಿಳಿದು ಬಂದಿದೆ ಎಂದಿದ್ದಾರೆ ಸಂಶೋಧಕರು.
ಎರಡನೇ ಪ್ರಯೋಗದಲ್ಲಿ ಇದೇ ವಯೋಮಾನದ 35 ಮಂದಿ ಸ್ಲೀಪ್ ಮಾಸ್ಕ್ ಬದಲಾಗಿ ನಿದ್ರೆಯ ಮೇಲ್ವಿಚಾರಣೆಗೆ ಸಹಾಯವಾಗುವ ಸಾಧನಗಳನ್ನು ಬಳಸಿದ್ದಾರೆ. ಇವರು ನಿಧಾನಗತಿ ನಿದ್ರೆ ಹೊಂದಿದ್ದು, ಎನ್ಕೋಡಿಂಗ್ ಪ್ರಯೋಜನ ಪುನರಾವರ್ತಿಸಿದೆ. ನಿಧಾನಗತಿಯ ನಿದ್ರೆಯಲ್ಲಿ ಕಳೆದ ಸಮಯದೊಂದಿಗೆ ನೆನಪಿನ ಪ್ರಯೋಜನವನ್ನೂ ಅಂದಾಜು ಮಾಡಲಾಗಿದೆ.
ಸಂಶೋಧನೆಯ ಫಲಿತಾಂಶದಲ್ಲಿ ನಿದ್ರೆ ಸಮಯದಲ್ಲಿ ಬಳಕೆ ಮಾಡುವ ಸ್ಲೀಪ್ ಮಾಸ್ಕ್ ಹೆಚ್ಚು ಪರಿಣಾಮಕಾರಿ ಮತ್ತು ಆಕ್ರಮಣಶೀಲವಲ್ಲದ ನಡವಳಿಕೆ ಹೊಂದಿದೆ ಎಂದು ಇದು ತಿಳಿಸುತ್ತದೆ. ಇದು ಅರಿವಿನ ಕಾರ್ಯಕ್ಕೆ ಪ್ರಯೋಜನ ನೀಡುತ್ತದೆ. ಇದರ ಜೊತೆಗೆ ದೈನಂದಿನ ಕೆಲಸಗಳ ಮೇಲೆ ಅಳೆಯಬಹುದಾದ ಪರಿಣಾಮಗಳಿಗೂ ಕಾರಣವಾಗಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಎಷ್ಟು ನಿದ್ರೆ ಮಾಡ್ತೀರಿ ಎಂಬುದರ ಮೇಲೆ ಕೋವಿಡ್ ಲಸಿಕೆ ಪರಿಣಾಮ ಅವಲಂಬಿತವಾಗಿದೆ!