ವಾತಾವರಣದಲ್ಲಾಗುವ ಬದಲಾವಣೆ ಚರ್ಮದ ಮೃದುತ್ವದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಚಳಿಗಾಲದ ಸಮಯದಲ್ಲಿ ಅನೇಕರಲ್ಲಿ ಕೈ ಮತ್ತು ಕಾಲು ಒಡೆಯುವುದು ಸಹಜ. ಚರ್ಮದ ಶುಷ್ಕತೆಯಿಂದ ಬಳಲುವುದು ಸಾಮಾನ್ಯ. ಈ ರೀತಿ ಯಾವುದೇ ಸಮಸ್ಯೆ ಕಾಡದಂತೆ ಕಾಪಾಡಲು ಕೆಲವು ಕ್ರಮವನ್ನು ವಹಿಸುವುದು ಅಗತ್ಯ. ಈ ಮೂಲಕ ಕೈ ಮತ್ತು ಪಾದದ ಮೃದುತ್ವವನ್ನು ಕಾಪಾಡಿಕೊಳ್ಳಬಹುದು.
ಚಳಿಗಾಲದಲ್ಲಿ ಅನೇಕರ ಪಾದಗಳಲ್ಲಿ ಡೆಡ್ಸೆಲ್ ಹೆಚ್ಚಿ ಮೃದುತ್ವ ಮರೆಯಾಗುತ್ತದೆ. ಇಂತಹ ಬಿರಿದ ಪಾದದ ಸಮಸ್ಯೆಯಿಂದ ನಿವಾರಣೆ ಪಡೆಯಬೇಕು ಎಂದರೆ, ಕೊಬ್ಬರಿ ಎಣ್ಣೆಯನ್ನು ರಾತ್ರಿ ಹೊತ್ತು ಪಾದಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ಬೆಳಗ್ಗೆ ಪಾದವನ್ನು ಸಕ್ಕರೆಯಿಂದ ಉಜ್ಜಿ, ಪುಮೈಸ್ ಕಲ್ಲಿನಿಂದ ಚೆನ್ನಾಗಿ ಸ್ಕ್ರಬ್ ಮಾಡಬೇಕು. ಪ್ರತಿ ಎರಡು ದಿನಗಳಿಗೊಮ್ಮೆ ಈ ರೀತಿ ಮಾಡುವುದರಿಂದ ಪಾದದ ಬಿರುಕಿನ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಇದರ ಜೊತೆಗೆ ಕೈ ಮತ್ತು ಕಾಲುಗಳಿಗೆ ಮಾಯಶ್ಚರೈಸರ್ ಹಚ್ಚುವುದನ್ನು ಮರೆಯಬಾರದು. ಈ ಋತುಮಾನದಲ್ಲಿ ವಾಕ್ಗೆ ಹೋಗುವಾಗ ತಪ್ಪದೇ, ಸಾಕ್ಸ್ ಧರಿಸಬೇಕು.
ಅತಿ ಸುಲಭವಾಗಿ ಈ ಸಮಸ್ಯೆಗೆ ಪರಿಹಾರ ಸಿಗಬೇಕು ಎಂದರೆ, ಕೈ ಮತ್ತು ಕಾಲುಗಳಿಗೆ ಪ್ರತಿನಿತ್ಯ ಶಿಯಾ ಬಟ್ಟರ್ (ಶಿಯಾ ಬೆಣ್ಣೆ)ಯನ್ನು ಹಚ್ಚಿ ಹತ್ತು ನಿಮಿಷ ಮಸಾಜ್ ಮಾಡುವುದರಿಂದ ಚರ್ಮ ಮೃದು ಆಗುತ್ತದೆ. ಎಪ್ಸಮ್ ಉಪ್ಪು ಕೂಡ ಒಣ ಚರ್ಮಗಳ ಸಮಸ್ಯೆಗೆ ಉತ್ತಮ ಪರಿಹಾರ ಆಗಿದೆ. ಬೆಚ್ಚಗಿನ ನೀರಿಗೆ ಈ ಎಪ್ಸಮ್ ಉಪ್ಪನ್ನು ಹಾಕಿ ಕಾಲು ಅಥವಾ ಕೈಯನ್ನು ಅದರಲ್ಲಿ 10 ನಿಮಿಷ ಇಡಬೇಕು. ವಾರದಲ್ಲಿ ಮೂರು ದಿನ ಈ ರೀತಿ ಮಾಡುವುದರಿಂದ ಉತ್ತಮ ರಕ್ತ ಸಂಚಾರ ಕೂಡ ಆಗಲಿದ್ದು, ಅದರ ಮಯಶ್ಚರೈಸರ್ ಕಾಪಾಡಲು ಸಹಕಾರಿ.
ಅರ್ಧ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಸಕ್ಕರೆಯಲ್ಲಿ ನೆನೆಸಬೇಕು. ಬಳಿಕ ಅದನ್ನು ಕೈ ಮತ್ತು ಕಾಲಿಗೆ ಚೆನ್ನಾಗಿ ಮಸಾಜ್ ಮಾಡಬೇಕು. ಇದು ಒಣ ಮತ್ತು ಒರಟು ತ್ವಚೆಯನ್ನು ಹೋಗಲಾಡಿಸುತ್ತದೆ. ಇದಾದ ಬಳಿಕ ಮಲಗುವ ಮುನ್ನ ಕೈ ಮತ್ತು ಕಾಲಿಗೆ ಆಲಿವ್ ಎಣ್ಣೆಯನ್ನು ಹಾಕಿ ಮಸಾಜ್ ಮಾಡುವುದರಿಂದ ಚರ್ಮ ಮೃದುವಾಗುತ್ತದೆ.
ನಿರಂತರವಾಗಿ ಬದಲಾಗುತ್ತಿರುವ ಹವಾಮಾನವು ನಮ್ಮ ಚರ್ಮದ ರಂಧ್ರಗಳ ಮೇಲೂ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಜನರು ಇದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ ಮತ್ತು ರಂಧ್ರಗಳಲ್ಲಿ ಕೊಳಕು ಸಂಗ್ರಹವಾಗುವುದರಿಂದ, ಮೊಡವೆಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ನಿಯಮಿತವಾಗಿ ಚರ್ಮದ ಟೋನಿಂಗ್ ಕೂಡ ಬಹಳ ಮುಖ್ಯ. ಚರ್ಮದ ಟೋನಿಂಗ್ಗಾಗಿ, ನಿಂಬೆ ರಸ, ಸೌತೆಕಾಯಿ ನೀರು ಮತ್ತು ಗ್ರೀನ್ ಟೀ ಬಳಸಬಹುದು. ಮಲಗುವ ಮುನ್ನ ಫೇಸ್ವಾಶ್ನಿಂದ ಮುಖ ತೊಳೆದ ಬಳಿಕ ನಿಮ್ಮ ಮುಖಕ್ಕೆ ಸ್ವಲ್ಪ ರೋಸ್ ವಾಟರ್ ಸಿಂಪಡಿಸಿದರೆ, ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.
ಚಳಿಗಾಲದಲ್ಲಿ ಚರ್ಮಕ್ಕೆ ಇತರ ಯಾವುದೇ ಋತುವಿಗಿಂತ ಹೆಚ್ಚಿನ ಕಾಳಜಿ ಬೇಕಾಗುತ್ತದೆ.ಆದ್ದರಿಂದ, ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಕ್ಲೆನ್ಸಿಂಗ್, ಟೋನಿಂಗ್, ಎಫ್ಫೋಲಿಯೇಶನ್ ಮತ್ತು ಮಾಯಿಶ್ಚರೈಸೇಶನ್ ಬಗ್ಗೆ ಗಮನ ಹರಿಸಿ. ಅಲೋವೆರಾ ಜೆಲ್ ಬಳಕೆಯು ಸಹ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ನೀವು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ: ರಕ್ತಹೀನತೆ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ..