ನವದೆಹಲಿ: ದೇಶದಲ್ಲಿ ಧೂಮಪಾನ ನಿಷೇಧಿಸಿ ಆದೇಶ ಹೊರಡಿಸುವ ಮೂಲಕ ಜಗತ್ತಿನ ಗಮನ ಸೆಳೆದ ನ್ಯೂಜಿಲ್ಯಾಂಡ್ ಇದೀಗ ಈ ನೀತಿಯಿಂದ ಯುಟರ್ನ್ ಹೊಡೆದಿದೆ. ತೆರಿಗೆ ಕಡಿತ ನಿಧಿಗಾಗಿ ಧೂಮಪಾನ ನಿಷೇಧ ರದ್ದುಗೊಳಿಸಲು ಮುಂದಾಗಿದ್ದು, ಈ ನಡೆ ಆರೋಗ್ಯ ತಜ್ಞರಲ್ಲಿ ಕಳವಳ ಉಂಟುಮಾಡಿದೆ.
2022ರಲ್ಲಿ 2008ರ ಬಳಿಕ ಜನಿಸಿದವರಿಗೆ ಧೂಮಪಾನ ಮಾರಾಟ ನಿಷೇಧಿಸಿ, ಪ್ರಧಾನಿ ಜಸಿಂಡಾ ಆರ್ಡೆನ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು. ಈ ಮೂಲಕ ಧೂಮಪಾನ ಸಂಬಂಧಿ ಸಾವಿರಾರು ಸಾವಿನ ತಡೆಗೆ ಗುರಿ ಹೊಂದಲಾಗಿತ್ತು.
ಆದರೆ ಇದೀಗ ನೂತನ ಹಣಕಾಸು ಸಚಿವ ನಿಕೊಲಾ ವಿಲ್ಲಿಸ್, ಈ ಆದೇಶವನ್ನು 2024ರ ಮಾರ್ಚ್ ಬಳಿಕ ತೆಗೆದು ಹಾಕಲಾಗುವುದು. ಸಿಗರೇಟ್ ಮಾರಾಟದಿಂದ ಬರುವ ಆದಾಯವು ಒಕ್ಕೂಟದ ತೆರಿಗೆ ಕಡಿತದ ಕಡೆಗೆ ಹೋಗುತ್ತದೆ ಎಂದು ಹೇಳಿದ್ದಾರೆ.
ಈ ಆದೇಶವನ್ನು ರದ್ದುಗೊಳಿಸುವುದರಿಂದ ಮುಂದಿನ ಪೀಳಿಗೆಯ ಸಾವಿರಾರು ಜೀವಗಳು ಬೆಲೆ ತೆರಲೇಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ತಜ್ಞರು. ಇದು ವಿಶ್ವದ ಪ್ರಮುಖ ಅತ್ಯುತ್ತಮ ಆರೋಗ್ಯ ಕ್ರಮದಿಂದ ಹಿಂದೆ ಸರಿಯುವ ನಿರ್ಧಾರ ಎಂದು ತಂಬಾಕು ನಿಯಂತ್ರಣ ಸಂಶೋಧಕ ರಿಚರ್ಡ್ ಎಡ್ವರ್ಡ್ ತಿಳಿಸಿದ್ದಾರೆ ಎಂದು ಬಿಬಿಸಿ ಸುದ್ದಿವಾಹಿನಿ ಉಲ್ಲೇಖಿಸಿದೆ. ನ್ಯೂಜಿಲ್ಯಾಂಡ್ನ ಬಹುತೇಕ ಆರೋಗ್ಯ ಗುಂಪುಗಳು ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಸರ್ಕಾರಕ್ಕೆ ಮನವಿ ಮಾಡಿವೆ.
ನ್ಯೂಜಿಲ್ಯಾಂಡ್ ಸಂಶೋಧಕ ಕ್ರಿಸ್ಟೋಫರ್ ಲುಕ್ಸೊನ್ ಹೇಳುವ ಪ್ರಕಾರ, ತಂಬಾಕು ನಿಷೇಧ ನಿರ್ಧಾರದಿಂದ ಹಿಂದೆ ಸರಿಯುವುದರಿಂದ ತಂಬಾಕಿನ ಕಳ್ಳ ಮಾರುಕಟ್ಟೆಗೆ ಕಡಿವಾಣ ಹಾಕುವ ಜೊತೆಗೆ ಈ ಬಗ್ಗೆ ದಾಖಲಾಗುತ್ತಿರುವ ಅಪರಾಧಗಳನ್ನೂ ನಿಲ್ಲಿಸಬಹುದಾಗಿದೆ. ಸಣ್ಣ ನಗರದ ಅಂಗಡಿಗಳಲ್ಲಿ ಸಿಗರೇಟ್ ವಿತರಣೆ ಗುರಿಯಾಗಿಸಿ ನಡೆಯುವ ಅಪರಾಧಗಳಿಗೆ ಕಾರಣವಾಗುತ್ತಿದೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.
ಆರೋಗ್ಯದ ಮೇಲೆ ಪರಿಣಾಮ: ಸರ್ಕಾರದ ಧೂಮಪಾನ ನಿಷೇಧದ ಕಾನೂನು ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ ಧೂಮಪಾನ ವಿರೋಧಿ ಗುಂಪಾಗಿರುವ ಹೆಲ್ತ್ ಕೊಲಿಷನ್ ಅಯೋಟೇರೋವಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದು ಪ್ರತಿ ವರ್ಷ 5,000 ಜೀವಗಳ ಬಲಿ ಪಡೆಯುತ್ತದೆ. ಅದರಲ್ಲೂ ವಿಶೇಷವಾಗಿ ಹೆಚ್ಚಿನ ಧೂಮಪಾನ ದರ ಹೊಂದಿರುವ ಮಾವೋರಿಯಲ್ಲಿ ಇದರ ಪರಿಣಾಮ ಹೆಚ್ಚಲಿದೆ. ಇದು ಸಾರ್ವಜನಿಕ ಆರೋಗ್ಯದ ನಷ್ಟ ಮತ್ತು ತಂಬಾಕು ಉದ್ಯಮದ ದೊಡ್ಡ ಗೆಲುವು ಎಂದು ಪ್ರೋ ಲೀಸಾ ಟೆ ಮೊರೆಂಗಾ ಟೀಕಿಸಿದ್ದಾರೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಯುವ ಜನತೆಯ ಆರೋಗ್ಯದ ದೃಷ್ಟಿಯಿಂದ ದೇಶದಲ್ಲಿ ಧೂಮಪಾನ ನಿಷೇಧ ಹೇರಿದ್ದರು. ಈ ನೀತಿಯಿಂದ ಪ್ರೇರಣೆಗೊಂಡ ನ್ಯೂಜಿಲ್ಯಾಂಡ್ ಕೂಡ ಇದೇ ಹಾದಿ ತುಳಿದಿದ್ದು. ಆದರೆ, ಇದೀಗ ನ್ಯೂಜಿಲ್ಯಾಂಡ್ ತನ್ನ ಈ ನಿಯಮವನ್ನು ಹಿಂಪಡೆಯಲು ಮುಂದಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಭಾರತದಲ್ಲಿ ವಿನಾಶಕಾರಿ ಪರಿಣಾಮ ಬೀರುತ್ತಿದೆ ತಂಬಾಕು; ಜಾಗತಿಕ ಅಧ್ಯಯನದಿಂದ ಬಯಲು