ಬೆಂಗಳೂರು: ವೈದ್ಯೋ ನಾರಾಯಣೋ ಹರಿ ಎಂಬಂತೆ ಭೂಮಿ ಮೇಲಿನ ದೇವರು ಎಂದರೆ ಅದು ವೈದ್ಯರು ಎಂಬ ಮಾತಿಗೆ. ಈ ಮೂಲಕ ವೈದ್ಯರ ಸೇವೆಗೆ ಗೌರವವನ್ನು ಸಲ್ಲಿಸಲಾಗುವುದು. ರೋಗಿಗಳ ಜೀವ ಉಳಿಸುವ ಸಲುವಾಗಿ ಪ್ರತಿ ಕ್ಷಣವೂ ಎಂತಹದ್ದೆ ಪರಿಸ್ಥಿತಿಯಲ್ಲಿ ನಿಸ್ವಾರ್ಥವಾಗಿ ಉತ್ತಮ ಸೇವೆಯನ್ನು ವೈದ್ಯರು ನೀಡುತ್ತದೆ. ವ್ಯಕ್ತಿಯೊಬ್ಬ ತನ್ನ ದೇಹದ ಬಗ್ಗೆ ಸಂಪೂರ್ಣ ಅಸಹಾಕತೆ ಹೊಂದಿದಾಗ ಆತ ಗುಣಮುಖವಾಗುವ ಭರವಸೆಯೊಂದಿಗೆ ವೈದ್ಯರ ಬಳಿ ಹೋಗುತ್ತಾನೆ. ಔಷಧಗಳು ರೋಗಗಳನ್ನು ಗುಣಪಡಿಸಿದರೆ, ವೈದ್ಯ ರೋಗಿಯನ್ನು ಗುಣಪಡಿಸುತ್ತಾನೆ ಎಂಬ ಮಾತಿದೆ. ಅದರಂತೆ ವೈದ್ಯರ ಈ ಸೇವೆ ಮತ್ತು ಸಮರ್ಪಣೆಯನ್ನು ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುವುದು.
ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಣೆ ಮಾಡುವ ಹಿಂದೆ ಒಂದು ಪ್ರಮುಖ ಕಾರಣವೂ ಇದೆ. ಇದು ಭಾರತದ ಶ್ರೇಷ್ಠ ವೈದ್ಯರಲ್ಲಿ ಒಬ್ಬರಾದ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ ಬಿಧಾನ್ ಚಂದ್ರ ರಾಯ್ ಅವರಿಗೆ ಗೌರವ ನೀಡುವ ಉದ್ದೇಶವನ್ನು ಈ ದಿನ ಹೊಂದಿದೆ. ಡಾ ರಾಯ್ ವೈದ್ಯಕೀಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದು, ಬಂಗಾಳದ ದೂರದೃಷ್ಟಿಯ ನಾಯಕತ್ವಕ್ಕಾಗಿ ಬಂಗಾಳದ ವಾಸ್ತುಶಿಲ್ಪಿ ಎಂದು ಕೂಡ ಕರೆಯಲ್ಪಡುತ್ತಾರೆ. ಡಾ ರಾಯ್ ದೇಶದ ಅತ್ಯುನ್ನತ ನಾಗರೀಕ ಗೌರವವಾದ ಭಾರತ ರತ್ನ ಪ್ರಶಸ್ತಿಗೂ 1961ರಲ್ಲಿ ಭಾಜನರಾದರು. ಭಾರತ ಸರ್ಕಾರ 1991ರಿಂದ ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಆರಂಭಿಸಲು ಘೋಷಿಸಿತು.
ಇತ್ತೀಚೆಗೆ ಜಗತ್ತು ಕೊರೊನಾ ಸಾಂಕ್ರಾಮಿಕತೆಯಿಂದ ಬಳಲುತ್ತಿದ್ದಾಗ, ವಾರದ 7ದಿನ ದಿನದ 24 ಗಂಟೆಯೂ ಸೇವೆ ನೀಡಿದ ವೈದ್ಯರು ಸಾವಿರಾರು ಜೀವ ಉಳಿಸಲು ಹೋರಾಡಿದರು. ಇಡೀ ಜಗತ್ತು ಸೋಂಕಿನ ಭಯದಲ್ಲಿದ್ದಾಗ, ಈ ಭಯವನ್ನು ಮರೆತು ಅವರು ರೋಗಿಗಳ ಚಿಕಿತ್ಸೆಗೆ ಮುಂದಾದರು. ಈ ಸಂದರ್ಭದಲ್ಲಿ ವೈದ್ಯರು ನಿರ್ವಹಿಸಿದ್ದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.
ಜಗತ್ತಿನಲ್ಲಿ ಅತ್ಯಂತ ಕ್ಲಿಷ್ಟಕರ ಉದ್ಯೋಗದಲ್ಲಿ ವೈದ್ಯ ವೃತ್ತಿ ಒಂದಾಗಿದ್ದು, ಉದಾತ್ತ ಹುದ್ದೆಗಳಲ್ಲಿ ಒಂದಾಗಿದೆ. ಸ್ವಾಸ್ಥ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಹಗಲಿರುಳು ಜನರ ಸೇವೆ ಸಿದ್ದವಾಗಿರುವ ಇಂತಹ ವೈದ್ಯರ ಸೇವೆ ಪ್ರಶಂಸೆ ಮಾಡಲು ಒಂದು ದಿನ ಸಾಕಾಗುವುದಿಲ್ಲ. ಸಮಾಜದಲ್ಲಿ ವೈದ್ಯರ ಪ್ರಾಮುಖ್ಯತೆಯನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ದಿನ ಅವರಿಗೆ ಗೌರವ ಸಮರ್ಪಣೆ ಜೊತೆ ವಿವಿಧ ಕಾರ್ಯಗಾರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ಭಾರತದಲ್ಲಿ ಜುಲೈ 1ರಂದು ವೈದ್ಯರ ದಿನಾಚರಣೆ ಮಾಡಲಾಗುತ್ತಿದೆ. ಇನ್ನು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ವೈದ್ಯರ ದಿನವನ್ನು ಬೇರೆ ದಿನದಂದು ಆಚರಿಸಲಾಗುತ್ತದೆ. ಅಮೆರಿಕದಲ್ಲಿ ಮಾರ್ಚ್ 30ರಂದು, ಇರಾನ್ನಲ್ಲಿ ಆಗಸ್ಟ್ 23 ರಂದು ಕ್ಯೂಬಾದಲ್ಲಿ ಡಿಸೆಂಬರ್ 3ರಂದು ವೈದ್ಯರ ದಿನ ಆಚರಿಸಲಾಗುವುದು.
ಇದನ್ನೂ ಓದಿ: 30ರ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಮೂತ್ರಪಿಂಡ ಕಸಿ: ಫೋರ್ಟಿಸ್ ಆಸ್ಪತ್ರೆ ವೈದ್ಯರಿಂದ ವಿಶ್ವದಲ್ಲೇ ಅಪರೂಪದ ಚಿಕಿತ್ಸೆ!