ತಿರುವನಂತಪುರ : ಕೇರಳದಲ್ಲಿ ಸಾಂಕ್ರಾಮಿಕ ಜ್ವರದ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಈ ಹಿನ್ನೆಲೆ ಜನರು ಆತಂಕಕ್ಕೆ ಒಳಗಾಗಿದ್ದು, ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ. ಕಳೆದ 10 ದಿನದಲ್ಲಿ ರಾಜ್ಯದ 10 ಸಾವಿರ ಮಂದಿ ಈ ಸಂಬಂಧ ಚಿಕಿತ್ಸೆ ಪಡೆದಿದ್ದಾರೆ. ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳು ಜನರ ಸಾಲುಗಳಿಂದ ಭರ್ತಿಯಾಗಿದ್ದು, ಜನರು ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ಖಾಸಗಿ ಆಸ್ಪತ್ರೆಗಳೂ ಇದಕ್ಕೆ ಹೊರತಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಅಂಕಿ ಅಂಶಗಳಿಂದ ಗೊತ್ತಾಗಿದೆ.
ಇನ್ನು ರಾಜ್ಯದಲ್ಲಿ ಡೆಂಗ್ಯೂ ಮತ್ತು ಇಲಿ ಜ್ವರಕ್ಕೆ ಇಲ್ಲಿಯವರೆಗೆ 23 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕೂಡ ಎಚ್ಚರಿಕೆ ಘೋಷಿಸಿದೆ. ಇದರ ಬೆನ್ನಲ್ಲೇ ನಿನ್ನ ಒಂದೇ ದಿನವೇ ಅಂದರೆ ಜೂನ್ 19ರಂದು 13 ಸಾವಿರ ಮಂದಿ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದಾರೆ. 12,984 ಜನರು ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದು, 180 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೂನ್ ಆರಂಭವಾದಾಗಿನಿಂದ ಈ ಸಾಂಕ್ರಾಮಿಕ ಜ್ವರದ ಸೋಂಕಿನಲ್ಲಿ ಹೆಚ್ಚಳ ಕಂಡು ಬಂದಿದೆ. ಜೂನ್ನಲ್ಲಿ ಆರಂಭದಿಂದ ಜೂನ್ 19ರ ವರೆಗೆ 1,61,346 ಮಂದಿ ಚಿಕಿತ್ಸೆ ಪಡೆದಿದ್ದಾರೆ.
ಡೆಂಗ್ಯೂ ಜ್ವರ ಮತ್ತು ಲೆಪ್ಟೊಸ್ಪಿರೋಸಿಸ್ ಹೆಚ್ಚಳ: ರಾಜ್ಯದಲ್ಲಿ ಸಾಂಕ್ರಾಮಿಕ ಜ್ವರದ ಜೊತೆಗೆ ಡೆಂಗ್ಯೂ ಜ್ವರ ಮತ್ತು ಲೆಪ್ಟೊಸ್ಪಿರೋಸಿಸ್ ಕೂಡ ಹೆಚ್ಚಾಗಿದೆ. ನಿನ್ನೆ ಒಂದೇ ದಿನದಲ್ಲಿ 110 ಮಂದಿಯಲ್ಲಿ ಜ್ವರ ದೃಢಪಟ್ಟಿದೆ. 218 ಮಂದಿಯಲ್ಲಿ ಡೆಂಗ್ಯೂ ಶಂಕೆ ವ್ಯಕ್ತವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯದ ಎರ್ನಾಕುಲಂ ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 43 ಜನರಲ್ಲೂ ಡೆಂಗ್ಯೂ ಪತ್ತೆಯಾಗಿದ್ದು, 55 ಜನರು ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿಯವರೆಗೆ ಅಂದರೆ ಜೂನ್ ಮಾಸದಲ್ಲಿ 1011 ಜನರಲ್ಲಿ ಡೆಂಗ್ಯೂ ಪತ್ತೆಯಾಗಿದೆ.
ಲೆಪ್ಟೊಸ್ಪಿರೋಸಿಸ್ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಜೂನ್ 19ರ ಒಂದೇ ದಿನ 8 ಮಂದಿಗೆ ಲೆಪ್ಟೊಸ್ಪಿರೋಸಿಸ್ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ 14 ಮಂದಿಗೆ ಲೆಪ್ಟೊಸ್ಪಿರೋಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂನ್ ಆರಂಭದಿಂದ ಒಟ್ಟು 76 ಮಂದಿಯಲ್ಲಿ ಲೆಪ್ಟೊಸ್ಪಿರೋಸಿಸ್ ಸೋಂಕು ಪತ್ತೆಯಾಗಿದ್ದು, 116 ಮಂದಿ ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಲೆಪ್ಟೊಸ್ಪಿರೋಸಿಸ್ ಸೋಕಿನ ಬಗ್ಗೆ ಎಚ್ಚರವಹಿಸುವಂತೆ ಜನರಿಗೆ ಸೂಚನೆ ನೀಡಿದೆ. ಈ ಸೋಂಕು ಅಪಾಯಕಾರಿಯಾಗಿದ್ದು, ಈ ಹಿನ್ನೆಲೆ ನಿರ್ಲಕ್ಷ್ಯ ಬೇಡ ಎಂದು ತಿಳಿಸಿದೆ. ಪೂರ್ವ ಮಾನ್ಸೂನ್ನ ಶುಚಿತ್ವ ಮತ್ತು ಕಸ ವಿಲೇವಾರಿಯಲ್ಲಿ ಕೊಚ್ಚಿ ಜಿಲ್ಲಾಡಳಿತ ನಿರ್ವಹಣೆಯಲ್ಲಿ ಸೋತ ಹಿನ್ನೆಲೆ ಈ ರೀತಿ ಸಾಂಕ್ರಾಮಿಕ ಸೋಂಕು ರಾಜ್ಯದಲ್ಲಿ ಹೆಚ್ಚಾಗಲು ಕಾರಣವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಡೆಂಗ್ಯೂ ವಾರ್ಡ್: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಆಸ್ಪತ್ರೆಗಳಲ್ಲಿ ಈ ಸೋಂಕಿನ ರೋಗಿಗಳ ಚಿಕಿತ್ಸೆಗೆ ವಿಶೇಷ ವಾರ್ಡ್ ಅನ್ನು ನಿರ್ಮಿಸಲಾಗಿದೆ. ಈ ಮೂಲಕ ಸೊಳ್ಳೆ ಕಡಿತದ ಈ ಸೋಂಕು ಮತ್ತೊಬ್ಬರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಇದರ ಜೊತೆಗೆ ಮತ್ತಿತರ ಜ್ವರದ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ವಿಶೇಷ ಜ್ವರದ ವಾರ್ಡ್ಗಳನ್ನು ಕೂಡ ಮಾಡಲಾಗಿದೆ. ಆರೋಗ್ಯ ಇಲಾಖೆ ವೈದ್ಯಕೀಯ ಕಾಲೇಜುಗಳಲ್ಲಿ ವಿಶೇಷ ವಾರ್ಡ್ ಮತ್ತು ಐಸಿಯುಗಳ ನಿರ್ಮಾಣಕ್ಕೆ ಸೂಚನೆ ನೀಡಿದ್ದು, ಈ ಮೂಲಕ ಭವಿಷ್ಯದ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ.
ಇದನ್ನೂ ಓದಿ: Viral fever: ಕೇರಳದಲ್ಲಿ ಹೆಚ್ಚಿದ ಡೆಂಘಿ, ಇಲಿ ಜ್ವರ ಹಾವಳಿ; 23 ಮಂದಿ ಸಾವು