ಜಿನೀವಾ : ವಿಶ್ವದ ಒಟ್ಟು ಜನಸಂಖ್ಯೆಯ ಸುಮಾರು 17.5 ರಷ್ಟು ಅಂದರೆ ಪ್ರತಿ 6 ರಲ್ಲಿ ಓರ್ವ ತಮ್ಮ ಜೀವಮಾನದಲ್ಲಿ ಬಂಜೆತನದ ಸಮಸ್ಯೆ ಎದುರಿಸುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಮಂಗಳವಾರ ಪ್ರಕಟಿಸಿದ ವರದಿಯಲ್ಲಿ ಹೇಳಲಾಗಿದೆ. ಪ್ರದೇಶದಿಂದ ಪ್ರದೇಶಗಳ ನಡುವೆ ಬಂಜೆತನದ ಹರಡುವಿಕೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿದೆ ಎಂಬುದನ್ನು ವರದಿ ತೋರಿಸಿದೆ. ಇಡೀ ಜೀವಿತಾವಧಿಯಲ್ಲಿ ಬಂಜೆತನದ ಹರಡುವಿಕೆಯು ಹೆಚ್ಚಿನ ಆದಾಯದ ದೇಶಗಳಲ್ಲಿ ಶೇಕಡಾ 17.8 ಮತ್ತು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಶೇಕಡಾ 16.5 ಆಗಿದೆ. ವರದಿಯ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್, ಬಂಜೆತನವು ತಾರತಮ್ಯ ಮಾಡುವುದಿಲ್ಲ ಎಂಬ ಮುಖ್ಯ ಸತ್ಯವನ್ನು ವರದಿ ಬಹಿರಂಗಪಡಿಸಿದೆ ಎಂದಿದ್ದಾರೆ.
ಬಂಜೆತನ ಪೀಡಿತ ಜನರ ಇಷ್ಟು ದೊಡ್ಡ ಪ್ರಮಾಣವನ್ನು ಗಮನಿಸಿದರೆ ಸಂತಾನ ಫಲವತ್ತತೆ ಚಿಕಿತ್ಸಾ ಸೌಲಭ್ಯಗಳನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಬೇಕೆಂಬ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಇನ್ನು ಮುಂದೆ ಆರೋಗ್ಯ ಸಂಶೋಧನೆ ಮತ್ತು ನೀತಿ ರೂಪಿಸುವಲ್ಲಿ ಈ ಸಮಸ್ಯೆಯನ್ನು ಕಡೆಗಣಿಸುವಂತಿಲ್ಲ ಎಂಬುದನ್ನು ಸೂಚಿಸುತ್ತದೆ. ಈ ಮೂಲಕ ಮಾತೃತ್ವ ಅಥವಾ ಪಿತೃತ್ವವನ್ನು ಪಡೆಯಲು ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಮಾರ್ಗಗಳು ಲಭ್ಯವಾಗುವಂತೆ ಮಾಡಬೇಕಿದೆ.
ಬಂಜೆತನವು ಗಂಡು ಅಥವಾ ಹೆಣ್ಣು ಸಂತಾನೋತ್ಪತ್ತಿ ವ್ಯವಸ್ಥೆಯ ಕಾಯಿಲೆಯಾಗಿದೆ. 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ನಿಯಮಿತ ಅಸುರಕ್ಷಿತ ಲೈಂಗಿಕ ಸಂಭೋಗದ ನಂತರವೂ ಗರ್ಭಧಾರಣೆಯನ್ನು ಸಾಧಿಸಲು ವಿಫಲವಾಗುವುದು ಬಂಜೆತನವಾಗಿರುತ್ತದೆ. ಬಂಜೆತನವು ವಿಪರೀತ ಯಾತನೆ, ಕಳಂಕ ಮತ್ತು ಆರ್ಥಿಕ ಸಂಕಷ್ಟವನ್ನು ಉಂಟುಮಾಡಬಹುದು, ಇದು ಜನರ ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಯ ಗಂಭೀರತೆ ಹೆಚ್ಚಾಗಿದ್ದರೂ ಬಂಜೆತನದ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಪರಿಹಾರಗಳು, ಇನ್ ವಿಟ್ರೊ ಫರ್ಟಿಲೈಸೇಶನ್ (IVF) ನಂತಹ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನಗಳು ದುಬಾರಿ ಚಿಕಿತ್ಸಾ ವೆಚ್ಚ, ಸಾಮಾಜಿಕ ಕಳಂಕ ಮತ್ತು ಸೀಮಿತ ಲಭ್ಯತೆಯಿಂದಾಗಿ ಅನೇಕರಿಗೆ ಇವು ಸುಲಭವಾಗಿ ಲಭ್ಯವಾಗುತ್ತಿಲ್ಲ.
ಪ್ರಸ್ತುತ ಹೆಚ್ಚಿನ ದೇಶಗಳಲ್ಲಿ ಫಲವತ್ತತೆಯ ಚಿಕಿತ್ಸೆಗಳನ್ನು ಹೆಚ್ಚಾಗಿ ಜನ ತಮ್ಮ ಹಣದಿಂದಲೇ ಪಡೆದುಕೊಳ್ಳುತ್ತಾರೆ. ಇದು ಸಾಮಾನ್ಯವಾಗಿ ಭರಿಸಲಾಗದ ಹಣಕಾಸಿನ ವೆಚ್ಚಗಳಿಗೆ ಕಾರಣವಾಗುತ್ತದೆ. ದುಬಾರಿ ವೆಚ್ಚಗಳ ಕಾರಣದಿಂದ ಅನೇಕರು ಬಂಜೆತನ ಚಿಕಿತ್ಸೆ ಪಡೆಯುವುದು ಸಾಧ್ಯವಾಗುವುದಿಲ್ಲ ಅಥವಾ ಒಂದು ವೇಳೆ ದುಬಾರಿ ಚಿಕಿತ್ಸೆ ಪಡೆದುಕೊಂಡರೂ ಅವರ ಕುಟುಂಬ ಬಡತನದಲ್ಲಿ ನರಳುವಂತಾಗುತ್ತದೆ ಎಂದು ವರದಿ ತಿಳಿಸಿದೆ. ಬಂಜೆತನಕ್ಕೆ ಚಿಕಿತ್ಸೆ ಪಡೆಯಬೇಕಾದರೆ ಲಕ್ಷಾಂತರ ಅತ್ಯಧಿಕ ಪ್ರಮಾಣದ ಹಣ ಖರ್ಚು ಮಾಡುತ್ತಾರೆ. ಇದು ಪ್ರಮುಖ ಸಮಸ್ಯೆಯಾಗಿದೆ ಮತ್ತು ಪೀಡಿತರಿಗೆ ಬಡತನ ಉಂಟು ಮಾಡುವ ಪ್ರಕ್ರಿಯೆಯಾಗಿದೆ ಎಂದು WHO ನಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಮತ್ತು ಸಂಶೋಧನೆಯ ನಿರ್ದೇಶಕ ಪಾಸ್ಕೇಲ್ ಅಲೋಟೆ ಹೇಳಿದರು.
ಹಲವಾರು ದೇಶಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿರುವ ಮಧ್ಯೆ ಕೆಲ ದೇಶಗಳಲ್ಲಿ ಈ ಸಮಸ್ಯೆಗೆ ಸಂಬಂಧಿಸಿದಂತೆ ಯಾವುದೇ ಅಂಕಿ ಅಂಶಗಳೇ ಲಭ್ಯವಿಲ್ಲ. ಬಂಜೆತನದ ಬಗ್ಗೆ ತಯಾರಿಸಲಾಗಿರುವ ವಿಶ್ವ ಸಂಸ್ಥೆಯ ಈ ವರದಿಯು 1990 ರಿಂದ 2021 ರವರೆಗಿನ 133 ಅಧ್ಯಯನಗಳನ್ನು ಆಧರಿಸಿದೆ. ಇದು ಜಾಗತಿಕ ಮತ್ತು ಪ್ರಾದೇಶಿಕ ಬಂಜೆತನದ ಹರಡುವಿಕೆಯ ಬಗ್ಗೆ ಒಂದಿಷ್ಟು ಮಾಹಿತಿ ನೀಡುತ್ತದೆ.
ಇದನ್ನೂ ಓದಿ : ಆರ್ಟೆಮಿಸ್-2 ಬಾಹ್ಯಾಕಾಶ ಯಾನಕ್ಕೆ ತಂಡ ಪ್ರಕಟ: ಚಂದ್ರನ ಅಧ್ಯಯನಕ್ಕಾಗಿ ನಾಸಾ ಮಿಷನ್