ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನರು ಚಳಿಯಿಂದ ತತ್ತರಿಸುತ್ತಿದ್ದು, ಈ ನಡುವೆ ಬ್ರೈನ್ ಸ್ಟ್ರೋಕ್ ಮತ್ತು ಬ್ರೈನ್ ಹ್ಯಾಮರೇಜ್ (ಮಿದುಳಿನಲ್ಲಿ ರಕ್ತಸ್ರಾವ) ಪ್ರಕರಣಗಳಲ್ಲಿ ಏರಿಕೆ ಕಂಡಿವೆ. ಈ ಕುರಿತು ಮಾತನಾಡಿರುವ ಶ್ರೀ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ನರವೈದ್ಯ ಡಾ ಸಿಎಸ್ ಅಗರ್ವಾಲ್, ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚಾಗುವುದು ಸಹಜ. ಕೆಲವು ವೇಳೆ ಇದು ಬ್ರೈನ್ ಸ್ಟ್ರೋಕ್ಗೆ ಕಾರಣವಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನು ಈ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಹಾಗೂ ಈ ಸಮಯದಲ್ಲಿ ಶಿಖರ ಏರುವ ಅನೇಕ ಮಂದಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಪರ್ವತಾರೋಹಣ ಸಂದರ್ಭದಲ್ಲಿ ಆಮ್ಲಜನಕದ ಪ್ರಮಾಣ ಕುಸಿಯುವುದರಿಂದ ಸಮಸ್ಯೆ ಉದ್ಭವಿಸುತ್ತದೆ ಎಂದಿದ್ದಾರೆ.
ಅಧಿಕ ರಕ್ತದೊತ್ತ ಪ್ರಮುಖ ಕಾರಣ: ಪರ್ವತಗಳಿಗೆ ಹೋದಾಗ ಅಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುತ್ತದೆ. ಅದೇ ರೀತಿ ಮನೆಯಲ್ಲೇ ಇದ್ದರೂ ಸೂರ್ಯನನ್ನು ಕಾಣದಿದ್ದಾಗ ಅದು ಕೂಡ ಬ್ರೈನ್ ಸ್ಟ್ರೋಕ್ ಅಪಾಯಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಡಿಮೆ ಉಷ್ಣಾಂಶದ ತಾಪಮಾನದ ದಾಖಲಾಗುವ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಅಧಿಕ ರಕ್ತದೊತ್ತಡ ಹೊಂದಿರುವವರು ಚಳಿಗಾಲದ ಸಮಯದಲ್ಲಿ ಅಗತ್ಯ ಜಾಗ್ರತೆ ವಹಿಸಬೇಕು. ಜೊತೆಗೆ ನಿರಂತರ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಇದರಿಂದ ಬ್ರೈನ್ ಸ್ಟ್ರೋಕ್ ಅಪಾಯ ಕಡಿಮೆ ಮಾಡಬಹುದಾಗಿದೆ. ಚಳಿ ತಾಪಾಮನದಲ್ಲಿ ಬಿಪಿ ಪ್ರಮಾಣ ಹೆಚ್ಚುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ನಾವು ಬೆವರದ ಕಾರಣ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುತ್ತದೆ. ಇದು ಕೂಡ ಬಿಪಿ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಈ ಸಮಸ್ಯೆಗಳು ಕೂಡ ಅನಾಹುತಕ್ಕೆ ಕಾರಣ: ಚಳಿ ಹೊರತಾಗಿ ಅಧಿಕ ರಕ್ತದೊತ್ತಡ, ಮಧುಮೇಹ, ಮೆಟಾಬಾಲಿಕ್ ಸಿಂಡ್ರೋಮ್, ಜೀವನಶೈಲಿ, ಆಮ್ಲಜನಕದ ಕೊರತೆ ಹಾಗೂ ಅಧಿಕ ರಕ್ತದೊತ್ತಡ ಕೂಡ ಬ್ರೈನ್ ಸ್ಟ್ರೋಕ್ಗೆ ಕಾರಣವಾಗುತ್ತದೆ. ಜನರು ಅಧಿಕ ರಕ್ತದೊತ್ತಡ ಮಾತ್ರೆ ಪಡೆಯಲು ಹೆದರುತ್ತಾರೆ. ಅಲ್ಲದೇ, ವೈದ್ಯರ ಸಲಹೆ ಪಡೆಯದೇ ಈ ಮಾತ್ರೆಗಳನ್ನು ನಿಲ್ಲಿಸುತ್ತಾರೆ. ಚಳಿಗಾಲ ಸಂದರ್ಭದಲ್ಲಿ ಜನರು ವಿಟಮಿನ್ ಡಿ ಮಾತ್ರೆ ಪಡೆಯುವುದು ಕೂಡ ಅವಶ್ಯವಾಗಿದೆ ಎನ್ನುತ್ತಾರೆ.
ಕಾನ್ಪರದಲ್ಲಿ 25 ಮಂದಿ ಸಾವು: ಕಾನ್ಪುರ್ನಲ್ಲಿ ಬ್ರೈನ್ ಸ್ಟ್ರೋಕ್ ಮತ್ತು ಹೃದಯಾಘಾತದಿಂದ 25 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 17 ಮಂದಿ ಚಿಕಿತ್ಸೆ ಪಡೆಯುವ ಮೊದಲೇ ಅಸುನೀಗಿದ್ದಾರೆ. ಚಳಿಗಾಲದಲ್ಲಿ ಹೃದಯಾಘಾತ ಹಿರಿಯರಿಗೆ ಮಾತ್ರ ಸಂಭಂವಿಸುತ್ತದೆ ಎನ್ನಲು ಸಾಧ್ಯವಿಲ್ಲ. ಅನೇಕ ಯುವ ಜನರಲ್ಲೂ ಕೂಡ ಇದನ್ನು ಕಾಣಬಹುದಾಗಿದೆ. ಈ ಹಿನ್ನಲೆ ಅಧಿಕ ಚಳಿ ಸಂದರ್ಭದಲ್ಲಿ ಜನರು ಆದಷ್ಟು ಮನೆಯೊಳಗೆ ಬೆಚ್ಚಿಗಿನ ಬಟ್ಟೆಗಳನ್ನು ಧರಿಸಿರಬೇಕು ಎನ್ನುತ್ತಾರೆ ವೈದ್ಯರು.
ಉತ್ತರ ಭಾರತದ ದೆಹಲಿ, ಹರಿಯಾಣ, ಚಂಢೀಗಢ, ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಅಧಿಕ ಚಳಿ ದಾಖಲಾಗುತ್ತಿದೆ. ಕನಿಷ್ಟ ತಾಪಮಾನ 3 ಡಿಗ್ರಿವರೆಗೆ ದಾಖಲಾಗಿದೆ. ಬೆಳಗಿನ ಹೊತ್ತು ದಟ್ಟ ಮಂಜು ಕವಿದ ವಾತಾವರಣ ನಿರ್ಮಾಣವಾಗುತ್ತಿದ್ದು, ಗೋಚರತೆ ಪ್ರಮಾಣ ಕ್ಷೀಣಿಸಿದೆ.
ಇದನ್ನೂ ಓದಿ: ಉಜ್ಬೇಕಿಸ್ತಾನದಲ್ಲಿ ಮಕ್ಕಳ ಸಾವು ಪ್ರಕರಣ: ಭಾರತದ ಕೆಮ್ಮಿನ ಸಿರಪ್ ಬಳಸದಂತೆ WHO ಸೂಚನೆ