ವಾಯುಮಾಲಿನ್ಯ, ಮಾನಸಿಕ ಒತ್ತಡ, ಹೊಗೆ ಮುಂತಾದುವುಗಳ ಪರಿಣಾಮದಿಂದ ಮತ್ತು ಪೌಷ್ಟಿಕಾಂಶ ಕೊರತೆಯ ಆಹಾರ ಸೇವನೆಯ ಕಾರಣದಿಂದ ಹಲವಾರು ತ್ವಚೆಯ ಅನಾರೋಗ್ಯ ಕಾಣಿಸಿಕೊಳ್ಳಬಹುದು ಮತ್ತು ತ್ವಚೆಯು ವಯಸ್ಸಾಗಿರುವಂತೆ ಕಾಣಿಸಲಾರಂಭಿಸಬಹುದು. ಮೊಡವೆ, ಕಳಾಹೀನತೆ, ಆರೋಗ್ಯಕರ ಕಾಂತಿ ಕಾಣೆಯಾಗುವುದು ಮುಂತಾದ ತ್ವಚೆಯ ಸಮಸ್ಯೆಗಳು ಬರದಂತೆ ನಿರಂತರವಾಗಿ ಕಾಳಜಿ ವಹಿಸಬೇಕಾಗುತ್ತದೆ. ಇನ್ನು ತಮ್ಮ ತ್ವಚೆಗೆ ಯಾವ ರೀತಿಯ ಆರೈಕೆ ಸರಿಹೊಂದುತ್ತದೆ ಎಂಬುದು ಸಹ ತಿಳಿಯದೆ ಗೊಂದಲ ಉಂಟಾಗಬಹುದು. ಆದರೆ ಈ ಎಲ್ಲ ಸಮಸ್ಯೆಗಳಿಗೆ ಒಂದೇ ಉತ್ತರವಿದೆ. ಅದು ವಿಟಮಿನ್ ಇ. ಈ ಒಂದು ವಿಧಾನವು ನಿಮ್ಮ ತ್ವಚೆಯ ಬಹುತೇಕ ಸಮಸ್ಯೆಗಳನ್ನು ನಿವಾರಿಸಬಹುದು.
ವಿಟಮಿನ್ ಇ ತ್ವಚೆಯ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬ ಮಾತನ್ನು ನೀವು ಬಹಳಷ್ಟು ಬಾರಿ ಕೇಳಿರಬಹುದು. ಹೀಗಾಗಿ ವಿಟಮಿನ್ ಇ ಸಮೃದ್ಧವಾಗಿರುವ ಫೇಸ್ ವಾಶ್, ಮಾಯಿಶ್ಚರೈಜರ್, ಕ್ರೀಮುಗಳು, ಸೀರಂ ಮುಂತಾದುವುಗಳ ಬಳಕೆಯನ್ನು ಹೆಚ್ಚು ಮಾಡುವುದೊಳಿತು ಎನ್ನುತ್ತಾರೆ ಪ್ರಖ್ಯಾತ ಕಾಸ್ಮೆಟಿಕ್ ಕಂಪನಿಯ ಸಿಇಓ ಮತ್ತು ಎಂಡಿ ರಚಿತಾ ಗುಪ್ತಾ.
ಇದನ್ನೂ ಓದಿ: ಅಂಗೈಯಲ್ಲಿ ಆರೋಗ್ಯ! ಈ ಸಪ್ತ ಸೂತ್ರಗಳನ್ನು ಪಾಲಿಸಿದರೆ ಸಾಕು..
1. ವಿಟಮಿನ್ ಇ ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ: ವಾಯುಮಾಲಿನ್ಯ, ಹೊಗೆ ಮತ್ತು ವಾತಾವರಣದಲ್ಲಿರುವ ಕಲ್ಮಶಗಳು ನಿಮ್ಮ ತ್ವಚೆಯಲ್ಲಿರುವ ಕೊಲಾಜೆನ್ ಹಾಳು ಮಾಡುವುದರಿಂದ ಚರ್ಮದ ಮೇಲೆ ಸುಕ್ಕುಗಳಾಗುವುದು, ಅವಧಿಪೂರ್ವ ವಯಸ್ಸಾದಂತೆ ಕಾಣುವುದು ಹಾಗೂ ತ್ವಚೆ ಕಳಾಹೀನವಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಅತ್ಯುತ್ತಮವಾದ ವಿಟಮಿನ್ ಇ ಕ್ರೀಮ್ ಅನ್ನೇ ಉಪಯೋಗಿಸಬೇಕು. ಬಾಹ್ಯ ಅಂಶಗಳಿಂದ ತ್ವಚೆಗೆ ಹಾನಿಯಾಗುವುದರಿಂದ ವಿಟಮಿನ್ ಇ ತಡೆಯುತ್ತದೆ.
2. ಯುವಿಬಿ ಬೆಳಕನ್ನು ಹೀರಿಕೊಳ್ಳುತ್ತದೆ: ತ್ವಚೆಗೆ ವಯಸ್ಸಾಗುವಂತೆ ಮಾಡಬಲ್ಲ ಅಲ್ಟ್ರಾ ವಯಲೆಟ್ ಕಿರನಗಳನ್ನು ವಿಟಮಿನ್ ಇ ಹೀರಿಕೊಂಡು ತ್ವಚೆಯ ಮೇಲೆ ಸಂರಕ್ಷಣಾ ಪದರನ್ನು ರಚಿಸುತ್ತದೆ. ವಿಟಮಿನ್ ಸಿ ಮತ್ತು ಇ ಗಳ ಸಂಯೋಜನೆಯಿಂದ ನಿಮ್ಮ ಎಸ್ಪಿಎಫ್ ಉತ್ತಮವಾಗಿ ಕೆಲಸ ಮಾಡುತ್ತದೆ ಹಾಗೂ ತ್ವಚೆಗೆ ಕಾಂತಿಯನ್ನು ನೀಡುತ್ತದೆ.
3. ಮಾಯಿಶ್ಚರೈಜ್ ಮಾಡುತ್ತದೆ: ವಿಟಮಿನ್ ಇ ಒಂದು ಅತ್ಯುತ್ತಮವಾದ ಸ್ಕಿನ್ ಮಾಯಿಶ್ಚರೈಜರ್ ಆಗಿದೆ. ತ್ವಚೆಯು ಯಾವಾಗಲೂ ಆರೋಗ್ಯಕರವಾಗಿರುವಂತೆ ಇದು ಕಾಪಾಡುತ್ತದೆ. ಮಾಯಿಸ್ಚರೈಜರ್ಗಳಲ್ಲಿರುವ ವಿಟಮಿನ್ ಇ ಆ್ಯಂಟಿ ಆಕ್ಸಿಡೆಂಟ್ಗಳನ್ನು ಹೊಂದಿದ್ದು, ಉರಿಯೂತವನ್ನು ಕಡಿಮೆ ಮಾಡುತ್ತದೆ.
4. ಗಾಢ ಕಲೆಗಳನ್ನು ಮಾಯ ಮಾಡುತ್ತದೆ: ಮಾಲಿನ್ಯ ಹಾಗೂ ಒತ್ತಡದ ಕಾರಣದಿಂದ ಕಲೆಗಳು ಕಾಣದಂತೆ ಮಾಡುವುದು ಸುಲಭವಲ್ಲ. ಮಾಲಿನ್ಯದಿಂದ ರಕ್ಷಣೆ ನೀಡುವ ವಿಟಮಿನ್ ಇ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
5. ಮೊಡವೆಗಳನ್ನು ಹೋಗಲಾಡಿಸುತ್ತದೆ: ಮೊಡವೆಗಳನ್ನು ಹೊಗಲಾಡಿಸಲು ಸೂಕ್ತವಾದ ಕ್ರಮಗಳನ್ನು ಅನುಸರಿಸುವುದು ಬಹಳೇ ಅಗತ್ಯ. ಹಗುರವಾದ ವಿಟಮಿನ್ ಇ ಕ್ರೀಮ್ಗಳು ಮೊಡವೆಗಳ ನಿವಾರಣೆಗೆ ಬಹಳ ಸಹಾಯಕವಾಗುತ್ತವೆ.
6. ವಿಟಮಿನ್ ಇ ಸಮೃದ್ಧವಾಗಿರುವ ಮೂಲಗಳು ಯಾವುವು? ಅಲೊವೆರಾ, ಬಾದಾಮಿ, ಸೂರ್ಯಕಾಂತಿ, ಪಪ್ಪಾಯ ಮುಂತಾದುವು ವಿಟಮಿನ್ ಇ ಸಮೃದ್ಧವಾಗಿರುವ ಆಗರವಾಗಿವೆ. ಸನ್ ಸ್ಕ್ರೀನ್ಸ್, ಮಾಯಿಶ್ಚರೈಜರ್ ಮತ್ತು ಸೀರಂ ಗಳಲ್ಲಿ ನಿಮಗೆ ಹಲವಾರು ಆಯ್ಕೆಗಳಿವೆ. ಇವುಗಳನ್ನು ಕೊಳ್ಳುವಾಗ ಸರಿಯಾಗಿ ಪರಿಶೀಲಿಸಿ, ಹೆಚ್ಚು ಪ್ರಮಾಣದ ವಿಟಮಿನ್ ಇ ಇರುವ ವಸ್ತುಗಳನ್ನೇ ಕೊಳ್ಳಬೇಕು.
ಇನ್ನು ರಾಸಾಯನಿಕಗಳಿಂದ ಮುಕ್ತ ಹಾಗೂ ನೈಸರ್ಗಿಕ ವಸ್ತುಗಳಿಂದ ತಯಾರಾದ ಉತ್ಪನ್ನಗಳನ್ನು ಹುಡುಕಿ. ಇವನ್ನು ಬಳಸುವುದರಿಂದ ನಿಮ್ಮ ತ್ವಚೆಗೆ ಹಾನಿಯಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು.