ಚಳಿಗಾಲದಲ್ಲಿ ಚರ್ಮ ಸೇರಿದಂತೆ ಕೂದಲು ತೇವಾಂಶ ಕಳೆದುಕೊಳ್ಳುತ್ತದೆ. ಈ ಋತುಮಾನದಲ್ಲಿ ಕೂದಲಿನ ಆರೈಕೆಗೆ ವಿಶೇಷ ಕಾಳಜಿ ಬೇಕು. ಇಲ್ಲವಾದರೆ, ಕೂದಲು ಒರಟಾಗುವುದು, ಉದುರುವ ಸಮಸ್ಯೆ ಕಾಡುತ್ತದೆ. ಕೂದಲು ತೇವಾಂಶ ಕಳೆದುಕೊಳ್ಳದಂತೆ ಕಾಪಾಡಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು. ಕೂದಲಿನ ಆರೋಗ್ಯಕ್ಕಾಗಿ ಹೇರ್ ಕೇರ್ ಸೈಟಿಂಸ್ಟ್ ರೊಬ್ ಸ್ಮಿತಾ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಕಂಡಿಷನರ್ ಬಳಕೆ: ಕೂದಲಿನ ತೇವಾಂಶ ಕಳೆದುಕೊಳ್ಳದೇ, ಮೃದುವಾದ ಕೂದಲು ಪಡೆಯಲು ತಲೆಸ್ನಾನದ ಬಳಿಕ ಕಂಡಿಷನರ್ ಬಳಕೆ ಮಾಡಲಾಗುತ್ತದೆ. ತಲೆ ಸ್ನಾನವಾದ ಬಳಿಕ ಕೂದಲಿಗೆ ಕಂಡಿಷನರ್ ಹಚ್ಚಿ 2 ನಿಮಿಷದ ಬಳಿಕ ತೊಳೆಯಬೇಕು. ಇದರಿಂದ ಕೂದಲಿನ ಸಿಕ್ಕುಗಳು ಕಡಿಮೆಯಾಗುತ್ತದೆ. ಕಂಡಿಷನರ್ ಕೂದಲಿನ ರಿಪೇರಿ ಮಾಡುವುದಿಲ್ಲ. ಬದಲಾಗಿ, ಇದು ಭವಿಷ್ಯದಲ್ಲಿ ಉಂಟಾಗುವ ಕೂದಲಿನ ಹಾನಿಯನ್ನು ಕಡಿಮೆ ಮಾಡುತ್ತದೆ.
ದೊಡ್ಡ ಹಲ್ಲಿನ ಬಾಚಣಿಕೆ ಬಳಕೆ: ಕೂದಲನ್ನು ಬಾಚುವಾಗ ದೊಡ್ಡ ಹಲ್ಲಿನ ಬಾಚಣಿಕೆಯನ್ನು ಬಳಸುವುದರಿಂದ ಕೂದಲು ಕಿತ್ತು ಬರುವುದು ಕಡಿಮೆಯಾಗುತ್ತದೆ. ಅದರಲ್ಲೂ ತಲೆ ಹಸಿ ಇದ್ದಾಗ ಸಣ್ಣ ಹಲ್ಲಿನ ಬಾಚಣಿಕೆ ಬಳಸುವುದರಿಂದ ಕೂದಲು ದುರ್ಬಲಗೊಳ್ಳುತ್ತದೆ.
ಸರಿಯಾಗಿ ಕೂದಲು ಬಾಚುವುದು: ಕೂದಲು ಬಾಚುವುದರಲ್ಲೂ ಕೆಲವು ಮಾರ್ಗಗಳಿವೆ. ಕೂದಲನ್ನು ಬುಡದಿಂದ ತುದಿಯವರೆಗೆ ಸರಿಯಾದ ರೀತಿಯಲ್ಲಿ ಬಾಚಬೇಕು. ಒಂದು ವೇಳೆ ಸರಿಯಾಗಿ ಬಾಚದಿದ್ದರೆ, ಸಿಕ್ಕು ಅಥವಾ ಗಂಟು ಸಮಸ್ಯೆ ಕಾಡುತ್ತದೆ.
ಮೃದು ಶ್ಯಾಂಪು ಬಳಕೆ: ಕೂದಲಿನ ತೇವಾಂಶ ಕಳೆದುಕೊಳ್ಳಲು ಮತ್ತು ಬುಡ ದುರ್ಬಲವಾಗಲು ಶ್ಯಾಂಪು ಪ್ರಮುಖ ಪಾತ್ರವಹಿಸುತ್ತದೆ. ಪದೇ ಪದೇ ಕೂದಲು ತೊಳೆಯುವುದು ಕೂಡ ಉತ್ತಮವಲ್ಲ. ಆದರೆ, ಬೆವರು, ದುರ್ಗಂಧ, ಮಾಲಿನ್ಯದಿಂದಾಗಿ ಕೂದಲನ್ನು ನೀವು ಪ್ರತಿನಿತ್ಯ ತೊಳೆಯಬೇಕು ಎಂದರೆ, ಆಗ ಮೃದು ಶ್ಯಾಂಪುಗಳ ಬಳಕೆ ಇರಲಿ. ಕೊಕಮಿಡೊಪರೊಪ್ಲೈ ಬೆಟೈನ್ ನಿಮ್ಮ ಕೂದಲಿನ ಆರೋಗ್ಯಕ್ಕೆ ಸಹಾಯಕ. ಇದು ಕೂದಲಿಗೆ ಹೆಚ್ಚಿನ ಹಾನಿ ಮಾಡುವುದಿಲ್ಲ. ಮೃದು ಮತ್ತು ತೇವಾಂಶದ ಶ್ಯಾಂಪುಗಳು ಕೂದಲಿನ ಕಂಡಿಷನ್ ಕಾಪಾಡುವಲ್ಲಿ ಪ್ರಮುಖವಾಗಿದೆ.
ಹೇರ್ಸ್ಪ್ರೇ, ಎಣ್ಣೆಗಳು: ಹೇರ್ಸ್ಪ್ರೇಗಳು ಸ್ಟೈಲಿಶ್ ಲುಕ್ ನೀಡುತ್ತವೆಯಾದರೂ, ಕೂದಲು ಅತ್ತಿತ್ತ ಚಲಿಸದಂತೆ ಬಿಗಿಯಾಗಿ ಒತ್ತಾಗಿ ನಿಲ್ಲಿಸುವಂತೆ ಮಾಡುತ್ತದೆ. ಅಧಿಕ ಹೇರ್ಸ್ಪ್ರೇ ಬಳಕೆಗೆ ಮುನ್ನ ಯೋಚಿಸಿ. ನೈಸರ್ಗಿಕ ಎಣ್ಣೆಗಳನ್ನು ಕೂದಲಿಗೆ ಬಳಸಬಹುದು. ಆದರೆ, ದೀರ್ಘಕಾಲದವರೆಗೆ ಎಣ್ಣೆಗಳು ತಲೆಯಲ್ಲಿದ್ದರೆ ತದ್ವಿರುದ್ದ ಪರಿಣಾಮ ಉಂಟು ಮಾಡಬಹುದು.
ಡ್ರೈ ಶ್ಯಾಂಪು: ಕೂದಲಿನ ಕ್ಯೂಟಿಕಲ್ಗೆ ಹಾನಿಯಾಗದಂತೆ ಸಾಮಾನ್ಯ ಶ್ಯಾಂಪುಗಳಂತೆ ಇವುಗಳನ್ನು ಬಳಕೆ ಮಾಡಬಹುದು. ಇದರಿಂದ ನಿಮ್ಮ ಕೂದಲಿನ ವಾಲ್ಯೂಂ ಹೆಚ್ಚಾಗಿ, ಎಲ್ಲೆಡೆ ಹರಡಿರುವಂತೆ ಮಾಡುತ್ತದೆ.
ಮೆಕಾನಿಕಲ್ ಹಾನಿ: ಇದು ಕೂದಲಿನ ಸಾಮಾನ್ಯ ಹಾನಿ. ಟವಲ್ನಲ್ಲಿ ಕೂದಲು ಒಣಗಿಸುವುದು. ಕೂದಲಿನೊಳಗೆ ಬೆರಳುಗಳನ್ನು ಆಡಿಸುವುದಾಗಿದೆ. ಟವಲ್ನಲ್ಲಿ ಕೂದಲು ಒಣಗಿಸುವುದರ ಬದಲಾಗಿ, ನೈಸರ್ಗಿಕವಾಗಿ ಕೂದಲನ್ನು ಒಣಗಿಸುವುದೊಳಿತು.
ಇದನ್ನೂ ಓದಿ: ಪ್ರತಿನಿತ್ಯ ಮಿಶ್ರ ಒಣಹಣ್ಣು ಸೇವನೆಯಿಂದ ಹೃದಯರಕ್ತನಾಳ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ