ಋತುಚಕ್ರದ ಸಮಸ್ಯೆಗಳು ಮಹಿಳೆಯರಲ್ಲಿ ಒಬ್ಬರಿಗೆ ಒಂದೊಂದು ರೀತಿ ಕಾಡುವುದು ಸುಳ್ಳಲ್ಲ. ಈ ವೇಳೆ ಅನೇಕ ಮಂದಿ ಬೆನ್ನು ಮತ್ತು ಕಾಲಿನ ನೋವಿಗೆ ಕಾರಣವಾಗುತ್ತದೆ. ಈ ನೋವು ಯಾತನಮಯವಾಗಿರುತ್ತದೆ. ಸಮೀಕ್ಷೆಯೊಂದರ ಪ್ರಕಾರ ಶೇ 83ರಷ್ಟು ಮಹಿಳೆಯರಿಗೆ ಮುಟ್ಟು ನೋವುದಾಯಕ ಆಗಿರುತ್ತದೆ. ಇದರಿಂದ ಅವರು ಪ್ರತಿ ತಿಂಗಳು ಮಾತ್ರೆ ನುಂಗಬೇಕಾಗಿದೆ. ಶೇ 58ರಷ್ಟು ಮಹಿಳೆಯರಲ್ಲಿ ಸಾಮಾನ್ಯ ಮತ್ತು ತಡೆಯಬಹುದಾದ ನೋವು ಕಾಣಿಸಿಕೊಳ್ಳುತ್ತದೆ. ಶೇ 25ರಷ್ಟು ಮಹಿಳೆಯರು ಹೆಚ್ಚಿನ ನೋವು ಅನುಭವಿಸಿದರೆ ಶೇ 17ರಷ್ಟು ಮಹಿಳೆಯರಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ. ಇಂತಹ ನೋವುಗಳಿಂದ ನಿವಾರಣೆ ಪಡೆಯಬೇಕು ಎಂದರೆ, ಕೆಲವು ಪರಿಹಾರ ಸೂತ್ರ ಅನುಸರಿಸುವುದು ಅವಶ್ಯ.
ಋತುಚಕ್ರದ ಸಮಸ್ಯೆಯಲ್ಲಿ ಸೊಂಟ, ಕಿಬ್ಬೊಟ್ಟೆ ನೋವು ಅಥವಾ ಕಾಲಿನ ಸೆಳೆತ ಕಾಡುತ್ತಿದ್ರೆ, ನೋವು ಕಾಡುತ್ತಿರುವ ಪ್ರದೇಶದಲ್ಲಿ ಹೀಟಿಂಗ್ ಪ್ಯಾಡ್ ಅನ್ನು ನಿಧಾನವಾಗಿ ಒತ್ತಿ. ಇದರಿಂದ ರಕ್ತದ ಪರಿಚಲನೆ ಸರಾಗವಾಗಿ ಆಗಿ ನೋವು ನಿವಾರಣೆಯಲ್ಲಿ ಸಹಾಯ ಮಾಡುತ್ತದೆ.
ಲ್ಯಾವೆಂಡರ್ ಅಥವಾ ಸಾಸಿವೆ ಎಣ್ಣೆಯನ್ನು ಒಂದು ಬಟ್ಟಲಲ್ಲಿ ಇಟ್ಟು ನಿಧಾನವಾಗಿ ಮೊಣಕಾಲಿನಿಂದ ಮಸಾಜ್ ಮಾಡಿ. ಇದರಿಂದ ಆಯಾಸ ತಗ್ಗುತ್ತದೆ. ನೋವು ಕೂಡ ನಿಯಂತ್ರಣಕ್ಕೆ ಬರುತ್ತದೆ.
ಋತುಚಕ್ರದ ಸಂದರ್ಭದಲ್ಲಿ ಯೋಗ ಮತ್ತು ವ್ಯಾಯಾಮ ಮಾಡುವುದು ಕೊಂಚ ತ್ರಾಸದಾಯಕ ಆಗಿರುತ್ತದೆ. ಆದರೆ, ಈ ಸಮಯದಲ್ಲಿ ಪರಿಹಾರ ಪಡೆಯುವಲ್ಲಿ ಈ ಯೋಗ ಮತ್ತು ವ್ಯಾಯಾಮ ಸಹಕಾರಿ ಆಗುತ್ತದೆ. ಕಾರಣ ದೈಹಿಕ ಚಟುವಟಿಕೆಯಿಂದಾಗಿ ಮೆದುಳಿನಲ್ಲಿ ಎಂಡೋರ್ಫಿನ್ ಎಂಬ ರಾಸಾಯನಿಕ ಬಿಡುಗಡೆ ಆಗುತ್ತದೆ. ಇದು ನೋವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ವ್ಯಾಯಾಮ ರಕ್ತ ನಾಳಗಳಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಇದರಿಂದ ಸ್ನಾಯುಗಳಿಗೆ ವಿಶ್ರಾಂತಿ ಮತ್ತು ನೋವು ಕಡಿಮೆ ಆಗುತ್ತದೆ.
ಋತುಚಕ್ರದ ಅವಧಿಯಲ್ಲಿ ಕಾಲಿನಲ್ಲಿ ಬಹುತೇಕರಿಗೆ ವಿಪರೀತ ನೋವು ಕಾಡುತ್ತದೆ. ಇದಕ್ಕೆ ಅನೇಕ ಬಾರಿ ಸರಿಯಾದ ಪೋಷಕಾಂಶಗಳು ಸಿಗದ ಕಾರಣವೂ ಈ ರೀತಿ ಆಗುತ್ತದೆ. ಈ ಹಿನ್ನೆಲೆ ಪ್ರತಿನಿತ್ಯ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ, ಜಿಂಕ್, ಮೆಗ್ನಿಶಿಯಂ ಮತ್ತು ಒಮೆಗಾ 3 ಫ್ಯಾಟಿ ಆಸಿಡ್ ಅನ್ನು ಆಹಾರಗಳ ಮೂಲಕ ಪಡೆಯುವುದು ಅಗತ್ಯ. ಇದರ ಜೊತೆಗೆ ದೇಹಕ್ಕೆ ನೀರಿನ ಕೊರತೆ ಆಗದಂತೆ ಕಾಪಾಡುವುದು ಅವಶ್ಯವಾಗಿದೆ. ಪ್ರತಿನಿತ್ಯ 8-10 ಗ್ಲಾಸ್ ನೀರು ಕುಡಿಯುವುದನ್ನು ಮರೆಯಬಾರದು.
ಇದನ್ನೂ ಓದಿ: ಮುಟ್ಟು ನಿಲ್ಲುವಿಕೆ ಅವಧಿಯಲ್ಲಿ ಮಹಿಳೆಯರಲ್ಲಿ ಹೆಚ್ಚುವ ತೂಕ; ಈ ವಿಚಾರ ಗಮನದಲ್ಲಿರಲಿ!