ಬೆಂಗಳೂರು: ಲಕ್ನೋದಲ್ಲಿ 12 ವರ್ಷದ ಬಾಲಕಿಯನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ಚಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯ ಬಗ್ಗೆ ಸಮಾಜದಲ್ಲಿ ಮತ್ತೊಮ್ಮೆ ಆತಂಕ ಮೂಡಿದೆ. ಅಪ್ರಾಪ್ತ ಮಗು ವಾರಗಳ ಕಾಲ ಈ ದೌರ್ಜನ್ಯಕ್ಕೊಳಗಾಗಿದ್ದು, ಘಟನೆ ತಕ್ಷಣ ಬೆಳಕಿಗೆ ಬಂದಿರಲಿಲ್ಲ. ಈ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು, ವೈದ್ಯರು ಸೇರಿದಂತೆ ತಜ್ಞರು ಮಕ್ಕಳ ನಡವಳಿಕೆಯಲ್ಲಾಗುವ ಬದಲಾವಣೆಗಳನ್ನು ಪೋಷಕರು ಹತ್ತಿರದಿಂದ ಗಮನಿಸುವಂತೆ ಮನವಿ ಮಾಡಿದ್ದಾರೆ.
ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯ ಮನೋವಿಜ್ಞಾನದ ಹಿರಿಯ ವೈದ್ಯ ಡಾ.ಆದರ್ಶ್ ತ್ರಿಪಾಠಿ ಮಾತನಾಡಿದ್ದು, ಮಗುವಿಗೆ ಪ್ರತಿ ಎರಡು ತಿಂಗಳಿಗೊಮ್ಮೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ (ಒಳ್ಳೆಯ ಮತ್ತು ಕೆಟ್ಟ ಆಂಗಿಕ ಚಲನೆ) ಬಗ್ಗೆ ತಿಳಿಸುವಂತೆ ಸೂಚಿಸಿದ್ದಾರೆ. ಇದರಿಂದ ಪ್ರಮುಖವಾಗಿ ಎರಡು ಲಾಭವಿದೆ. ಪದೇ ಪದೇ ಇದನ್ನು ಮಗುವಿಗೆ ಕೇಳುವುದರಿಂದ ಅದು ನೆನಪಿನಲ್ಲಿಳಿದು, ಸದಾ ಎಚ್ಚರದಿಂದ ಇರುತ್ತದೆ. ಎರಡನೇ ಅಂಶವೇನೆಂದರೆ ಈ ಬಗ್ಗೆ ಅವರು ನಿಮ್ಮ ಬಳಿಕ ಮುಕ್ತವಾಗಿ ಮಾತನಾಡಲು ಸಹಾಯ ಮಾಡುತ್ತದೆ. ಮಕ್ಕಳು ತಮ್ಮ ಮಾತುಗಳನ್ನು ಯಾವುದೇ ಅಂಜಿಕೆ ಇಲ್ಲದೇ ನಿರ್ಭೀತಿಯಿಂದ ಮಾಹಿತಿ ಹಂಚಿಕೊಳ್ಳುತ್ತಾರೆ.
ಈ ವಿಷಯಗಳನ್ನು ಚರ್ಚೆ ಮಾಡುವುದರಿಂದ ಮಗುವಿನ ಮೇಲೆ ಯಾವುದೇ ರೀತಿ ಅಹಿತಕರ ಘಟನೆಗಳಾದಾಗ ಹಂಚಿಕೊಳ್ಳುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮೂಡುತ್ತದೆ. ಮಗು ಶಾಲೆ/ ಕಾಲೇಜಿನಿಂದ ಮರಳಿದ ತಕ್ಷಣ ನಡೆಯುವ ಇಂಥ ಮಾತುಕತೆಯ ಮೂಲಕ ಮನೆಯಿಂದ ಹೊರಗೆ ಏನಾದರೂ ಘಟನೆ ನಡೆಯಿತೇ ಎಂದು ತಿಳಿಯಲು ನೆರವಾಗುತ್ತದೆ.
ವ್ಯತ್ಯಾಸ ಗುರುತಿಸಿ: ಮಕ್ಕಳು ಶಾಲೆಯಿಂದ ಮರಳಿದ ತಕ್ಷಣ ನಿಮ್ಮ ಮಕ್ಕಳ ಜೊತೆಗೆ ಮಾತುಕತೆ ನಡೆಸುವ ಅಭ್ಯಾಸವನ್ನು ಅಭಿವೃದ್ಧಿಪಡಿಸಬೇಕು. ಮಕ್ಕಳಿಗೆ ಶಾಲೆಯಲ್ಲಿ ಏನಾಯಿತು?. ಹೋಗುವಾಗ ಮತ್ತು ಬರುವಾಗ ನಡೆದ ಘಟನೆಗಳೇನು ಎಂಬ ಕುರಿತು ಸಣ್ಣ ಮಾತುಕತೆ ನಡೆಸಬೇಕು. ಈ ವೇಳೆ ಮಕ್ಕಳ ಮಾತುಕತೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಿದೆಯೇ ಎಂಬುದನ್ನು ಗಮನಿಸಿ ಎನ್ನುತ್ತಾರೆ ಡಾ.ದೇವಶಿಶ್ ಶುಕ್ಲಾ.
ಅಷ್ಟೇ ಅಲ್ಲದೇ, ಮಗು ಮನೆಗೆ ಬರುವ ಸಮಯದಲ್ಲಿನ ಬದಲಾವಣೆ ಬಗ್ಗೆ ಲಕ್ಷ್ಯ ನೀಡುವುದು ಅತೀ ಅಗತ್ಯ. ಸಾಮಾನ್ಯವಾಗಿ ಮನೆಗೆ ಬರುವ ಸಮಯಕ್ಕಿಂತ ತಡವಾಗಿ ಬಂದಾಗ ಈ ಬಗ್ಗೆ ಪೋಷಕರು ಎಚ್ಚರವಹಿಸುವುದು ಅಗತ್ಯ ಎನ್ನುತ್ತಾರೆ ಡಾ.ಶೈಲ ಕುಮಾರ್. (ಐಎಎನ್ಎಸ್)
ಇದನ್ನೂ ಓದಿ: ಶೇ 80ರಷ್ಟು ಭಾರತೀಯರು ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುವುದಿಲ್ಲ: ವೈದ್ಯರು