ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಟ್ರೇಲಿಯಾದ ಎಂಟು ಮಹಿಳೆಯರಲ್ಲಿ ಒಬ್ಬ ಮಹಿಳೆಗೆ 85 ನೇ ವಯಸ್ಸಿಗೆ ಕ್ಯಾನ್ಸರ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ ಎಂಬ ಅಂಕಿಅಂಶವಿದೆ. ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ರೇಡಿಯೋಥೆರಪಿ ಪ್ರಮುಖ ಚಿಕಿತ್ಸಾ ಮಾರ್ಗವಾಗಿ ಹೊರಹೊಮ್ಮಿದೆ.
ಆದರೆ ಈ ರೇಡಿಯೋಥೆರಪಿಗೆ ಒಳಗೊಳ್ಳುವುದರಿಂದ ದೇಹದಲ್ಲಿ ಕ್ಯಾನ್ಸರ್ ಸಂಬಂಧಿತ ಆಯಾಸ, ರೋಗಿಗಳ ಭಾವನಾತ್ಮಕ ಹಾಗೂ ದೈಹಿಕ ಹಾಗೂ ಸಾಮಾಜಿಕ ಆರೋಗ್ಯದ ಮೇಲೆ ಮತ್ತು ಒಟ್ಟು ಜೀವನದ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಆಸ್ಟ್ರೇಲಿಯಾದ ಎಡಿತ್ ಕೋವನ್ ವಿಶ್ವವಿದ್ಯಾಲಯ ಇತ್ತೀಚೆಗೆ ಸಂಶೋಧನೆಯೊಂದನ್ನು ಕೈಗೊಂಡಿದ್ದು, ರೇಡಿಯೋಥೆರಪಿ ಪಡೆಯುವವರು ವ್ಯಾಯಾಮ ಮಾಡುವುದರಿಂದ ರೇಡಿಯೋಥೆರಪಿಗಳಿಂದ ರೋಗಿಗಳ ಮೇಲಾಗುವ ಅಡ್ಡ ಪರಿಣಾಮಗಳು ಕಡಿಮೆಯಾಗುಬಹುದು. ರೇಡಿಯೋಥೆರಪಿ ಹೆಚ್ಚು ಸಹನೀಯವೆನಿಸಬಹುದು ಎಂಬುದನ್ನು ವಿವರಿಸಿದೆ.
ಇಸಿಯು(ಎಡಿತ್ ಕೋವನ್ ವಿಶ್ವವಿದ್ಯಾಲಯ)ನ ಎಕ್ಸರ್ಸೈಸ್ ಮೆಡಿಸಿನ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಧ್ಯಯನದಲ್ಲಿ 89 ಮಹಿಳೆಯರು ಭಾಗವಹಿಸಿದ್ದರು. ಅದರಲ್ಲಿ 43 ಮಹಿಳೆಯರಿಗೆ ಮನೆಯಲ್ಲಿಯೇ 12 ವಾರಗಳ ಕಾಲ ವ್ಯಾಯಾಮ ತರಬೇತಿ ಹಾಗೂ 30 ರಿಂದ 40 ನಿಮಿಷಗಳ ಕಾಲ ಏರೋಬಿಕ್ ವ್ಯಾಯಾಮವನ್ನು ಮಾಡಿಸಲಾಯಿತು. ಉಳಿದ ರೋಗಿಗಳು ವ್ಯಾಯಾಮ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.
ಜೀವನ ಗುಣಮಟ್ಟದಲ್ಲಿ ಏರಿಕೆ: ವ್ಯಾಯಾಮದಲ್ಲಿ ಭಾಗವಹಿಸದ ಮಹಿಳೆಯರಿಗೆ ಹೋಲಿಸಿದರೆ ವ್ಯಾಯಾಮದಲ್ಲಿ ಭಾಗವಹಿಸಿದ ಮಹಿಳೆಯರು ರೇಡಿಯೋಥೆರಪಿ ಸಮಯದಲ್ಲಿ ಮತ್ತು ನಂತರ ಆಯಾಸದಿಂದ ಚೇತರಿಸಿಕೊಂಡಿರುವುದು ಮತ್ತು ಆರೋಗ್ಯ ಸಂಬಂಧಿತ ಜೀವನ ಗುಣಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಅದರ ಜೊತೆಗೆ ವ್ಯಾಯಾಮದಿಂದ ಯಾವುದೇ ಪ್ರತಿಕೂಲ ಪರಿಣಾಮಗಳೂ ಸಂಶೋಧನೆಯಲ್ಲಿ ವರದಿಯಾಗಿಲ್ಲ.
ಅಧ್ಯಯನದ ಮೇಲ್ವಿಚಾರಕ ಪ್ರೊಫೆಸರ್ ರಾಬ್ ನ್ಯೂಟನ್, ವ್ಯಾಯಾಮ ಹಾಗೂ ಏರೋಬಿಕ್ ವ್ಯಾಯಾಮ ರೇಡಿಯೋಥೆರಪಿ ಸಮಯದಲ್ಲಿ ಸುರಕ್ಷಿತ ಮತ್ತು ಕ್ಯಾನ್ಸರ್ ಸಂಬಂಧಿತ ಆಯಾಸದಿಂದ ಚೇತರಿಸಿಕೊಳ್ಳಲು ಮತ್ತು ಜೀವನ ಗುಣಮಟ್ಟ ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂಬುದನ್ನು ತೋರಿಸಿದೆ ಎಂದು ಹೇಳಿದ್ದಾರೆ.
ಮನೆಯಲ್ಲೇ ಇದ್ದುಕೊಂಡು ರೋಗಿಗಳು ಕಡಿಮೆ ವೆಚ್ಚದಲ್ಲಿ ಇದನ್ನು ನಿರ್ವಹಿಸಿಕೊಳ್ಳಬಹುದು. ಪ್ರಯಾಣ ಅಥವಾ ಮೇಲ್ವಿಚಾರಣೆಯ ಅಗತ್ಯವಿರುವುದಿಲ್ಲ. ರೋಗಿಗೆ ಸಮಯಾವಕಾಶವಿರುವಾಗ ಮತ್ತು ತನಗೆ ಬೇಕಾಗಿರುವ ಜಾಗದಲ್ಲಿ ಇದನ್ನು ಮಾಡಬಹುದು. ಈ ಪ್ರಯೋಜನಗಳು ರೋಗಿಗಳಿಗೆ ಇನ್ನಷ್ಟು ಸಹಕಾರಿಯಾಗಿರಬಹುದು.
ರಾಷ್ಟ್ರೀಯ ಮಾರ್ಗಸೂಚಿ: ಸದ್ಯ ಆಸ್ಟ್ರೇಲಿಯಾದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಮಾರ್ಗಸೂಚಿಗಳಿದ್ದು, ದಿನಕ್ಕೆ 30 ನಿಮಿಷಗಳ ಕಾಲ ಮಧ್ಯಮ ತೀವ್ರವಾದ ಏರೋಬಿಕ್ ವ್ಯಾಯಾಮ ಹಾಗೂ ವಾರದಲ್ಲಿ ಐದು ಅಥವಾ ಮೂರು ದಿನಗಳು ದಿನಕ್ಕೆ 20 ನಿಮಿಷಗಳ ಕಾಲ ತೀವ್ರ ಏರೋಬಿಕ್ ವ್ಯಾಯಾಮವನ್ನು ಶಿಫಾರಸು ಮಾಡುತ್ತವೆ. ಅದರ ಜೊತೆಗೆ ವಾರಕ್ಕೆ ಎರಡರಿಂದ ಮೂರು ದಿನಗಳು 8 ರಿಂದ 12 ಬಾರಿ ಶಕ್ತಿ ತರಬೇತಿ ವ್ಯಾಯಾಮಗಳನ್ನು ಮಾಡುವಂತೆ ಹೇಳುತ್ತದೆ.
ಕಡಿಮೆ ಪ್ರಮಾಣದ ವ್ಯಾಯಾಮಗಳಿಂದ ಯಾವ ರೀತಿಯ ಪ್ರಯೋಜನಗಳು ದೊರೆಯಬಹುದು ಎಂಬುದು ಇನ್ನೂ ಅಧ್ಯಯನ ಹಂತದಲ್ಲಿದೆ. ಕ್ಯಾನ್ಸರ್ ರೋಗಿಗಳು ರಾಷ್ಟ್ರೀಯ ಮಾರ್ಗಸೂಚಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಗಮನಿಸಿಕೊಂಡು ಈ ಮಟ್ಟವನ್ನು ನಿಧಾನವಾಗಿ ಏರಿಕೆ ಮಾಡುವ ಗುರಿ ಇದೆ ಎಂದು ಅಧ್ಯಯನದ ಮುಖ್ಯಸ್ಥ ಡಾ. ಜಾರ್ಜಿಯಸ್ ಮಾವ್ರೋಪಾಲಿಯಾ ತಿಳಿಸಿದ್ದಾರೆ.
ಆದಾಗ್ಯೂ, ವ್ಯಾಯಾಮ ರೋಗಿಗಳ ಫಿಟ್‌ನೆಸ್ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು, ರಾಷ್ಟ್ರೀಯ ಮಾರ್ಗಸೂಚಿಗಳಲ್ಲಿ ಶಿಫಾರಸು ಮಾಡಲಾದ ವ್ಯಾಯಾಮಕ್ಕಿಂತ ಕಡಿಮೆ ಪ್ರಮಾಣದ ವ್ಯಾಯಾಮ ಮಾಡಿದರೂ ಕ್ಯಾನ್ಸರ್-ಸಂಬಂಧಿತ ಆಯಾಸ ಮತ್ತು ಆರೋಗ್ಯ-ಸಂಬಂಧಿತ ಗುಣಮಟ್ಟ ಮತ್ತು ರೇಡಿಯೋಥೆರಪಿ ನಂತರದ ಜೀವನದ ಮೇಲೆಯೂ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ.
ದೈಹಿಕ ಚಟುವಟಿಕಗಳ ಮೇಲೂ ಪರಿಣಾಮ: ಒಂದು ಸಲ ವ್ಯಾಯಾಮವನ್ನು ಪ್ರಾರಂಭಿಸಿದವರಲ್ಲಿ ಹೆಚ್ಚಿನವರು ವ್ಯಾಯಾಮವನ್ನು ಹಾಗೆಯೇ ಮುಂದುವರಿಸಿರುವುದನ್ನು ಅಧ್ಯಯನ ಕಂಡಿದೆ. ಅಧ್ಯಯನದ ಸಮಯದಲ್ಲಿ ನಮ್ಮ ಮೇಲ್ವಿಚಾರಣೆಯಲ್ಲಿ ವ್ಯಾಯಾಮದಲ್ಲಿ ಭಾಗವಹಿಸಿದ ಮಹಿಳೆಯರಲ್ಲಿ 12 ತಿಂಗಳವರೆಗೆ ಸೌಮ್ಯ, ಮಧ್ಯಮ, ಮತ್ತು ಹುರುಪಿನ ದೈಹಿಕ ಚಟುವಟಿಕೆಗಳಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿದೆ. ಅಷ್ಟೇ ಅಲ್ಲದೆ ಅವರ ನಡವಳಿಕೆಗಳಲ್ಲೂ ಬದಲಾವಣೆ ಉಂಟುಮಾಡಿದೆ ಎಂದು ಹೇಳಿದರು.
ಆದ್ದರಿಂದ, ರೇಡಿಯೊಥೆರಪಿ ಸಮಯದಲ್ಲಿ ಕ್ಯಾನ್ಸರ್-ಸಂಬಂಧಿತ ಆಯಾಸವನ್ನು ಕಡಿಮೆ ಮಾಡುವುದು ಮತ್ತು ಆರೋಗ್ಯ-ಸಂಬಂಧಿತ ಜೀವನದ ಗುಣಮಟ್ಟವನ್ನು ಸುಧಾರಿಸುವುದರ ಹೊರತಾಗಿಯೂ ಗೃಹಾಧಾರಿತ ವ್ಯಾಯಾಮ ಪ್ರೋಟೋಕಾಲ್ಗಳು ದೈಹಿಕ ಚಟುವಟಿಕೆಗಳಲ್ಲಿ ಬದಲಾವಣೆಗೂ ಕಾರಣವಾಗಬಹುದು ಎಂದು ಡಾ.ಜಾರ್ಜಿಯಸ್ ಮಾವ್ರೋಪಾಲಿಯಾ ಹೇಳುತ್ತಾರೆ.
ಇದನ್ನೂ ಓದಿ: ಕಡಿಮೆ ದೈಹಿಕ ಚಟುವಟಿಕೆ ಮಾಡುವವರಲ್ಲಿ ಸಕ್ಕರೆ ಅಂಶ ಪ್ರಮಾಣ ಹೇಗಿರುತ್ತೆ? ಏನ್ ಹೇಳುತ್ತೆ ಅಧ್ಯಯನ?