ಬೆಂಗಳೂರು: ಕ್ವಾಡ್ರುಪಲ್ ಕಾರ್ಡಿಯಾಕ್ ಬೈಪಾಸ್ ಸರ್ಜರಿಯ ನಂತರವೂ ಪ್ರಪಂಚದ ಎತ್ತರವಾದ ಶಿಖರ ಮೌಂಟ್ ಎವರೆಸ್ಟ್ ಏರಿ ಡಾ. ವಿಜಯ್ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಈ ಕುರಿತು ಇಂದು ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಡಾ.ವಿಜಯ್, ಹೃದಯ ಶಸ್ತ್ರಚಿಕಿತ್ಸೆಯ ನಂತರ ಜೀವನ ಕೊನೆಗೊಳ್ಳುತ್ತದೆ ಎಂದು ಹಲವರು ಭಾವಿಸುವ ಸಮಯದಲ್ಲಿ ನಾನು ಏನೂ ಗಂಧ ಗಾಳಿ ಗೊತ್ತಿಲ್ಲದೆ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ (5,364 ಮೀ) ತಲುಪಿದ ವಿಶ್ವದ ಮೊದಲ ವ್ಯಕ್ತಿಯಾಗಿದ್ದೇನೆ. ನನಗೆ 80 ವಯಸ್ಸು. ಮತ್ತೊಮ್ಮೆ ಮತ್ತೊಂದು ಸಾಹಸವನ್ನು ಮಾಡಲು ಹೊರಟಿದ್ದೇನೆ. ಜಪಾನ್ನ ಎತ್ತರದ ಪರ್ವತ ಮೌಂಟ್ ಫ್ಯೂಜಿ ಸುಮಾರು 3,776.24 ಮೀ ಎತ್ತರವಿದ್ದು, ಅದನ್ನು ಏರಲು ಮನಸು ಮಾಡಿದ್ದೇನೆ ಎಂದರು.
ಹೃದಯಕ್ಕೆ ಆಹಾರ ನೀಡುವ ನಾಲ್ಕೂ ರಕ್ತನಾಳಗಳು ಬ್ಲಾಕ್ ಆಗಿದ್ದರಿಂದ 55ನೇ ವಯಸ್ಸಿನಲ್ಲಿ ಕ್ವಾಡ್ರುಪಲ್ ಬೈಪಾಸ್ ಸರ್ಜರಿ ಮಾಡಿಸಿಕೊಂಡೆ. ತೀರ್ಥಯಾತ್ರೆ ಹೊರಡುವ ಯೋಚನೆಯಲ್ಲಿದ್ದೆ, ನಂತರ ನಾನು ಹಿಮಾಲಯಕ್ಕೆ ಹೋಗಬೇಕು ಎಂದು ನಿರ್ಧರಿಸಿದೆ. ಆ ಬಗ್ಗೆ ಸಂಶೋಧನೆ ನಡೆಸಿದಾಗ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಯಾರೂ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ (ಇಬಿಸಿ) ಪ್ರಯಾಣಿಸಿಲ್ಲ ಎಂಬುದು ಗೊತ್ತಾಯ್ತು. ಅಲ್ಲಿಗೆ ಹೋಗಲೇಬೇಕು ಎಂದು ನನಗಿದ್ದ ಉತ್ಸಾಹದ ಕಾರಣದಿಂದ ಅಲ್ಲಿಗೆ ಹೊರಟೇಬಿಟ್ಟೆ.
ಮನೆಯವರ ಒಪ್ಪಿಗೆ ಪಡೆದು, ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡೆ ಹೊರಟಿದ್ದೆ, ಅಲ್ಲಿ ತಲುಪಿದಾಗ ಫ್ರೆಂಚ್ ವ್ಯಕ್ತಿಯೊಬ್ಬರು 14,000 ಅಡಿಗಳಷ್ಟು ಎತ್ತರಕ್ಕೆ ಏರಿ, ಹಿಂದಿರುಗಿದ್ದಾರೆ ಎಂಬುದು ತಿಳಿಯಿತು. ಆದ್ದರಿಂದ ಹೃದಯ ಶಸ್ತ್ರಚಿಕಿತ್ಸೆ ನಂತರ ಇಬಿಸಿ ತಲುಪಿದ ಇತಿಹಾಸ ಹೊಂದಿರುವ ಮೊದಲ ವ್ಯಕ್ತಿಯಾದೆ. ಆದರೆ, ನಾನು ಶಿಖರ ತಲುಪುತ್ತಿದ್ದಂತೆ, ನಾನು ಶಿಖರ ಏರುವ ಸುದ್ದಿ ಬಹು ದೂರದವರೆಗೂ ತಲುಪಿತ್ತು. ಅಂದಿನ ನೇಪಾಳದ ಪ್ರಧಾನಿ ಲೋಕೇಂದ್ರ ಬಹದ್ಧೂರ್ ಚಂದ್ ಅವರನ್ನು ಭೇಟಿ ಮಾಡುವ ಅವಕಾಶ ಕೂಡ ನನಗೆ ಸಿಕ್ಕಿತು. ಅವರು ನನ್ನ ಪ್ರಯತ್ನಗಳನ್ನು ಮೆಚ್ಚಿ, ಹೊಗಳಿದರು ಎಂದು ತಿಳಿಸಿದರು.
ಅಂದಿನಿಂದ ನಾನು ಹಿಂತಿರುಗಿ ನೋಡಲೇ ಇಲ್ಲ. ಇಬಿಸಿ ನಂತರ, ಟಾಂಜಾನಿಯಾದ ಕಿಲಿಮಂಜಾರೋ ಪರ್ವತವನ್ನು ಏರುವುದು ನನ್ನ ಮುಂದಿನ ಗುರಿಯಾಗಿತ್ತು (5,895 ಮೀ). ನಾನು ನನ್ನ 70ನೇ ಹುಟ್ಟುಹಬ್ಬವನ್ನು ಶೃಂಗಸಭೆಯಲ್ಲಿ ಆಚರಿಸಿದೆ. ಆಗ ನನ್ನ 75ನೇ ಹುಟ್ಟುಹಬ್ಬಕ್ಕೆ ಮೌಂಟ್ ಫ್ಯೂಜಿಗೆ ಭೇಟಿ ನೀಡಬೇಕು ಎಂದು ನಿರ್ಧರಿಸಿದೆ. ಆದರೆ, ನನ್ನ ಯೋಜನೆಗೆ ಕೋವಿಡ್ ತಣ್ಣೀರು ಸುರಿಯಿತು. ಈಗ ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದರಿಂದ ನಾನು ಶೀಘ್ರದಲ್ಲೇ ಮೌಂಟ್ ಫ್ಯೂಜಿಯಲ್ಲಿ ನನ್ನ ಹೆಜ್ಜೆ ಗುರುತು ಸ್ಥಾಪಿಸಲಿದ್ದೇನೆ ಎಂದರು.
ಹೃದಯ ಶಸ್ತ್ರಚಿಕಿತ್ಸೆಯ ನಂತರ ನಮ್ಮ ಹೃದಯ ಇನ್ನೂ ಯಂಗ್ ಆಗುತ್ತದೆ. ಜೀವನವನ್ನು ಪೂರ್ಣವಾಗಿ ಬದುಕಬೇಕು. ಒಳ್ಳೆಯ ಅಥವಾ ಕೆಟ್ಟ ಆಹಾರ ಎಂದೇನು ಇರುವುದಿಲ್ಲ. ಬೆಂಗಳೂರಲ್ಲಿ ಜನಿಸಿ ಮತ್ತು ಅಮೆರಿಕಾ ಮತ್ತು ಇಂಗ್ಲೆಂಡ್ನಲ್ಲಿ ಯಶಸ್ವಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದೇನೆ. ಬಡವರಿಗೆ ಸಹಾಯ ಮಾಡಲೆಂದೇ ಚಾರಿಟಿ ಕೆಲಸವನ್ನು ಪ್ರಾರಂಭಿಸಲು ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹಾಸ್ಟೆಲ್ ತೆರೆಯಲು ಯೋಜಿಸಿದ್ದೇನೆ. ಎಲ್ಲರನ್ನು ಪ್ರೇರೇಪಿಸಲು ವೈದ್ಯರ ಸಾಮಾಜಿಕ ಪ್ರಜ್ಞೆಯ ಸಂಸ್ಥೆಯನ್ನು ಪ್ರಾರಂಭಿಸಲು ಮುಂದಾಗಿದ್ದೇನೆ ಎಂದರು.
ಇದನ್ನೂ ಓದಿ: ಅಕಾಲಿಕ ಸಾವು ತಡೆಯುವಲ್ಲಿ ನಡಿಗೆ ಪ್ರಯೋಜನ; ವಾರದಲ್ಲಿ 8000 ಸ್ಟೆಪ್ಸ್ ನಡೆಯಿರಿ ಸಾಕು!