ಹೈದರಾಬಾದ್: ಮಕ್ಕಳಾಗದ ದಂಪತಿಗಳು ಮಾನಸಿಕ ಒತ್ತಡ, ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುತ್ತಾರೆ. ಮಕ್ಕಳು ಆಗದಿರುವ ಸಮಸ್ಯೆಗಳ ಹಿನ್ನೆಲೆ ಆತ್ಮಸ್ಥೈರ್ಯ ಎಂಬುದು ಕುಗ್ಗಿರುತ್ತದೆ. ಅಲ್ಲದೇ ಇದಕ್ಕಿಂತ ಹೆಚ್ಚಿನ ಸಾಮಾಜಿಕ, ಮಾನಸಿಕ ಮತ್ತು ಇತರ ಸಮಸ್ಯೆಗೆ ಇವರು ಗುರಿಯಾಗುತ್ತಾರೆ. ಫಲವತ್ತತೆ ಸಮಸ್ಯೆ ಅನುಭವಿಸುವ ಮಂದಿ ಆಹಾರ ಪದ್ದತಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಸುಧಾರಣೆ ಕಾಣಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ಈ ಸಂಬಂಧ ಮೊನಶ್ ಯುನಿವರ್ಸಿಟಿ ನಡೆಸಿರುವ ಅಧ್ಯಯನದಲ್ಲಿ ಹೊಸ ಭರವಸೆ ಕೂಡ ಸಿಕ್ಕಿದೆ.
ಒಣಹಣ್ಣುಗಳು ಅಥವಾ ನಟ್ಸ್ಗಳಾದ ಬಾದಾಮಿ ಅಥವಾ ವಾಲ್ನಟ್ಗಳು ಪುರಷರಲ್ಲಿ ವೀರ್ಯದ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಫಲವತ್ತತೆ ಹೆಚ್ಚಿಸುತ್ತದೆ ಎಂದು ಅಧ್ಯಯನ ತೋರಿಸಿದೆ. ದಿನಕ್ಕೆ 60-75 ಗ್ರಾಂ ನಟ್ಸ್ ಸೇವನೆ ಮಾಡುವುದರಿಂದ ಸಕಾರಾತ್ಮಕ ಫಲಿತಾಂಶ ಪಡೆಯಬಹುದು. ಇದನ್ನು ಪತ್ತೆ ಮಾಡಿದ ನಾಲ್ಕು ಅಧ್ಯಯನಗಳು ಕೂಡ ತಿಳಿಸಿದೆ. ಒಣ ಹಣ್ಣುಗಳನ್ನು ಸೇವಿಸುವ ಮತ್ತು ಸೇವಿಸದ ಎರಡು ಗುಂಪುಗಳ ನಡುವೆ ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ, ನಟ್ಸ್ ಸೇವಿಸುವವರಲ್ಲಿ ಎಂಡೊಮೆಟ್ರಿಯಲ್ ಆರೋಗ್ಯ, ವೀರ್ಯ ಚಲನಶೀಲತೆ ಹೆಚ್ಚಿಸಿದೆ. ಅಲ್ಲದೇ, ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಸಸ್ಯ ಆಧಾರಿತ ಕಬ್ಬಿಣ, ಪ್ರೋಟೀನ್ ಮತ್ತು ಅಪರ್ಯಾಪ್ತ ಕೊಬ್ಬನ್ನು ಒದಗಿಸುತ್ತದೆ ಎಂಬುದಾಗಿ ತಿಳಿದು ಬಂದಿದೆ.
ಸಂಶೋಧಕರು ಹೇಳುವಂತೆ, ಜೀವನಶೈಲಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳದೇ ನಿಮ್ಮ ನಿತ್ಯದ ಆಹಾರದಲ್ಲಿ ವಾಲ್ನಟ್, ಬಾದಾಮಿ ಸೇರಿದಂತೆ ಎಲ್ಲ ರೀತಿಯ ಒಣ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕರ ಪ್ರಯೋಜನ ಪಡೆಯಬಹುದು. ಇದು ಫಲವತ್ತತ್ತೆ ಹೆಚ್ಚಿಸುತ್ತದೆ. ಒಣಹಣ್ಣುಗಳಲ್ಲಿ ಒಮೆಗಾ - 3, ಬಹು ಅಪರ್ಯಾಪ್ತ ಕೊಬ್ಬುಗಳು, ಫೈಬರ್, ವಿಟಮಿನ್ಸ್, ಮಿನರಲ್ಸ್ ಮತ್ತು ಪೈಥೋಕೆಮಿಕಲ್ಸ್ ಸಂತಾನೋತ್ಪತ್ತಿ ವ್ಯವಸ್ಥೆಗೆ ಕೊಡುಗೆ ನೀಡುತ್ತದೆ.
ಅನೇಕ ಜನರು ಕಡಲೆಬೀಜ ಸೇವನೆಯಿಂದ ಕೊಬ್ಬು ಹೆಚ್ಚುತ್ತದೆ ಎಂದು ಭಾವಿಸುತ್ತಾರೆ. ಆದರೆ, ಸಂಶೋಧಕರು ಹೇಳುವಂತೆ, ದಿನಕ್ಕೆ ಒಂದು ಮುಷ್ಠಿ ಕಡಲೆಬೀಜ ತಿನ್ನುವವರು ಇದನ್ನು ತಿನ್ನದವರಿಗಿಂತ ಸಣ್ಣಗೆ ಇರುತ್ತಾರೆ. ಕಡಲೆ ಬೀಜದಲ್ಲಿ ಏಕಪರ್ಯಾಪ್ತ ಕೊಬ್ಬುಗಳು, ಆ್ಯಂಟಿ ಆಕ್ಸಿಡೆಂಟ್ ಮತ್ತು ಪೌಷ್ಟಿಕಾಂಶಗಳು ಇರುತ್ತದೆ. ಇದನ್ನು ದೇಹ ಉತ್ಪಾದಿಸಲು ಸಾಧ್ಯವಿಲ್ಲ. ಇದು ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಉಪ್ಪು ಅಥವಾ ಸಕ್ಕರೆ ಭರಿತ ಕಡಲೆಬೀಜಕ್ಕಿಂತ ಹುರಿದ ಮತ್ತು ಕಚ್ಛಾ ಕಡಲೆ ಬೀಜ ಹೆಚ್ಚಿನ ಲಾಭ ನೀಡುತ್ತದೆ.
ಇದನ್ನೂ ಓದಿ: ವಾಯುಮಾಲಿನ್ಯ: ಮಹಿಳೆಯರ ಸಂತಾನೋತ್ಪತ್ತಿ ಮೇಲಾಗುವ ಪರಿಣಾಮವೇನು?