ಪತಿ-ಪತ್ನಿಯರ ಮಧ್ಯೆ ಉಂಟಾಗುವ ವೈಮನಸ್ಯ, ಭಿನ್ನಾಭಿಪ್ರಾಯಗಳು ಬಗೆಹರಿಸಲಾರದ ಮಟ್ಟಕ್ಕೆ ತಲುಪಿದಾಗ ವಿಷಯ ವಿಚ್ಛೇದನದ ಮಟ್ಟಕ್ಕೆ ಹೋಗುತ್ತದೆ. ಆದರೆ, ಬಹಳಷ್ಟು ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿಗೆ ಜೀವನಾಂಶ ನೀಡಲು ಪತಿ ನಿರಾಕರಿಸುತ್ತಾನೆ. ಇದರಿಂದ ಪರಿತ್ಯಕ್ತ ಮಹಿಳೆಯ ಜೀವನ ದುರ್ಭರವಾಗುತ್ತದೆ. ಸಾಮಾನ್ಯವಾಗಿ ವಿಚ್ಛೇದನದ ನಂತರ ಮಕ್ಕಳು ತಾಯಿಯ ಬಳಿಯೇ ಉಳಿಯುವುದರಿಂದ ಮಹಿಳೆ ತನ್ನನ್ನು ತಾನು ಸಾಕುವುದರೊಂದಿಗೆ, ಮಕ್ಕಳ ಆರೈಕೆಯನ್ನೂ ಮಾಡಬೇಕಾಗುತ್ತದೆ.
ವಿಚ್ಛೇದನದಿಂದ ಸಮಾಜದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿಜಯವಾಡದ ಮಹಿಳಾ ಕಲ್ಯಾಣ ಸಂಸ್ಥೆಯಾಗಿರುವ ವಾಸವ್ಯ ಮಹಿಳಾ ಮಂಡಳಿ ಅಧ್ಯಯನವೊಂದನ್ನು ನಡೆಸಿದೆ. ಸಂಸ್ಥೆಯು ನಡೆಸಿದ ಅಧ್ಯಯನದ ಪ್ರಕಾರ- ವಿವಿಧ ನ್ಯಾಯಾಲಯಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ನೋಡುವುದಾದರೆ, 2018 ರಿಂದ 2020 ರ ಮಧ್ಯದಲ್ಲಿ ಕೇವಲ ಎರಡು ವರ್ಷಗಳಲ್ಲಿ ದೇಶಾದ್ಯಂತ 3,70,801 ವಿಚ್ಛೇದನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 41,934 ಪ್ರಕರಣಗಳಲ್ಲಿ ಮಹಿಳೆಯ ಪರವಾಗಿ ತೀರ್ಪು ನೀಡಲಾಗಿದೆ.
ದಂಪತಿಯ ಮಧ್ಯದ ಭಿನ್ನಾಬಿಪ್ರಾಯದಿಂದ ವಿಚ್ಛೇದನ ಪಡೆದ ನಂತರ ಬಹಳಷ್ಟು ಮಹಿಳೆಯರು ಮರುವಿವಾಹವಾಗದೆ ತಮ್ಮ ಮಕ್ಕಳನ್ನು ತಮ್ಮೊಂದಿಗೆ ಇಟ್ಟುಕೊಂಡು ಸಾಕಲು ಬಯಸುತ್ತಾರೆ. ಇಂಥ ಸಂದರ್ಭಗಳಲ್ಲಿ ಕಾನೂನಿನ ಪ್ರಕಾರ ಗಂಡನಾದವನು ಜೀವನದ ಅಗತ್ಯ ವೆಚ್ಚಗಳಿಗಾಗಿ ಹಣ ಪಾವತಿಸುವುದು ಕಡ್ಡಾಯ. ಆದರೆ ಸಾಕಷ್ಟು ನೆಪಗಳನ್ನು ಮುಂದೆ ಮಾಡುತ್ತ ಪುರುಷರು ಜೀವನಾಂಶ ನೀಡಲು ಹಿಂದೇಟು ಹಾಕುತ್ತಾರೆ ಅಥವಾ ವಿಳಂಬ ಮಾಡುತ್ತಾರೆ. ಹೀಗಾದಾಗ ಮಹಿಳೆ ಮತ್ತೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ.
ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳುವ ಕುತಂತ್ರಗಳು: 1. ಕೆಲವರು ತಾವು ಮಾಡುತ್ತಿರುವ ಕೆಲಸವನ್ನು ಬಿಟ್ಟು ಅದರ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಕೆಲಸ ಹೋಗಿರುವುದರಿಂದ ಈಗ ತಮ್ಮ ಬಳಿ ಯಾವುದೇ ಆದಾಯ ಇಲ್ಲ ಎಂದು ಹೇಳಿಕೊಳ್ಳುತ್ತಾರೆ.
2. ಸ್ಥಿರಾಸ್ಥಿಯಲ್ಲಿ ಪತ್ನಿಗೆ ಪಾಲು ಕೊಡುವುದರಿಂದ ತಪ್ಪಿಸಿಕೊಳ್ಳಲು ವಿಚ್ಛೇದನ ಆಗುತ್ತಿರುವಂತೆಯೇ ಗಂಡನ ಹೆಸರಿನಲ್ಲಿರುವ ಆಸ್ತಿಯನ್ನು ಕುಟುಂಬದ ಬೇರೆಯವರಿಗೆ ಹೆಸರಿಗೆ ವರ್ಗಾಯಿಸುವುದು. ಇನ್ನು ಕೆಲವರು ವಿಳಾಸವೇ ಪತ್ತೆಯಾಗದಂತೆ ಕಣ್ಮರೆಯಾಗುತ್ತಾರೆ.
3. ಕೆಲ ಪುರುಷರು ತಮ್ಮ ಪತ್ನಿಗೆ ತಪ್ಪು ವಿಳಾಸಕ್ಕೆ ವಿಚ್ಛೇದನ ನೋಟಿಸ್ ಕಳುಹಿಸುತ್ತಾರೆ. ನಂತರ ಆಕೆ ವಿಚಾರಣೆಗೆ ಹಾಜರಾಗಿಲ್ಲವೆಂದು ನ್ಯಾಯಾಲಯದಲ್ಲಿ ವಾದಿಸಿ ತಮ್ಮ ಪರವಾಗಿ ತೀರ್ಪು ಪಡೆದುಕೊಳ್ಳುತ್ತಾರೆ. ಹೀಗಾದಾಗ ಸಂತ್ರಸ್ತ ಮಹಿಳೆ ಜೀವನಾಂಶದ ಹಕ್ಕಿನಿಂದ ವಂಚಿತಳಾಗುತ್ತಾಳೆ.
ನೊಂದ ಮಹಿಳೆಯರ ನೆರವಿಗೆ ನಿಲ್ಲುವುದು ಅಗತ್ಯ: ಬಹಳಷ್ಟು ಪ್ರಕರಣಗಳಲ್ಲಿ ವಿಚ್ಛೇದಿತ ಪುರುಷರು ನ್ಯಾಯಾಲಯದ ಆದೇಶಕ್ಕೆ ಯಾವುದೇ ಬೆಲೆ ನೀಡುವುದಿಲ್ಲ. ಹೀಗಾಗಿ ವಿಚ್ಛೇದನದ ನಂತರ ಮಹಿಳೆ ಹಾಗೂ ಆಕೆಯ ಮಕ್ಕಳು ಇನ್ನಿಲ್ಲದ ಸಮಸ್ಯೆಗಳಿಂದ ಬಳಲುವಂತಾಗುತ್ತದೆ. ಕೆಲವೊಮ್ಮೆ ಉಪವಾಸ ಬೀಳುವ ಪರಿಸ್ಥಿತಿಗಳೂ ಎದುರಾಗುತ್ತವೆ. ಮಕ್ಕಳು ಅನಿವಾರ್ಯವಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಗುತ್ತದೆ. ಇದೆಲ್ಲದರ ನಿವಾರಣೆಗೆ ಲೋಕ್ ಅದಾಲತ್ ಮಾದರಿಯಲ್ಲಿ ವಿಶೇಷ ನ್ಯಾಯದಾನ ವ್ಯವಸ್ಥೆಯೊಂದನ್ನು ರೂಪಿಸುವುದು ಈಗಿನ ಅಗತ್ಯವಾಗಿದೆ. ಸಂತ್ರಸ್ತ 100 ಮಹಿಳೆಯರೊಂದಿಗೆ ಮಾತನಾಡಿ ಹಾಗೂ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ನಂತರ ನಾವು ಈ ಕುರಿತಾದ ವರದಿಯೊಂದನ್ನು ಸುಪ್ರೀಂ ಕೋರ್ಟ್ಗೆ ಕಳುಹಿಸಿದ್ದೇವೆ ಎನ್ನುತ್ತಾರೆ ವಾಸವ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಕೀರ್ತಿ ಬೊಲ್ಲಿನೇನಿ.