ಖರ್ಜೂರ ರುಚಿಕರ ಒಣ ಹಣ್ಣುಗಳ ಪೈಕಿ ಒಂದು. ತಾಜಾ ಹಣ್ಣುಗಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಪ್ರೊಟೀನ್, ಕಾರ್ಬೋಹೈಡ್ರೇಟ್, ಅಗತ್ಯ ವಿಟಮಿನ್ಸ್, ಮಿನರಲ್ಸ್ ಹಾಗು ಫೈಬರ್ನಂತಹ ಅತ್ಯಗತ್ಯ ಅಂಶಗಳು ಇದರಲ್ಲಿವೆ. ಆರೋಗ್ಯಕರ ಜೀವನ ಶೈಲಿಗೆ ಬೇಕಾದ ಎಲ್ಲ ಅಂಶಗಳನ್ನೂ ಒಣ ಹಣ್ಣು ಖರ್ಜೂರ ಸೇವಿಸುವ ಮೂಲಕ ಪಡೆಯಬಹುದು.
ಒಣ ಖರ್ಜೂರಗಳಲ್ಲಿ ದೇಹಕ್ಕೆ ಅಗತ್ಯವಿರುವ ಕಾರ್ಬೋಹೈಡ್ರೇಟ್ ಅಧಿಕವಿದೆ. 100 ಗ್ರಾಂ ಖರ್ಜೂರ 75 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಹೊಂದಿರುತ್ತದೆ. ಉಳಿದಂತೆ, 7 ಗ್ರಾಂ ಫೈಬರ್, 2 ಗ್ರಾಂ ಪ್ರೊಟೀನ್ ಇದರಲ್ಲಿದೆ. ಅಲ್ಲದೇ ಪೊಟ್ಯಾಶಿಯಂ, ಮ್ಯಾಂಗನೀಸ್, ಕಾಪರ್, ಐರನ್, ವಿಟಮಿನ್ ಬಿ6, ಆ್ಯಂಟಿಆಕ್ಸಿಡೆಂಟ್ಸ್‌ನಂತಹ ಸಾಕಷ್ಟು ಪೋಷಕಾಂಶಗಳು ಹೇರಳವಾಗಿವೆ.
ಉತ್ತಮ ತ್ವಚೆ: ಖರ್ಜೂರದಲ್ಲಿರುವ ಆ್ಯಂಟಿಆಕ್ಸಿಡೆಂಟ್ಸ್ ದೇಹದಲ್ಲಿನ ಜೀವಕೋಶಗಳ ಹಾನಿ ತಪ್ಪಿಸುತ್ತದೆ. ಅನೇಕ ಕಾಯಿಲೆಗಳನ್ನೂ ತಡೆಹಿಡಿಯುತ್ತದೆ. ಇತರೆ ಒಣ ಹಣ್ಣುಗಳಿಗೆ ಹೋಲಿಸಿದರೆ ಖರ್ಜೂರದಲ್ಲಿ ಆ್ಯಂಟಿಆಕ್ಸಿಡೆಂಟ್ಸ್ ಅಂಶ ತುಸು ಹೆಚ್ಚೇ. ಕ್ಯಾರೊಟಿನಾಯ್ಡ್ ಎಂಬ ಆ್ಯಂಟಿಆಕ್ಸಿಡೆಂಟ್ಸ್ ನಿಮ್ಮ ಹೃದಯದ ಆರೋಗ್ಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅಲ್ಲದೇ ಕಣ್ಣಿನ ಸಮಸ್ಯೆ, ಕ್ಯಾನ್ಸರ್ ಅಪಾಯವನ್ನೂ ತಡೆಯಬಲ್ಲದು.
ಗರ್ಭಿಣಿಯರಿಗೆ ಉತ್ತಮ: ಖರ್ಜೂರ ಮಹಿಳೆಯರಿಗೆ ವಿಶೇಷ ಪ್ರಯೋಜನ ನೀಡುತ್ತದೆ. ಏಕೆಂದರೆ ಇದರಲ್ಲಿ ಫೈಬರ್, ಐರನ್, ವಿಟಮಿನ್ ಸಿ, ಡಿ, ವಿಟಮಿನ್ ಬಿ ಕಾಂಪ್ಲೆಕ್ಸ್ ಅಂಶಗಳು ಸಮೃದ್ಧವಾಗಿವೆ. ಹಾಗಾಗಿ ಇದು ಗರ್ಭಿಣಿಯರ ಆರೋಗ್ಯಕ್ಕೂ ಪೂರಕ. ಸುಲಭ ಹೆರಿಗೆಗೆ ಒಳ್ಳೆಯದು. ವೈದ್ಯರ ಸಲಹೆಯ ಮೇರೆಗೆ ಸೇವಿಸುವುದು ಸೂಕ್ತ. ಇದರಲ್ಲಿರುವ ಪೋಷಕಾಂಶಗಳು ಕೂದಲ ಆರೈಕೆಗೂ ಸಹಾಯಕ.
ಜೀರ್ಣಕ್ರಿಯೆ: ಖರ್ಜೂರದಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಉತ್ತಮ ಜೀರ್ಣಾಂಗ ವ್ಯವಸ್ಥೆ ಹೊಂದಲು ನೆರವಾಗುತ್ತದೆ. ಮಲಬದ್ಧತೆ ನಿಯಂತ್ರಿಸುತ್ತದೆ. ಖರ್ಜೂರ ಸೇವಿಸುವವರಲ್ಲಿ ಮಲಬದ್ಧತೆ ಸಮಸ್ಯೆ ಇರುವುದಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ರಕ್ತದ ಸಕ್ಕರೆ ಮಟ್ಟವನ್ನೂ ನಿಯಂತ್ರಣದಲ್ಲಿಡುತ್ತದೆ.
ಜ್ಞಾಪಕಶಕ್ತಿ ವೃದ್ಧಿ: ಖರ್ಜೂರ ಸೇವನೆ ಮೆದುಳಿಗೆ ಬಹಳ ಪ್ರಯೋಜನಕಾರಿ. ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ. ಕಲಿಕಾ ಸಾಮರ್ಥ್ಯ, ಜ್ಞಾಪಕಶಕ್ತಿ ವೃದ್ಧಿಸುವುದರ ಜೊತೆಗೆ ಆತಂಕ ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಸ್ನಾಯುಗಳ ಆರೋಗ್ಯ, ಉರಿಯೂತ ನಿಯಂತ್ರಣಕ್ಕೆ ಖರ್ಜೂರ ಉತ್ತಮ ಆಯ್ಕೆ.
ಇದನ್ನೂ ಓದಿ: Menstrual pains: ಋತುಚಕ್ರದ ನೋವಿಗೆ ಜಲ ಚಿಕಿತ್ಸೆ ನೈಸರ್ಗಿಕ ಪರಿಹಾರ; ಇದನ್ನೊಮ್ಮೆ ಟ್ರೈ ಮಾಡಿ ನೋಡಿ
ಲೈಂಗಿಕ ಆರೋಗ್ಯ: ಪುರುಷರ ಲೈಂಗಿಕ ಆರೋಗ್ಯಕ್ಕೆ ಖರ್ಜೂರ ಸಹಾಯಕ. ಹಲವು ಅಧ್ಯಯನಗಳ ಪ್ರಕಾರ, ಮೂತ್ರಪಿಂಡದ ಆರೋಗ್ಯ ರಕ್ಷಿಸುತ್ತದೆ. ಬಂಜೆತನ (ಪುರುಷರ) ಸಮಸ್ಯೆ ತಡೆಗಟ್ಟಲು ಉಪಯುಕ್ತ. ನಾರಿನಾಂಶ ಹೆಚ್ಚಿರುವುದರಿಂದ ಬೆಳಗ್ಗೆ ಸೇವಿಸುವುದು ಒಳಿತು. ಹಸಿವು ನೀಗಿಸುವಲ್ಲಿಯೂ ಪರಿಣಾಮಕಾರಿ. ಖರ್ಜೂರವನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ರೋಗಗಳಿಂದ ದೂರವಿರಬಹುದು.