ಲಕ್ನೋ: ನಿಯಮಿತವಾಗಿ ಸಾಫ್ಟ್ ಡ್ರಿಂಕ್ಸ್ ಸೇವನೆ ಮಾಡುವುದರಿಂದ ಜಡ ಜೀವನಶೈಲಿ ವೃದ್ಧಿಯಾಗಿ, ಮೂಳೆಗಳ ಜಡತೆಗೂ ಕಾರಣವಾಗಬಹುದು. ಇದು 40 ರಿಂದ 50 ವರ್ಷದೊಳಗಿನ ವಯೋಮಾನದವರಲ್ಲಿ ಮೂಳೆಗಳ ಮಿನರಲ್ ಸಾಂದ್ರತೆ (ಬಿಎಂಡಿ) ಕಡಿಮೆಯಾಗಲು ಕಾರಣವಾಗುತ್ತದೆ. ಬಳಿಕ ಅಸ್ಟಿಯೊಪೋರಾಸಿಸ್ ಆಗಿ ಬದಲಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ವಯಸ್ಕರು ಪ್ರತಿನಿತ್ಯ ಸಾಫ್ಟ್ ಡ್ರಿಂಕ್ ಸೇವನೆ ಮಾಡುವುದರಿಂದ ಅವರಿಗೆ ಹೆಚ್ಚಿನ ಮೂಳೆ ಮುರಿತದ ಅಪಾಯವಿದೆ ಎಂದು ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯ ಪ್ರೊ.ಶಾ ವಲಿಲ್ಲುಹಾ ತಿಳಿಸಿದ್ದಾರೆ. ಈ ಸಂಬಂಧ ಚೀನಾದಲ್ಲಿ ಏಳು ವರ್ಷಗಳ ಕಾಲ 17 ಸಾವಿರ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅಧ್ಯಯನದಲ್ಲಿ, ಸಾಫ್ಟ್ ಡ್ರಿಂಕ್ ಮುರಿತದ ಅಪಾಯದೊಂದಿಗೆ ಸಂಬಂಧ ಹೊಂದಿದೆ. 100ರಲ್ಲಿ 35 ಮಂದಿ 40 ರಿಂದ 50 ವರ್ಷ ವಯೋಮಾನದವರು ಬಿಎಂಡಿ ಸಮಸ್ಯೆ ಹೊಂದಿರುವುದು ಪತ್ತೆಯಾಗಿದೆ.
ಈ ಅಂಶಗಳಿಂದ ಅಪಾಯ: ಮೂಳೆ ಶಸ್ತ್ರರೋಗ ತಜ್ಞರು ಮತ್ತು ರೈಲ್ವೆ ಮೆಡಿಕಲ್ ಸೂಪರಿಟೆಂಡೆಂಟ್ ಆಸ್ಪತ್ರೆ ಮಾಜಿ ಮುಖ್ಯಸ್ಥ ಡಾ.ಸಂಜಯ್ ಶ್ರೀವಾಸ್ತವಾ ಈ ಕುರಿತು ಮಾತನಾಡಿದ್ದು, ಸಾಫ್ಟ್ ಡ್ರಿಂಕ್ನಲ್ಲಿ ಸಕ್ಕರೆ, ಸೋಡಿಯಂ ಮತ್ತು ಕೆಫೆನ್ ಅಂಶಗಳಿವೆ. ಇವು ಮೂಳೆಯಲ್ಲಿನ ಕ್ಯಾಲ್ಸಿಯಂ ನಷ್ಟಕ್ಕೆ ಕಾರಣವಾಗುತ್ತದೆ. ಮೂಳೆ ಮುರಿತದ ಅಪಾಯ ತರುತ್ತದೆ ಎಂದು ವಿವರಿಸಿದ್ದಾರೆ.
ಪ್ಲಾಸ್ಟಿಕ್ನಲ್ಲಿ ಕಂಡು ಬರುವ ರಾಸಾಯನಿಕ ಪ್ಯಾಥಲೆಟ್ಸ್ಗಳು ಸಾಫ್ಟ್ ಡ್ರಿಂಕ್ ಬಾಟಲಿಗಳ ಉತ್ಪಾದನೆಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರಿ, ಅದರ ದುರ್ಬಲತೆ ಮತ್ತು ಆಸ್ಥಿರಂಧ್ರತೆಗೆ ಕಾರಣವಾಗುತ್ತದೆ. ವೈಯಕ್ತಿಕ ಯೋಗಕ್ಷೇಮ ಮತ್ತು ಮೂಳೆಗಳ ಆರೋಗ್ಯದ ಉದ್ದೇಶದಿಂದ ಸಾಫ್ಟ್ ಡ್ರಿಂಕ್ ಸೇವನೆ ಮಾಡದಂತೆ ಜನರಲ್ಲಿ ಎಚ್ಚರಿಸುವ ಕಾರ್ಯವನ್ನು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮಾಡಬೇಕಿದೆ ಎಂದು ತಜ್ಞರು ಒತ್ತಾಯಿಸುತ್ತಾರೆ. ಈ ಸಂಬಂಧ ಜನರಿಗೆ ಈ ಸಾಫ್ಟ್ ಡ್ರಿಂಕ್ಸ್ಗಳು ಎಷ್ಟು ಅಪಾಯಕಾರಿ ಎಂದು ಶಿಕ್ಷಣ ನೀಡಬೇಕಿದೆ ಎಂದರು.
ತಜ್ಞರ ಸಲಹೆ: ಮೂಳೆಗಳ ಆರೋಗ್ಯದ ಸಮಸ್ಯೆಗಳನ್ನು ಆರಂಭದಲ್ಲಿ ಪತ್ತೆ ಮಾಡುವುದು ಅವಶ್ಯಕ. ಅದರಲ್ಲೂ ಮಹಿಳೆಯರು ದಶಕಗಳ ಹಿಂದಿನಿಂದಲೂ ಅಸ್ಟಿಯೊಪೋರೊಸಿಸ್ ಸಮಸ್ಯೆಗೆ ಒಳಗಾಗುತ್ತಿದ್ದು, ಕಾಳಜಿ ವಹಿಸಬೇಕಿದೆ. ಅದರಲ್ಲೂ ಪಾಶ್ಚಿಮಾತ್ಯ ದೇಶದಲ್ಲಿ ಮೆನೋಪಸ್ ಸಮಯದಲ್ಲಿ ಮಹಿಳೆಯರು ಮೂಳೆಗಳ ಆರೋಗ್ಯದ ಬಗ್ಗೆ ಗಮನ ವಹಿಸಬೇಕು ಎಂದಿದ್ದಾರೆ.
ಹೊಸ ಮೂಳೆಗಳ ಸೃಷ್ಟಿಯಲ್ಲಿ ಈಸ್ಟೋಜನ್ ಹಾರ್ಮೋನ್ ಪ್ರಮುಖ ಪಾತ್ರವಹಿಸುತ್ತದೆ. ಬಿಎಂಡಿ ಕುಸಿಯುವಿಕೆ ಅಸ್ಟಿಯೊಪೊರೋಸಿಸ್ಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ 45 ವರ್ಷ ಮೇಲ್ಪಟ್ಟ ಬೆನ್ನು ನೋವಿನಿಂದ ಬಳಲುತ್ತಿರುವ ಮಹಿಳೆಯರು ಪರೀಕ್ಷೆಗೆ ಒಳಗಾಗಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಜನರು ನಿಯಮಿತ ದೈಹಿಕ ಚಟುವಟಿಕೆ ಮತ್ತು ಸಮತೋಲಿತ ಆಹಾರದಂತಹ ಆರೋಗ್ಯಯುತ ಜೀವನ ಶೈಲಿ ರೂಢಿಸಿಕೊಳ್ಳಲು ಉತ್ತೇಜಿಸಬೇಕಿದೆ ಎಂದು ಕೆಜಿಎಂಯುನ ವೈದ್ಯ ಪ್ರೊ.ಶೈಲೇಂದ್ರ ಸಿಂಗ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ವಿಶ್ವ ಅಸ್ಪಿಯೊಪೊರೋಸಿಸ್ ದಿನ: ಆರೋಗ್ಯಯುತ ಭವಿಷ್ಯಕ್ಕೆ ಸದೃಢ ಮೂಳೆಗಳ ನಿರ್ಮಾಣಕ್ಕೆ ನೀಡಬೇಕಿದೆ ಒತ್ತು