ಬಿಜೀಂಗ್: ಚೀನಾದಲ್ಲಿ ಕೋವಿಡ್ 19 ಸೋಂಕು ಉಲ್ಬಣಿಸಿದೆ. ಅತಿ ಹೆಚ್ಚು ಪ್ರಸರಣ ಸಾಮರ್ಥ್ಯ ಹೊಂದಿರುವ ಜೆಎನ್.1 ತಳಿ ಪ್ರಾಬಲ್ಯ ಹೊಂದಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಆರೋಗ್ಯ ಕಮಿಷನ್ ವಕ್ತಾರರು, ಹೊಸ ವರ್ಷದ ದಿನದಿಂದ ದೇಶದಲ್ಲಿ ಸೋಂಕು ಪ್ರಮಾಣ ಹೆಚ್ಚುತ್ತಿದೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಏರಿಳಿತ ಕಂಡಿದೆ ಎಂದು ಹೇಳಿರುವುದಾಗಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಪ್ರಸ್ತುತ ದೇಶದಲ್ಲಿ ಇನ್ಫುಯೆಂಜಾ ಪ್ರಕರಣಗಳು ಕಂಡುಬರುತ್ತಿದ್ದು, ಕೋವಿಡ್ ಪ್ರಕರಣಗಳು ಕಡಿಮೆ ಮಟ್ಟದಲ್ಲಿವೆ. ಆದಾಗ್ಯೂ, ಮಲ್ಟಿ ಚಾನಲ್ ಮಾನಿಟರಿಂಗ್ ಸಿಸ್ಟಂನ ಇತ್ತೀಚಿನ ದತ್ತಾಂಶದಂತೆ ಜೆಎನ್.1 ಸೋಂಕು ಏರಿಕೆ ಹಾದಿಯಲ್ಲಿದೆ ಎಂದು ಚೀನಾ ನ್ಯಾಷನಲ್ ಇನ್ಫುಯೆಂಜಾ ಸೆಂಟರ್‌ನ ನಿರ್ದೇಶಕ ವಾಂಗ್ ಡಯಾನ್ ತಿಳಿಸಿದ್ದಾರೆ.
ಹೊಸ ವರ್ಷದ ವೇಳೆ ಜನರ ಆಗಮನ ಮತ್ತು ನಿರ್ಗಮನಗಳು ಜೆಎನ್.1 ಪ್ರಾಬಲ್ಯಕ್ಕೆ ಕಾರಣವಾಗಿದ್ದು, ದೇಶಿಯ ಇನ್ಫುಯೆಂಜಾ ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಜನರ ಇಮ್ಯೂನಿಟಿ ಕೂಡ ಕ್ಷೀಣಿಸಿದೆ. ಇದರಿಂದ ಜನವರಿಯಲ್ಲಿ ಕೋವಿಡ್ ಸಾಂಕ್ರಾಮಿಕತೆ ಮರಳಬಹುದು. ಜೆಎನ್.1 ರೂಪಾಂತರ ಚೀನಾದಲ್ಲಿ ಪ್ರಬಲವಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ವಾಂಗ್ ಹೇಳಿದ್ದಾರೆ.
ದಕ್ಷಿಣ ಚೀನಾದಲ್ಲಿ ಅಕ್ಟೋಬರ್ ಆರಂಭದಲ್ಲಿ, ಉತ್ತರ ಚೀನಾದಲ್ಲಿ ಅಕ್ಟೋಬರ್ ನಂತರದಲ್ಲಿ ಇನ್ಫುಯೆಂಜಾ ಸೀಸನ್ ಪ್ರವೇಶಿಸಿದೆ. ಪ್ರಾರಂಭದಲ್ಲಿ, ಇನ್ಫುಯೆಂಜಾ ವೈರಸ್ನ ಎಚ್3ಎನ್2 ಉಪತಳಿ ಪ್ರಬಲ ಪ್ರಸರಣ ತಳಿಯಾಗಿದೆ. ಕಳೆದ ಮೂರು ವಾರದಿಂದ ದಕ್ಷಿಣ ಪ್ರಾಂತ್ಯದಲ್ಲಿ ಇನ್ಫುಯೆಂಜಾ ಬಿ ವೈರಸ್ ಶೇ 36.8ರಷ್ಟು ಪ್ರಸರಣ ಹೊಂದಿದರೆ, ಕಳೆದ ಐದು ವಾರದಿಂದ ಉತ್ತರ ಪ್ರಾಂತ್ಯದಲ್ಲಿ ಶೇ.57.7ರಷ್ಟು ಏರಿದೆ. ಕೆಲವು ಪ್ರಾಂತ್ಯದಲ್ಲಿ ಇನ್ಫುಯೆಂಜಾ ಬಿ ವೈರಸ್ನ ಪ್ರಮಾಣ ಇನ್ಫುಯೆಂಜಾ ಎಗಿಂತ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಚಳಿಗಾಲದಲ್ಲಿ ಶ್ವಾಸಕೋಶದ ರೋಗಗಳು ಏರಿಕೆ ಕಾಣುತ್ತದೆ. ಈ ಸಂದರ್ಭದಲ್ಲಿ ಇಮ್ಯುನಿಟಿ ದುರ್ಬಲವಾಗಿರುತ್ತದೆ. ಇದರಿಂದ ಸೋಂಕು ಮರುಕಳಿಸಬಹುದು. ಆದಾಗ್ಯೂ ಎರಡನೇ ಸೋಂಕಿನ ಲಕ್ಷಣಗಳು ಸೌಮ್ಯವಾಗಿ ಕಾಣಬಹುದು ಎಂದು ಪೀಕಿಂಗ್ ಯೂನಿವರ್ಸಿಟಿ ಫಸ್ಟ್ ಹಾಸ್ಪಟಲ್ನ ವಾಂಗ್ ಗುಯಿಕಿಯಾಂಗ್ ಮಾಹಿತಿ ನೀಡಿದ್ದಾರೆ.
ವಿವಿಧ ರೀತಿಯ ರೋಗಗಳು ಪರಿಸ್ಥಿತಿಯನ್ನು ಮತ್ತಷ್ಟು ಕೆಟ್ಟದಾಗಿಸಬಹುದು. ವಿಶೇಷವಾಗಿ ಮೇಲ್ಬಾಗದ ಶ್ವಾಸಕೋಶವನ್ನು ಹಾನಿಗೊಳಿಸುವಲ್ಲಿ ಇದು ಪರಿಣಾಮ ಬೀರಬಹುದು. ವೃದ್ಧರು ಹಾಗು ಇತರೆ ಆರೋಗ್ಯ ಸಮಸ್ಯೆ ಹೊಂದಿರುವವರಲ್ಲಿ ಕೋವಿಡ್ ಅಥವಾ ಇನ್ಫುಯೆಂಜಾ ಅವರ ಪರಿಸ್ಥಿತಿಯನ್ನು ಕೆಟ್ಟದಾಗಿಸುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜಾಗ್ರತೆವಹಿಸಬೇಕಿದೆ ಎಂದರು.
ಚಳಿಗಾಲದ ರಜೆಗಳು ಮತ್ತು ವಸಂತಋತುವಿನ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಟ್ಟಿಗೆ ಸೇರುತ್ತಾರೆ. ಇದು ಶ್ವಾಸಕೋಶದ ರೋಗ ಉಲ್ಬಣಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂದು ಸಲಹೆ ನೀಡಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ಜೆಎನ್ 1 ಕೊರೊನಾ ರೂಪಾಂತರದ ದೊಡ್ಡ ಅಲೆ ಬರಬಹುದು; ತಜ್ಞರ ಹೇಳಿಕೆ