ಮಹಾಮಾರಿ ಕೊರೊನಾ ಮಾನವನ ಆರೋಗ್ಯ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಉಂಟು ಮಾಡುತ್ತದೆ ಎಂಬುದು ತಿಳಿದ ವಿಷಯ. ಗಂಭೀರವಾದ ವಿಚಾರ ಎಂದರೆ ಮಧುಮೇಹ ರೋಗಿಗಳಿಗೆ ಕೊರೊನಾ ಮಾರಣಾಂತಿಕವಾಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯೊಂದು ಹೇಳಿದೆ. ಮಾನವನ ಉಸಿರಾಟ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುವ ಕೊರೊನಾ, ಮೇದೋಜ್ಜೀರಕ ಗ್ರಂಥಿಯ ಮೇಲೂ ಭಾರಿ ನಷ್ಟವನ್ನುಂಟು ಮಾಡುತ್ತದೆ. ಅಲ್ಲದೇ, ಬೀಟಾ ಕೋಶಗಳಲ್ಲಿ ಇನ್ಸುಲಿನ್ ಸ್ರವಿಸುವ ಕಣಗಳ ಸಂಖ್ಯೆಯನ್ನು ಕಡಿತಗೊಳಿಸುತ್ತದೆ. ಅಲ್ಲದೇ, ದೇಹದಲ್ಲಿನ ಗ್ಲುಕೋಸ್ ಅಂಶವನ್ನು ದುರ್ಬಲಗೊಳಿಸುವುದನ್ನು ವರದಿಯಲ್ಲಿ ಗುರುತಿಸಲಾಗಿದೆ.
ಕೊರೊನಾ ದಾಳಿಯ ಬಳಿಕ ಕೆಲ ರೋಗಿಗಳು ಇನ್ಸುಲಿನ್ ಅಂಶವನ್ನು ಕಳೆದುಕೊಳ್ಳುವುದಲ್ಲದೇ, ಮಧುಮೇಹ ರೋಗದಿಂದ ಬಳಲದೇ ಇದ್ದರೂ ಅವರಲ್ಲಿ ಗ್ಲುಕೋಸ್ ಮಟ್ಟ ಅಧಿಕಗೊಳ್ಳಲು ಕೊರೊನಾ ಕಾರಣವಾಗಿದೆ. ಕೋವಿಡ್ ಸೋಂಕು ತಿಂಗಳುಗಟ್ಟಲೇ ನಮ್ಮ ದೇಹದ ರೋಗದ ವಿರುದ್ಧ ಹೋರಾಡುವ ಪ್ರತಿಕಾಯಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇನ್ಸುಲಿನ್ ಪರಿಣಾಮವನ್ನು ದುರ್ಬಲಗೊಳಿಸುತ್ತದೆಯೇ ಎಂಬ ಕುರಿತು ಅಧ್ಯಯನ ಮಾಡಲು ಜರ್ಮನ್ಸ ಸೆಂಟರ್ ಫಾರ್ ಡಯಾಬಿಟಿಸ್ ರಿಸರ್ಚ್ ಮತ್ತು ಐಕ್ಯೂವಿಐಎ ಸಂಶೋಧಕರು ರೆಟ್ರೋಸ್ಪೆಕ್ಟಿವ್ ಕೊಹಾರ್ಟ್ ಎಂಬ ಅಧ್ಯಯನವನ್ನು ನಡೆಸಿದರು.
ಜರ್ಮನಿಯಾದ್ಯಂತ 2020ರ ಮಾರ್ಚ್ನಿಂದ 2021 ಜನವರಿವರೆಗೂ 8.8 ಮಿಲಿಯನ್ ರೋಗಿಗಳ ಮೇಲೆ 1171 ವೈದ್ಯರು ಅಧ್ಯಯನ ನಡೆಸಿದರು. SARS-CoV-2 ಸೋಂಕು ತಗುಲಿದ ಬಳಿಕ ಮನುಷ್ಯನಿಗೆ ಮಧುಮೇಹ ರೋಗ ಬಾಧಿಸುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸುವುದೇ ಗುರಿಯಾಗಿತ್ತು ಎಂದು ಸಾಂಕ್ರಾಮಿಕ ರೋಗಶಾಸ್ತ್ರ ಸಂಶೋಧನಾ ಗುಂಪಿನ ಮುಖ್ಯಸ್ಥ ವೋಲ್ಫ್‌ಗ್ಯಾಂಗ್ ರಾಥ್‌ಮನ್ ತಿಳಿಸಿದ್ದಾರೆ. ಸಂಶೋಧಕರು ತೀವ್ರ ಉಸಿರಾಟ ತೊಂದರೆಯಿಂದ (AURI) ಬಳಲುವ ರೋಗಿಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಅಧ್ಯಯನದ ಅವಧಿಯಲ್ಲಿ 35,865 ಜನರಲ್ಲಿ ಕೊರೊನಾ ಬಾಧಿಸುತ್ತಿರುವುದನ್ನು ಗುರುತಿಸಲಾಯಿತು. ಉಸಿರಾಟ ತೊಂದರೆಯಿಂದ ಬಳಲುವ ರೋಗಿಗಳಿಗಿಂತ ಹೆಚ್ಚಾಗಿ ಕೊರೊನಾ ಪೀಡಿತರೇ ಟೈಪ್ 2 ಮಧುಮೇಹ ರೋಗಕ್ಕೆ ತುತ್ತಾಗಿದ್ದು ಅಧ್ಯಯನದಲ್ಲಿ ಕಂಡು ಬಂದಿದೆ.
ಸೌಮ್ಯವಾದ ಕೊರೊನಾ ಸೋಂಕಿಗೆ ಒಳಗಾದವರು ಟೈಪ್ 2 ಮಧುಮೇಹದಿಂದ ತೀವ್ರ ಸಮಸ್ಯೆಗೆ ಒಳಗಾಗದಿದ್ದರೂ, ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಆಯಾಸ, ಆಗಾಗ್ಗೆ ಮೂತ್ರ ವಿಸರ್ಜನೆಯಂತಹ ಸಮಸ್ಯೆ ಉಂಟಾದರೆ ಈ ವೇಳೆ ಎಚ್ಚರಿಕೆ ವಹಿಸುವುದು ಮುಖ್ಯ. ಅಲ್ಲದೇ ಶೀಘ್ರವೇ ಚಿಕಿತ್ಸೆ ಪಡೆಯಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
ಓದಿ: ದೇಶದಲ್ಲಿ ಉಲ್ಭಣಗೊಳ್ಳುತ್ತಿರುವ ಸಾಂಕ್ರಾಮಿಕವಲ್ಲದ ರೋಗಗಳಿಗೆ ವಿಟಮಿನ್-ಸಿ ರಾಮಬಾಣ..