ಹೈದರಾಬಾದ್: ದೈಹಿಕವಾಗಿ ಸದೃಢವೆನಿಸಿದರೂ ಕೆಲವೊಮ್ಮೆ ಬಾಯಿಯ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ಇಲ್ಲವೇ ಇತರೆ ಕಾರಣಗಳಿಂದ ಹಲ್ಲು ಮತ್ತು ವಸಡಿನ ಸಮಸ್ಯೆ ಉಂಟಾಗುತ್ತದೆ. ಆರೋಗ್ಯದ ಜೊತೆಗೆ ಚೆಂದ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ದಿನನಿತ್ಯದ ಚಟುವಟಿಕೆಗಳಲ್ಲಿ ಕೆಲವು ಅಭ್ಯಾಸಗಳನ್ನು ಸಹ ರೂಢಿಸಿಕೊಂಡಿರುತ್ತಾರೆ.
ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಾಗ ಮೌಖಿಕ ಸೌಂದರ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ಕೆಲವರು ತಮಗೆ ಅರಿವಿಲ್ಲದೆ ಬಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಭ್ಯಾಸಗಳನ್ನು ಅಳವಡಿಸಿಕೊಂಡಿರುತ್ತಾರೆ. ಇದು ಹಲ್ಲು ಮತ್ತು ವಸಡುಗಳಲ್ಲಿ ರೋಗಗಳಿಗೆ ಕಾರಣವಾಗಬಹುದು.
ಬಾಯಿ ಸ್ವಚ್ಛತೆ ಕೊರತೆ ಹಲ್ಲಿನ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದ್ದರೂ, ಇತರ ಕೆಟ್ಟ ಅಭ್ಯಾಸಗಳು ಮತ್ತು ಅಸಡ್ಡೆ ಕೂಡ ಕಾರಣವೆಂದು ಪರಿಗಣಿಸಬಹುದು ಎಂದು ಪುಣೆ ಮೂಲದ ಆರ್ಥೊಡಾಂಟಿಸ್ಟ್ ಡಾ. ವಿಶಾಖ ನಾಯಕ್ ಹೇಳುತ್ತಾರೆ. ಅವರು ಕೆಲವು ಅಭ್ಯಾಸಗಳನ್ನು ಸೂಚಿಸಿದ್ದು, ಇವು ನಿಮ್ಮಲ್ಲೂ ಇದ್ದರೆ ತಕ್ಷಣವೇ ಬದಲಾಯಿಸಿಕೂಂಡರೆ ಹಲ್ಲುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ.
- ಹಲ್ಲುಗಳನ್ನು ಸ್ವಚ್ಛಗೊಳಿಸಲು ಟೂತ್‌ಪಿಕ್ ಬಳಸುವುದು
ಅನೇಕ ಮಂದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ಅಥವಾ ಹಲ್ಲುಗಳ ನಡುವೆ ಸಿಲುಕಿರುವ ಆಹಾರವನ್ನು ತೆಗೆದುಹಾಕಲು ಟೂತ್‌ಪಿಕ್ ಅಥವಾ ಇತರ ಚೂಪಾದ ಕಡ್ಡಿಯಂತಹ ವಸ್ತುಗಳನ್ನು ಬಳಸುತ್ತಾರೆ. ಇದು ಸರಿಯಲ್ಲ ಎಂದು ಡಾ.ವಿಶಾಖ ಹೇಳುತ್ತಾರೆ.
ಈ ಅಭ್ಯಾಸವು ಹಲ್ಲು ಮತ್ತು ಒಸಡುಗಳಲ್ಲಿ ರೋಗಗಳು ಹಾಗೂ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಟೂತ್‌ಪಿಕ್ ಪದೇ ಪದೇ ಬಳಸುವುದರಿಂದ ಹಲ್ಲುಗಳ ಬೇರುಗಳನ್ನು ದುರ್ಬಲಗೊಳಿಸಬಹುದು. ಇದಲ್ಲದೆ, ಟೂತ್‌ಪಿಕ್ ಬಳಸುವಾಗ ಅದು ಹಲ್ಲುಗಳ ನಡುವೆ ಸಿಲುಕಿಕೊಳ್ಳುವುದರ ಜೊತೆಗೆ ವಸಡುಗಳನ್ನು ಗಾಯಗೊಳಿಸಿ ರಕ್ತಸ್ರಾವಕ್ಕೆ ಕಾರಣವಾಗಬಹುದು. ಟೂತ್‌ಪಿಕ್‌ಗಳ ದೀರ್ಘಕಾಲದ ಬಳಕೆಯು ಹಲ್ಲುಗಳ ನಡುವಿನ ಅಂತರವನ್ನು ಹೆಚ್ಚಿಸುತ್ತದೆ. ಹಲ್ಲುಗಳ ದಂತಕವಚ ಪದರವನ್ನು ಸಹ ಹಾನಿಗೊಳಿಸುತ್ತದೆ ಎಂದು ವಿವರಿಸಿದ್ದಾರೆ.
- ಬಾಯಿ ತೆರೆದು ಮಲಗುವುದು
ಬಾಯಿ ತೆರೆದು ಮಲಗುವ ಅಭ್ಯಾಸವು ಬಾಯಿಯ ಸೋಂಕುಗಳಿಗೆ ಆಹ್ವಾನವಾಗಿದೆ. ಇದರಿಂದ ಬಾಯಿ ಒಣಗುವ ಸಮಸ್ಯೆ ಉಂಟಾಗುತ್ತದೆ ಎಂದು ಡಾ.ವಿಶಾಖ ಮಾಹಿತಿ ನೀಡುತ್ತಾರೆ. ತೇವಾಂಶವನ್ನು ಕಾಪಾಡುವ ಬಾಯಿಯಲ್ಲಿರುವ ಲಾಲಾರಸವು ಬ್ಯಾಕ್ಟೀರಿಯಾದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ, ಬಾಯಿಯಲ್ಲಿ ತೇವಾಂಶದ ಕೊರತೆಯು ಹಲ್ಲಿನ ಸೋಂಕುಗಳು ಮತ್ತು ದುರ್ವಾಸನೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ, ಬಾಯಿ ತೆರೆದು ಮಲಗುವುದು ಗಂಟಲು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
- ಸರಿಯಾಗಿ ಹಲ್ಲು ಉಜ್ಜದಿರುವುದು
ಹಲ್ಲುಗಳನ್ನು ಸರಿಯಾಗಿ ಉಜ್ಜದೆ ಇರುವುದು ಕಾರ್ಬೋಹೈಡ್ರೇಟ್ ಬ್ಯಾಕ್ಟೀರಿಯಾದ ಶೇಖರಣೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಇದು ಹಲ್ಲುಗಳಲ್ಲಿ ಸ್ಟ್ರೆಪ್ಟೋಕೊಕಸ್ ಮ್ಯುಟಾನ್ಸ್ ಆಮ್ಲವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದು ಹಲ್ಲಿನ ದಂತಕವಚಕ್ಕೆ ಹಾನಿಯಾಗುತ್ತದೆ. ಇದರ ಹೊರತಾಗಿ, ಹಲ್ಲುಗಳನ್ನು ಸರಿಯಾದ ಕ್ರಮದಲ್ಲಿ ಉಜ್ಜದಿದ್ದರೆ ಪ್ಲೇಕ್ ರಚನೆಗೆ ಕಾರಣವಾಗುತ್ತದೆ. ಇದು ಕುಳಿಗಳಿಗೆ ಕಾರಣವಾಗಬಹುದು. ಇದರಿಂದ ಒಸಡುಗಳು ಮತ್ತು ಹಲ್ಲುಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಇದೆಲ್ಲವೂ ಜಿಂಗೈವಿಟಿಸ್ ಹಾಗೂ ಪಿರಿಯಾಂಟೈಟಿಸ್‌ಗೆ ಕಾರಣವಾಗಬಹುದು.
- ದೀರ್ಘ ಕಾಲದವರೆಗೆ ಒಂದೇ ಬ್ರಷ್ ಬಳಸುವುದು
ಬ್ರಷ್ ಹಾಳಾಗಿದ್ದರೂ ಒಂದೇ ಟೂತ್ ಬ್ರಶ್ ಅನ್ನು ತಿಂಗಳುಗಟ್ಟಲೇ ಬಳಸುವ ಅಭ್ಯಾಸ ಹೆಚ್ಚಿನವರಿಗೆ ಇರುತ್ತದೆ. ಹಾಳಾದ ಬ್ರಷ್ ಬಳಸುವುದರಿಂದ ನಿಮ್ಮ ಹಲ್ಲು ಮತ್ತು ವಸಡುಗಳಿಗೆ ಹಾನಿಯಾಗಬಹುದು. ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು ಎಂದು ಡಾ.ವಿಶಾಖ ಎಚ್ಚರಿಸಿದ್ದಾರೆ. ಸಾಮಾನ್ಯವಾಗಿ ಜನರು ಪ್ರತಿ 3 ತಿಂಗಳ ನಂತರ ತಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಬೇಕು. ಇದಲ್ಲದೆ ಒಬ್ಬ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರೆ, ಚೇತರಿಸಿಕೊಂಡ ತಕ್ಷಣ ಬ್ರಷ್ ಅನ್ನು ಬದಲಾಯಿಸಬೇಕು. ಅನಾರೋಗ್ಯದ ವ್ಯಕ್ತಿಯ ಹಲ್ಲುಜ್ಜುವ ಬ್ರಷ್ ಅನ್ನು ಇತರರಿಂದ ದೂರವಿಡಬೇಕು.
ಮೇಲೆ ತಿಳಿಸಿದ ಈ ಎಲ್ಲಾ ಅಭ್ಯಾಸಗಳ ಹೊರತಾಗಿ ಕೆಫೀನ್, ಸಿಹಿ ತಿಂಡಿಗಳು, ಧೂಮಪಾನ, ತಂಬಾಕು ಜಗಿಯುವುದು ಮುಂತಾದ ಅನೇಕ ಆಹಾರ ಮತ್ತು ಜೀವನಶೈಲಿ ಅಭ್ಯಾಸಗಳು ಬಾಯಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಪರಿಸ್ಥಿತಿ ಕೈಮೀರುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ. ಅಲ್ಲದೆ, ನೀವು ವಸಡುಗಳು ಮತ್ತು ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ತಕ್ಷಣವೇ ದಂತವೈದ್ಯರನ್ನು ಸಂಪರ್ಕಿಸಿ. ಯಾಕೆಂದರೆ ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ: ಕೂದಲು ಉದುರುವಿಕೆ ತಡೆ, ಲೈಂಗಿಕ ಶಕ್ತಿ ಹೆಚ್ಚಳ ಸೇರಿ ಮೀನಿನ ಎಣ್ಣೆಯಿಂದ ಹಲವು ಪ್ರಯೋಜನ