ಖುಷಿಯ ಕ್ಷಣಗಳಲ್ಲಿ, ಸಂಭ್ರಮದ ಸಮಯದಲ್ಲಿ ಚಾಕೊಲೇಟ್ ಸವಿಯುತ್ತ ಸಂಭ್ರಮಾಚರಣೆ ಮಾಡಲು ನೀವು ಬಯಸುತ್ತೀರಾ? ಅಥವಾ ಇನ್ನಾವಾಗಲೋ ಮೂಡ್ ಹಾಳಾದಾಗ ಮಾತ್ರ ಚಾಕೊಲೇಟ್ ತಿನ್ನುತ್ತೀರಾ? ಆದರೆ ನೀವು ಚಾಕೊಲೇಟ್ ಪ್ರಿಯರಾಗಿದ್ದು, ಡಯಾಬಿಟೀಸ್ ಪಾಸಿಟಿವ್ ಆಗಿದ್ರೆ ಏನು ಮಾಡುವುದು ಎಂಬ ಚಿಂತೆ ಬೇಡ. ಸಣ್ಣ ಪ್ರಮಾಣದಲ್ಲಿ ಡಾರ್ಕ್ ಚಾಕೊಲೇಟ್ ಸೇವನೆಯಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಸೆನ್ಸಿಟಿವಿಟಿ ಸುಧಾರಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸಿರುವುದು ಮಧುಮೇಹಿಗಳಿಗೆ ಒಂದಿಷ್ಟು ಸಂತಸ ತರುವ ವಿಷಯವಾಗಿದೆ.
ಪೌಷ್ಠಿಕಾಂಶ ಮತ್ತು ಮಧುಮೇಹದ ತಜ್ಞರ ಇತ್ತೀಚಿನ ಆಹಾರ ಶಿಫಾರಸುಗಳ ಪ್ರಕಾರ ಮಧುಮೇಹಿಗಳು ರುಚಿಕರವಾದ ತಿಂಡಿ ತಿನಿಸುಗಳನ್ನು ಸೇವಿಸಬೇಕೆಂದು ತಿಳಿಸಲಾಗಿದೆ. ಆದರೆ ನಿಮ್ಮ ಆಹಾರದಲ್ಲಿ ಚಾಕೊಲೇಟ್ ಸೇರಿಸಲು ಪ್ರಾರಂಭಿಸುವ ಮೊದಲು ನೀವು ಒಂದಿಷ್ಟು ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯ ಎನ್ನುತ್ತಾರೆ ಡಾ. ಇರ್ಫಾನ್ ಶೇಖ್. ಇರ್ಫಾನ್ ಶೇಖ್ ಅಬಾಟ್ ನ್ಯೂಟ್ರಿಷನ್ ಬ್ಯುಸಿನೆಸ್ ಸಂಸ್ಥೆಯ ವೈದ್ಯಕೀಯ ಮತ್ತು ವೈಜ್ಞಾನಿಕ ವ್ಯವಹಾರ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಡಾರ್ಕ್ ಚಾಕೊಲೇಟ್ಗಳು ಹಾನಿಕಾರಕ ಅಣುಗಳಿಂದ ದೇಹಕ್ಕಾಗಬಹುದಾದ ಹಾನಿಯಿಂದ ರಕ್ಷಿಸುವ, ಆ್ಯಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿರುವ, ನೈಸರ್ಗಿಕವಾಗಿ ಉತ್ಪತ್ತಿಯಾಗುವ ಪಾಲಿಫಿನಾಲ್ಸ್ ಎಂಬ ಸಂಯುಕ್ತಗಗಳನ್ನು ಒಳಗೊಂಡಿರುತ್ತವೆ. ಡಾರ್ಕ್ ಚಾಕೊಲೇಟ್ನಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವ ಅಥವಾ ದೇಹದಲ್ಲಿ ಇನ್ಸುಲಿನ್ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಪಾಲಿಫಿನಾಲ್‌ಗಳಿರುತ್ತವೆ. ಒಟ್ಟಾರೆಯಾಗಿ ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಸೂಕ್ತವಾಗಿರುವಂತೆ ನಿರ್ವಹಣೆ ಮಾಡಬಹುದು. ಈ ಹೆಚ್ಚಿದ ಇನ್ಸುಲಿನ್ ಕಾರ್ಯಕ್ಷಮತೆಯಿಂದ ಮಧುಮೇಹ ಬರುವುದನ್ನು ವಿಳಂಬಗೊಳಿಸಬಹುದು ಅಥವಾ ಮಧುಮೇಹ ಬರದಂತೆ ತಡೆಯಬಹುದು.
ಕೋಕೋ ಮತ್ತು ಡಾರ್ಕ್ ಚಾಕೊಲೇಟ್ಗಳು ಪಾಲಿಫಿನಾಲ್‌ಗಳು, ಫ್ಲೇವೊನಾಲ್‌ಗಳು ಮತ್ತು ಕ್ಯಾಟೆಚಿನ್‌ಗಳಂಥ ಆ್ಯಂಟಿ ಆಕ್ಸಿಡೆಂಟ್ಗಳ ಸಮೃದ್ಧ ಮೂಲವಾಗಿವೆ. ಆ್ಯಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿ ಫ್ರೀ ರ್ಯಾಡಿಕಲ್ಸ್ಗಳಿಂದ ಜೀವಕೋಶಕ್ಕೆ ಉಂಟಾಗಬಹುದಾದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತವೆ. ಇವು ಇತರ ಅನೇಕ ಆಹಾರಗಳಿಗಿಂತ ಹೆಚ್ಚು ಆ್ಯಂಟಿ ಆಕ್ಸಿಡೆಂಟ್ಗಳನ್ನು ಹೊಂದಿದೆ ಎಂದು ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಕೋಕೋ ಮತ್ತು ಡಾರ್ಕ್ ಚಾಕೊಲೇಟ್ಗಳನ್ನು ಇದೇ ಕಾರಣಕ್ಕಾಗಿ ನೀವು ಸೇವಿಸಬಹುದು.
ಮಿಲ್ಕ್ ಚಾಕೊಲೇಟ್ ಮತ್ತು ವೈಟ್ ಚಾಕೊಲೇಟ್ಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುವುದರಿಂದ ಇವು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಮತ್ತೊಂದೆಡೆ ಡಾರ್ಕ್ ಚಾಕೊಲೇಟ್ ಕೋಕೋದಿಂದ ಸಮೃದ್ಧವಾಗಿರುವುದರಿಂದ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಅತ್ಯುತ್ತಮ ಡಾರ್ಕ್ ಚಾಕೊಲೇಟ್ ಆರಿಸುವುದು ಹೇಗೆ?
- ಪಾಲಿಫಿನಾಲ್ ಅಂಶ ಮತ್ತು ಕೋಕೋ ಹೆಚ್ಚಾಗಿರುವ ಡಾರ್ಕ್ ಚಾಕೊಲೇಟ್ ಆಯ್ಕೆ ಮಾಡಿಕೊಳ್ಳಿ.
- ಚಾಕೊಲೇಟ್ನಲ್ಲಿ ಅಡಕವಾಗಿರುವ ಪೌಷ್ಟಿಕಾಂಶದ ಮಾಹಿತಿಯನ್ನು ಓದಿ ಅರಿತುಕೊಳ್ಳಿ.
- ಸಕ್ಕರೆಯಷ್ಟೇ ಪ್ರಮಾಣದ ಫೈಬರ್ ಇರುವ ಡಾರ್ಕ್ ಚಾಕೊಲೇಟ್ ಆರಿಸಿಕೊಳ್ಳಿ.
- ಡಾರ್ಕ್ ಚಾಕೊಲೇಟ್ ಅನ್ನು ಅಲ್ಕಲಿಯೊಂದಿಗೆ ಸಂಸ್ಕರಿಸಲಾಗಿದೆಯಾ ಎಂಬುದನ್ನು ಪರಿಶೀಲಿಸಿ. ಇದು ಚಾಕೊಲೇಟ್ನಲ್ಲಿರುವ ಕೋಕೋ ಪ್ರಮಾಣವನ್ನು ಕಡಿಮೆ ಮಾಡುತ್ತದಾದರೂ ಆರೋಗ್ಯಕಾರಕ ಅಂಶಗಳನ್ನೂ ಕಡಿಮೆ ಮಾಡುತ್ತದೆ.
- ಸಂಸ್ಕರಣೆ ಮಾಡದ ಚಾಕೊಲೇಟ್ ಹುಡುಕಿ.
- ತುಂಬಾ ಕಡಿಮೆ ಪ್ರಮಾಣದಲ್ಲಿ ಚಾಕೊಲೇಟ್ ಸೇವಿಸಿ. ಜಾಸ್ತಿ ತಿಂದಲ್ಲಿ ಸಕ್ಕರೆ ಮಟ್ಟ ನಿಯಂತ್ರಣವಾಗುವ ಬದಲು ವಿಪರೀತ ಏರಿಳಿಕೆಯಾಗಬಹುದು.
ಈ ಅಂಶಗಳನ್ನು ಪಾಲಿಸಿ.. ನಿಮಗೆ ಡಯಾಬಿಟೀಸ್ ಇದ್ದಲ್ಲಿ ಸಕ್ಕರೆ ಅಂಶವಿರುವ ಆಹಾರ ಪದಾರ್ಥಗಳನ್ನು ದೂರವಿಡುವುದು ಉತ್ತಮ. ಆದಾಗ್ಯೂ ನಿಮ್ಮ ಗ್ಲುಕೋಸ್ ಮಟ್ಟದ ಮೇಲೆ ನಿಗಾ ವಹಿಸಿ ಯಾವಾಗಲಾದರೊಮ್ಮೆ ಒಂದೆರಡು ಬೈಟ್ ಡಾರ್ಕ್ ಚಾಕೊಲೇಟ್ ಸೇವಿಸಿದರೆ ಕೆಲ ಆರೋಗ್ಯಕರ ಲಾಭ ಪಡೆಯಬಹುದು.