ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕಳಪೆಯಾಗಿದೆ. ಮಾಲಿನ್ಯದ ವಾಯು ಸೇವನೆಯಿಂದ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದರು.
ಎನ್ಸಿಆರ್ನಲ್ಲಿರುವ ದೀರ್ಘ ವಾಯುಮಾಲಿನ್ಯದ ಬಿಕ್ಕಟ್ಟು ಗರ್ಭಿಣಿಯರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು ಭ್ರೂಣದ ಬೆಳವಣಿಗೆಯ ಮೇಲೆ ಸಂಭಾವ್ಯ ಪರಿಣಾಮಗಳನ್ನು ಬೀರುತ್ತದೆ. ಇದರಿಂದ ಕಡಿಮೆ ಜನನ ತೂಕ ಮತ್ತು ಅವಧಿ ಪೂರ್ವ ಸಮಸ್ಯೆಗಳು ಉಂಟಾಗುತ್ತದೆ ಎಂದು ಗುರುಗ್ರಾಮದ ಮದರ್ವುಡ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಶ್ವೇತ ವಾಜಿರ್ ಮಾಹಿತಿ ನೀಡಿದರು.
ನಿರಂತರವಾಗಿ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಒತ್ತಡ ಮತ್ತು ಆತಂಕದ ಮಟ್ಟ ಹೆಚ್ಚುತ್ತದೆ. ಇದು ಗರ್ಭಿಣಿಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿರೋಧಕ ಶಕ್ತಿ ಕೂಡ ಕಡಿಮೆಯಾಗಿ ಗರ್ಭಿಣಿಯರಲ್ಲಿ ಸೋಂಕು ತಗುಲುವ ಅಪಾಯ ಹೆಚ್ಚಿರುತ್ತದೆ ಎಂದರು.
ಗುರುವಾರ ಪ್ರಕಟವಾದ ಜರ್ನಲ್ ಎನ್ವರಿನಾಮೆಂಟಲ್ ಹೆಲ್ತ್ ಪ್ರಾಸ್ಪೆಕ್ಟಿವ್ಸ್ ಲೇಖನದ ಅನುಸಾರ, ಕೆಲವು ಮಾಲಿನ್ಯಕಾರಕಗಳು ಪ್ರಸವಪೂರ್ವ ಹಾರ್ಮೋನುಗಳಾದ ಅನೋಜೆನಿಟಲ್ ನಕಾರಾತ್ಮಕತೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.
ಹಾರ್ಮೋನುಗಳ ಮೇಲೆ ಪರಿಣಾಮ: ಅಮೆರಿಕದ ರಟ್ಜರ್ಸ್ ಯುನಿವರ್ಸಿಟಿ ಸಂಶೋಧಕರು ತಿಳಿಸುವಂತೆ, ವಾಯು ಮಾಲಿನ್ಯಗಳು ಪ್ರಸವಪೂರ್ವ ಮತ್ತು ಆರಂಭಿಕ ಶಿಶು ಬೆಳವಣಿಗೆಯ ನಿರ್ಣಾಯಕ ಸಮಯದಲ್ಲಿ ಸಾಮಾನ್ಯ ಹಾರ್ಮೋನ್ಗಳಿಗೆ ಅಡ್ಡಿಪಡಿಸುತ್ತದೆ. ಈ ಅಡ್ಡಿಯು ದೀರ್ಘಕಾಲದ ಸಂತೋನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಹೊಂದಿದೆ. ವಾಯುಮಾಲಿನ್ಯ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ವಾ
ವಾಯು ಗುಣಮಟ್ಟ ಗಮನಾರ್ಹವಾಗಿ ಉಸಿರಾಟದ ಅಪಾಯ ಹೆಚ್ಚಿಸಿ ಅಸ್ತಮಾ ಮತ್ತು ಬ್ರಾಂಕೈಟಿಸ್ ಸಮಸ್ಯೆಗೆ ಕಾರಣವಾಗುತ್ತದೆ. ಮಾಲಿನ್ಯದ ಕಣಗಳು ಗರ್ಭಿಣಿಯರನ್ನು ದುರ್ಬಲವಾಗಿಸಿ, ಹಾನಿಕಾರಕ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಎರಡು ಜೀವಕ್ಕೆ ಉಸಿರಾಡುತ್ತಿರುವುದು ಗಮನಾರ್ಹ.
ಗರ್ಭದಲ್ಲಿರುವ ಮಗುವನ್ನು ಕಾಪಾಡುತ್ತಿರುವ ಪ್ಲೆಸೆಂಟಾ ಕೂಡ ವಾಯುಮಾಲಿನ್ಯದ ವಿಷದ ಪರಿಣಾಮಕ್ಕೆ ಒಳಗಾಗುತ್ತದೆ. ಗರ್ಭಿಣಿಯರು ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಕಡಿಮೆ ಶಿಶು ಜನನ, ಅವಧಿ ಪೂರ್ವ ಜನನ, ಮಕ್ಕಳಲ್ಲಿ ಹೃದಯ ಸಮಸ್ಯೆ, ಅಸ್ತಮಾ ಮತ್ತು ಆಟಿಸಂನಂತಹ ಸಮಸ್ಯೆಯೊಂದಿಗೆ ಸಂಬಂಧ ಹೊಂದಿದೆ ಎಂದು ಈಗಾಗಲೇ ಅನೇಕ ಅಧ್ಯಯನಗಳು ತಿಳಿಸಿವೆ ಎಂದು ದೆಹಲಿಯ ಸಿ.ಕೆ.ಬಿರ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಪ್ರಿಯಾಂಕಾ ಸುಹಾಗ್ ತಿಳಿಸಿದ್ದಾರೆ.
ಗರ್ಭಿಣಿಯರು ಮಾಲಿನ್ಯ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು, ಆರೋಗ್ಯಯುತ ಜೀವನ ಶೈಲಿ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡುವುದು ಅವಶ್ಯಕ. ಜಾಗೃತಿ, ಮುನ್ನೆಚ್ಚರಿಕೆ ಮತ್ತು ಸಮಯೋಚಿತ ಮಧ್ಯಸ್ಥಿಕೆಗಳು ಸಂತಾನೋತ್ಪತ್ತಿ ಯೋಗಕ್ಷೇಮ ಕಾಪಾಡಬಹುದು ಎಂದು ಲಜ್ಪತ್ ನಗರ್ನ ವಿರ್ಲಾಫರ್ಟಲಿಟಿ ಮತ್ತು ಐವಿಎಫ್ನ ವೈದ್ಯೆ ಡಾ.ಲಾವಿ ಬಿರ್ಲಾ ಸಲಹೆ ನೀಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ದೀಪಾವಳಿ ಬಳಿಕ ಮತ್ತಷ್ಟು ಮಬ್ಬಾಯ್ತು ದೆಹಲಿ; ವಾಯು ಗುಣಮಟ್ಟ ತೀವ್ರ ಕಳಪೆ