ಈ ಹಿಂದೆ ಜಗತ್ತನ್ನು ಮಾರಕ ಪ್ಲೇಗ್, ದಡಾರ ನಂತರ ಸಾಂಕ್ರಾಮಿಕ ರೋಗಗಳು ಕಾಡಿದ್ದವು. ಇದರಿಂದ ಹೊರಬಂದ ಹಲವು ದಶಕಗಳ ಬಳಿಕ ಇದೀಗ ನಾವು ಹೊಸ ವೈರಸ್ ರೋಗಗಳನ್ನು ಎದುರಿಸುತ್ತಿದ್ದೇವೆ. ಅದರಲ್ಲೂ ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ಬಗ್ಗೆ ಎಚ್ಚರವಹಿಸುವುದು ಅವಶ್ಯವಾಗಿದೆ. ಕೋವಿಡ್ ಬಳಿಕ ಬಂದ ಉಪತಳಿಗಳಾದ ಓಮ್ರಿಕಾನ್, ಸಾರ್ಸ್ ಕೋವ್-2, ಇದೀಗ ಎಚ್3ಎನ್2 ಜನರಲ್ಲಿ ಆತಂಕ ಮೂಡಿಸಿದೆ. ವರ್ಷದಿಂದ ವರ್ಷಕ್ಕೆ ಈ ವೈರಸ್ಗಳು ರೂಪಾಂತರಗೊಳ್ಳುತ್ತಿವೆ. ಮಾನವನ ಭವಿಷ್ಯಕ್ಕೆ ಬೆದರಿಕೆ ಒಡ್ಡುವ ಸಾಧ್ಯತೆಗಳು ಹೆಚ್ಚಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಈಗಾಗಲೇ ಕೋವಿಡ್ ಸೋಂಕನ್ನು ಎದುರಿಸಿರುವ ಜಗತ್ತು ಭವಿಷ್ಯದಲ್ಲಿ ಮತ್ತಷ್ಟು ಬೆದರಿಕೆಯ ವೈರಸ್ಗೆ ತೆರೆದುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಮಾನವನ ಆರೋಗ್ಯದ ದೃಷ್ಟಿಯಿಂದ ಈ ವೈರಸ್ಗಳ ಪತ್ತೆ ಮಾಡಲು ಒಂದು ಚೌಕಟ್ಟನ್ನು ತುರ್ತಾಗಿ ರೂಪಿಸುವ ಅವಶ್ಯಕತೆ ಇದೆ ಎಂದು ಓಹಿಯೋ ಸ್ಟೇಟ್ ಮತ್ತು ಕೊಲರಾಡೊ ವಿಶ್ವವಿದ್ಯಾಲಯದ ಇಬ್ಬರು ವೈರಾಲಜಿಸ್ಟ್ ಸಲಹೆ ನೀಡಿದ್ದಾರೆ. ಈ ಸಂಬಂಧ ಜರ್ನಲ್ನಲ್ಲಿ ಬರೆದಿರುವ ಅವರು, ಪ್ರಾಣಿಗಳ ವೈರಸ್ಗಳಿಂದ ಮಾನವ ಆಪತ್ತು ಎದುರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇದಕ್ಕಾಗಿ ನಾಲ್ಕು ಭಾಗದ ಸಂಶೋಧನಾ ಚೌಕಟ್ಟನ್ನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.
ನಾವು ನಿರಂತರವಾಗಿ ಪ್ರಾಣಿಗಳ ವೈರಸ್ಗೆ ತೆರೆದುಕೊಳ್ಳುತ್ತೇವೆ. ಇದೇ ರೀತಿ ಮುಂದುವರೆದರೆ ಈ ಪರಿಸ್ಥಿತಿ ಎಂದಿಗೂ ಬದಲಾಗುವುದಿಲ್ಲ ಎಂದು ವಾರೆನ್ ತಿಳಿಸಿದ್ದಾರೆ. ಪ್ರಕೃತಿ ವೈರಸ್ಗಳಿಗೆ ಬದಲಾಗಿ ಪ್ರಾಣಿಗಳ ವೈರಸ್ಗಳನ್ನು ಪ್ರಾಯೋಗಿಕ ಅಧ್ಯಯನ ನಡೆಸುವುದು ಹೆಚ್ಚು ಮೌಲ್ಯಯುತವಾಗಿದೆ ಎಂದು ಸಲಹೆ ನೀಡಿದ್ದಾರೆ. ಪ್ರಾಣಿಗಳ ವೈರಸ್ ಮಾನವನಿಗೆ ಸೋಂಕು ತರುವಲ್ಲಿ ಎಷ್ಟು ಪರಿಣಾಮಕಾರಿ ಎಂಬುದರ ಸಂಬಂಧ ಮತ್ತೊಬ್ಬ ವೈರಾಲಾಜಿಸ್ಟ್ ಪ್ರೊ.ಸಾರಾ ಸಾವರ್ ಸರಣಿ ಪ್ರಯೋಗಗಳನ್ನು ನಡೆಸಿದ್ದಾರೆ. ಪ್ರಾಣಿಗಳ ವೈರಸ್ ಆಯ್ಕೆ ಮಾಡುವುದು ಮತ್ತು ಆದ್ಯತೆ ನೀಡುವುದು ಕಷ್ಟ. ಆದರೆ, ಪದೇ ಪದೇ ಬಾಧಿಸುವ ವೈರಸ್ಗಳತ್ತ ಗಮನ ನೀಡಬಹುದು ಎಂದು ವಾರೆನ್ ಮತ್ತು ಸಾವರ್ ತಿಳಿಸುತ್ತಾರೆ.
ಇದರಲ್ಲಿ ಕೊರೊನಾ ವೈರಸ್, ಇನ್ಫ್ಲುಯೆಂಜಾ ಮತ್ತು ಫಿಲೊವೈರಸ್‌ಗಳು ಪ್ರಮುಖವಾಗಿದೆ. 2018ರಲ್ಲಿ ಬೊಂಬ್ಲಿ ವೈರಸ್-ಎಬೊಲಾ ವೈರಸ್ಗಳು ಬಾವುಲಿಗಳಿಂದ ಪತ್ತೆಯಾದವು. ಆದರೆ ಇವು ಮಾನವನ ಮೇಲೆ ಪರಿಣಾಮಕಾರಿಯಾಗಿ ಸೋಂಕು ತಗಲುವ ಸಾಮರ್ಥ್ಯವನ್ನು ಹೊಂದಿದ್ಯಾ ಎಂಬುದರ ಬಗ್ಗೆ ಇನ್ನೂ ತಿಳಿದಿಲ್ಲ. ಇದಾದ ಬಳಿಕ ದಕ್ಷಿಣ ಆಫ್ರಿಕಾದ ಮಂಗಗಳಿಂದ ಹೆಮರಾಜಿಕ್ ಜ್ವರ ವೈರಸ್ ಕಂಡು ಬಂದಿರುವ ಕುರಿತು ಲೇಖಕರು ಉಲ್ಲೇಖಿಸಿದ್ದಾರೆ. ಅಲ್ಲದೇ ಇದು ಮಾನವನ ಜೀವಕೋಶ ಮತ್ತು ಪ್ರತಿರಕ್ಷಣಾ ಕೋಶಗಳ ಮೇಲೆ ದಾಳಿ ಮಾಡುತ್ತವೆ ಎಂದು ಹೇಳಿದ್ದಾರೆ.
2020ರಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಗತ್ತಿನಾದ್ಯಂತ ಲಾಕ್ಡೌನ್ ಆಯಿತು. ಕೋವಿಡ್ ಬಳಿಕ ಕಂಡು ಬಂದ ಸಾರ್ಸ್-ಕೋವ್-2 ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗಿತ್ತು. ದಶಕಗಳ ಮುಂಚಿನಿಂದಲೂ ವಿಜ್ಞಾನಿಗಳು ಕೊರೊನಾ ವೈರಸ್ ಬಗ್ಗೆ ತಿಳಿದು, ಅಧ್ಯಯನ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಲಾಕ್ಡೌನ್ ಸಮಯದಲ್ಲಿ ವಿಜ್ಞಾನಿಗಳ ನಿರಂತರ ಪರಿಶ್ರಮದಿಂದ ವರ್ಷದೊಳಗೆ ಲಸಿಕೆಗಳು ಲಭ್ಯವಾದವು. ಹಾಗಾಗಿ ಪ್ರಾಣಿಗಳ ವೈರಸ್ ಕುರಿತು ಅಧ್ಯಯನ ಆರಂಭಿಸಿದರೆ, ಅದರ ಜೀವಶಾಸ್ತ್ರ ಸೇರಿದಂತೆ ಹೆಚ್ಚಿನ ಮಾಹಿತಿ ಪಡೆಯಬಹುದು. ಒಂದು ವೇಳೆ ಇದು ಮಾನವರಿಗೆ ತೆರೆದುಕೊಂಡರೂ ಅದನ್ನು ಎದುರಿಸಲು ನಾವು ಸಿದ್ಧರಾಗಿರುತ್ತೇವೆ ಎನ್ನುತ್ತಾರೆ ವಾರೆನ್.
ಇದನ್ನೂ ಓದಿ: ಸೋಂಕು ಹೆಚ್ಚಿಸುವ ಉಪತಳಿ ಹೊಂದಿದೆ H3N2