ತರಕಾರಿ ಸೇವನೆ ಆರೋಗ್ಯಕ್ಕೆ ಉತ್ತಮ ಎಂಬುದು ಹಲವಾರು ಸಂಶೋಧನೆಗಳಲ್ಲಿ ದೃಢಪಟ್ಟಿದೆ. ಆಹಾರ ಸೇವನೆಯಲ್ಲಿ ನಿಯಮಿತವಾಗಿ ತರಕಾರಿ ತಿಂದ 5 ಲಕ್ಷ ಜನರ ಮೇಲೆ 12 ಕ್ಕೂ ಅಧಿಕ ಅಧ್ಯಯನಗಳನ್ನು ಕಳೆದ ಮೇ ತಿಂಗಳವರೆಗೆ ಮಾಡಲಾಗಿದೆ. ಇದರಲ್ಲಿ 5 ರಿಂದ 25 ವರ್ಷದ ವಯೋಮಾನದವರೇ ಇದ್ದು, ತರಕಾರಿ ಸೇವಿಸದವರಿಗಿಂತ ಹೆಚ್ಚು ಆರೋಗ್ಯದಾಯಕ ಮತ್ತು ರೋಗಕ್ಕೆ ತುತ್ತಾಗುವುದರಿಂದ ಪಾರಾಗಿದ್ದಾರೆ ಎಂಬುದು ಅಧ್ಯಯನಗಳ ಸಾರವಾಗಿದೆ. ಹಾಗಾದರೆ ಯಾವೆಲ್ಲಾ ತರಕಾರಿ ದೇಹಕ್ಕೆ ಏನೆಲ್ಲಾ ಸತ್ವ ನೀಡುತ್ತವೆ ಎಂಬುದನ್ನು ಅರಿಯೋಣ.
ಟೊಮೊಟೊದಲ್ಲಿದೆ ಆರೋಗ್ಯದ ಗುಟ್ಟು
ಟೊಮೊಟೊ ತರಕಾರಿಯಂತೆಯೇ ಬಳಸುತ್ತಿದ್ದರೂ ಇದು ಬೆರ್ರಿ(ಬೀಜಗಳಿಲ್ಲದ) ಹಣ್ಣಾಗಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ಲೈಕೋಪೀನ್ ಸಮೃದ್ಧವಾಗಿವೆ. ಟೊಮೊಟೊದಲ್ಲಿ ಕ್ಯಾರೊಟಿನಾಯ್ಡ್ ಇದ್ದು, ತರಕಾರಿಯ ಹೊರಭಾಗ ಹೊಳೆಯುವಂತೆ ಮಾಡುತ್ತದೆ.
ಅಧ್ಯಯನದ ವೇಳೆ ಒಂದೂವರೆ ಟೊಮೊಟೊ ಅಥವಾ ಟೊಮೆಟೋ ಜ್ಯೂಸ್ ಅನ್ನು 6 ವಾರಗಳವರೆಗೆ ಪ್ರತಿದಿನ ಸೇವಿಸುವಂತೆ ಹೇಳಲಾಗಿತ್ತು. ಬಳಿಕ ತಪಾಸಣೆ ವೇಳೆ ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳ(ಹೃದಯ ಅಪಾಯವನ್ನು ಹೆಚ್ಚಿಸುವ ರಕ್ತದಲ್ಲಿನ ಕೊಬ್ಬು) ಮಟ್ಟ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿದೆ. ಉತ್ತಮ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾಗಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಇದರಂತೆ ಉಳಿದ 11 ಅಧ್ಯಯನಗಳು ಕೂಡ ಇದೇ ಮಾದರಿಯ ಫಲಿತಾಂಶವನ್ನು ಪಡೆದುಕೊಂಡಿವೆ. ಟೊಮೊಟೊ ಉತ್ಪನ್ನಗಳನ್ನು ಸೇವಿಸುವುದರಿಂದ ರಕ್ತದೊತ್ತಡದಲ್ಲಿ ಭಾರಿ ಇಳಿಕೆಯನ್ನು ಸಂಶೋಧಕರು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.
ಟೊಮೊಟೊ ಅಧ್ಯಯನವು 2.60 ಲಕ್ಷ ಜನರ ಮೇಲೆ ಮಾಡಲಾಗಿತ್ತು. ಇವರಿಗೆ ಬೇಯಿಸಿದ ಟೊಮೊಟೊ, ಟೊಮೊಟೊ ಸಾಸ್, ಟೊಮೊಟೊ ಆಧಾರಿತ ಆಹಾರಗಳನ್ನು ನೀಡಲಾಗಿತ್ತು. ಅತಿ ಹೆಚ್ಚು ಟೊಮೊಟೊ ಖಾದ್ಯ ಸೇವನೆ ಮಾಡಿದವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಶೇ.15-20 ರಷ್ಟು ಪ್ರಮಾಣ ಇಳಿಕೆಯಾಗಿದ್ದು ಅಧ್ಯಯನದಲ್ಲಿ ಸಾಬೀತಾಗಿದೆ.
ಕುಂಬಳಕಾಯಿ ತಿನ್ನಿ 10 ವರ್ಷ ಆಯಸ್ಸು ಪಡೆಯಿರಿ
ಕುಂಬಳಕಾಯಿಯಲ್ಲಿ ಬೀಟಾ- ಕ್ಯಾರೋಟಿನ್ ಸಮೃದ್ಧವಾಗಿದೆ. ಇದರ ಸೇವನೆ ಬಳಿಕ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಯಾವುದಾದರೂ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳ ಉತ್ಪಾದನೆಯಲ್ಲಿಯೂ ಇದನ್ನು ಬಳಸಲಾಗುತ್ತದೆ. ಇದರ ಸೇವನೆಯಿಂದ ಕಣ್ಣುಗಳು, ಚರ್ಮ, ಶ್ವಾಸಕೋಶ ಮತ್ತು ಕರುಳಿನಲ್ಲಿರುವ ಜೀವಕೋಶಗಳ ರಕ್ಷಣೆಗೆ ಬಲ ನೀಡುತ್ತದೆ.
ಕುಂಬಳಕಾಯಿ, ಕ್ಯಾರೆಟ್, ಸಿಹಿ ಗೆಣಸು ಮತ್ತು ಸೊಪ್ಪಿನ ಆಹಾರವನ್ನು ಹೆಚ್ಚಾಗಿ ಸೇವಿಸುವ ಜನರು ಹೃದಯ ಕಾಯಿಲೆ, ಪಾರ್ಶ್ವವಾಯು, ಇನ್ನಿತರ ಕಾರಣದಿಂದ ಸಾಯುವ ಅಪಾಯವನ್ನು 8-19% ಕಡಿತಗೊಳಿಸಿದೆಯಂತೆ. ಕಡಿಮೆ ಸೇವನೆ ಮಾಡುವವರಿಗೆ ಹೋಲಿಸಿದರೆ ಇವರ ಆಯಸ್ಸು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಎಂಬುದು ಅಧ್ಯಯನದ ತಿರುಳು.
ಕ್ಯಾನ್ಸರ್ ಪ್ರಮಾಣ ಕುಗ್ಗಿಸುತ್ತೆ ಅಣಬೆಗಳು
ಅಣಬೆಗಳು ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಅಣಬೆಗಳ ಮೇಲೆ ಮತ್ತು ಅದರ ಸೇವನೆ ಬಳಿಕ ಆರೋಗ್ಯದ ಕುರಿತಾಗಿ 17 ಅಧ್ಯಯನಗಳು ನಡೆದಿದೆ. ಅಣಬೆಯನ್ನು ಕಡಿಮೆ ಸೇವನೆ ಮಾಡುವ ಜನರೊಂದಿಗೆ, ಹೆಚ್ಚು ಅಣಬೆಗಳನ್ನು ತಿನ್ನುವ ಜನರಿಗೆ ಹೋಲಿಕೆ ಮಾಡಿದಲ್ಲಿ ತಿಂದ ಜನರಲ್ಲಿ ಕ್ಯಾನ್ಸರ್ ಬರುವ ಅಪಾಯವು 34% ಕಡಿಮೆಯಾಗಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಇದಲ್ಲದೇ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವು ಕೂಡ 35% ಕುಗ್ಗಿಸಿದೆ.
ಓಟ್ಸ್ ತಿಂದರೆ ಕರಗುತ್ತೆ ಕೆಟ್ಟ ಕೊಲೆಸ್ಟ್ರಾಲ್
ಸಂಸ್ಕರಿಸಿದ ಧಾನ್ಯಗಳಿಗಿಂತ ಓಟ್ ಕಾಳುಗಳು, ದಪ್ಪವಾದ ರೋಲ್ಡ್ ಓಟ್ಸ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟ ಕಡಿಮೆ ಕಡಿಮೆ ಮಾಡುತ್ತದೆ ಎಂದು ಇದರ ಮೇಲೆ ನಡೆದ 10 ಅಧ್ಯಯನಗಳು ಪರಾಮರ್ಶಿಸಿವೆ.
ಓಟ್ಸ್ಗಳಲ್ಲಿ ಬೀಟಾ ಮತ್ತು ಗ್ಲುಕನ್ ಹೇರಳವಾಗಿವೆ. ಓಟ್ಸ್ ತಿನ್ನುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮತ್ತು ಇನ್ಸುಲಿನ್ ಗಮನಾರ್ಹವಾಗಿ ಇಳಿಕೆಯುಂಟಾಗಿದೆ.
ಸಂಸ್ಕರಿಸಿದ ಓಟ್ಸ್ ಅನ್ನು ದೇಹವು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ತ್ವರಿತ ರೋಲ್ಡ್ ಓಟ್ಸ್ ಬದಲಿಗೆ ಗ್ರೋಟ್ಸ್ ಅಥವಾ ರೋಲ್ಡ್ ಓಟ್ಸ್, ಧಾನ್ಯದ ಓಟ್ಸ್ ಅನ್ನು ತಿನ್ನುವುದು ಉತ್ತಮ ಎಂಬುದು ತಜ್ಞರ ಸಲಹೆಯಾಗಿದೆ.
ದಿನಂಪ್ರತಿ 3.5 ಗ್ರಾಂ ಓಟ್ಸ್ ತಿಂದ ಜನರ ಮೇಲೆ 58 ಅಧ್ಯಯನಗಳು ನಡೆದಿವೆ. ಓಟ್ಸ್ ತಿಂದ ಜನರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ವಿಪರೀತ ಕಡಿಮೆಯಾಗಿದೆ. ಇದು ಗಮನಾರ್ಹ ಅಂಶವಾಗಿದೆ.