ಯಾದಗಿರಿ: ಯುವತಿವೋರ್ವಳನ್ನು ಪ್ರೀತಿಸಿ ಮದುವೆಯಾದ ಯುವಕನ ಕುಟುಂಬದ ಮೇಲೆ ಆ ಯುವತಿಯ ಕುಟುಂಬಸ್ಥರು ಹಲ್ಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಗುಳಬಾಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುಮಿತ್ರಾ ಎಂಬ ಯುವತಿಯನ್ನು ಅದೇ ಗ್ರಾಮದ ತುಳಸಿನಾಥ ಎಂಬ ಯುವಕ, ಕಳೆದ ಎರಡು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಇವರಿಬ್ಬರ ಪ್ರೀತಿಗೆ ಸುಮಿತ್ರಾ ಕುಟುಂಬಸ್ಥರ ವಿರೋಧ ಇತ್ತು. ಈ ಹಿನ್ನೆಲೆಯಲ್ಲಿ ಸುಮಿತ್ರಾ ಮತ್ತು ತುಳಸಿನಾಥ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ. ಮದುವೆಯಾಗಿ ಎರಡು ತಿಂಗಳು ಕಳೆದ್ರು, ಈ ನವಜೋಡಿ ತಮ್ಮ ಕುಟುಂಬಸ್ಥರಿಗೆ ಹೆದರಿ ಗ್ರಾಮಕ್ಕೆ ಹೆಜ್ಜೆ ಇಟ್ಟಿಲ್ಲ.
ಇದರಿಂದ ಸುಮಿತ್ರಾ ಸಂಬಂಧಿಕರಾದ ನಾಗೇಶ್ ಹಾಗೂ ರಾಮು ಎಂಬುವರು ಕೈಯಲ್ಲಿ ತಲ್ವಾರ್ ಹಿಡಿದು, ತುಳಸಿನಾಥನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ವಿಡಿಯೋ ಜಿಲ್ಲೆಯ ಎಲ್ಲೆಡೆ ಹರಿದಾಡುತ್ತಿದೆ. ಯುವಕನ ಕುಟುಂಬಸ್ಥರಿಗೆ ತಲ್ವಾರ್ ಹಿಡಿದು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾದಾಗ ಕೆಲ ಗ್ರಾಮಸ್ಥರು ತಡೆಹಿಡಿದು ಬಹುದೊಡ್ಡ ಅನಾಹುತವನ್ನ ತಪ್ಪಿಸಿದ್ದಾರೆ.
ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರಗಿದ್ದು, ಹಾಡಹಗಲೇ ತಲ್ವಾರ್ ಹಿಡಿದು ಗಲಾಟೆ ಮಾಡಿರುವ ನಾಗೇಶ್ ಮತ್ತು ರಾಮು ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಬೇಕಿದೆ.