ಯಾದಗಿರಿ : ಕೋವಿಡ್-19 ಟೆಸ್ಟ್ ಮಾಡಿ 10 ದಿನ ಕಳೆದ್ರೂ ನಮ್ಮನ್ನು ಮನೆಗೆ ಕಳುಹಿಸುತ್ತಿಲ್ಲವೆಂದು ಆರೋಪಿಸಿ ಜಿಲ್ಲಾಡಳಿತದ ವಿರುದ್ಧ ಕ್ವಾರಂಟೈನ್ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರು ಪ್ರತಿಭಟಿಸಿದರು.
ಯಾದಗಿರಿ ತಾಲೂಕಿನ ಕಾಳಬೆಳಗುಂದಿ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿನ ಸುಮಾರು 200ಕ್ಕೂ ಹೆಚ್ಚು ವಲಸೆ ಕಾರ್ಮಿಕರು, ಇಂದು ತಮ್ಮ ಬ್ಯಾಗ್ ಸಮೇತ ಹೊರಗಡೆ ಬಂದು ಪ್ರತಿಭಟಿಸಿದರು. 14 ದಿನದ ಕ್ವಾರಂಟೈನ್ ಅವಧಿ ಮುಗಿದರೂ ನಮ್ಮನ್ನ ಮನೆಗೆ ಕಳುಹಿಸದೆ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ. ಕೋವಿಡ್ ಟೆಸ್ಟ್ ಮಾಡಿ ಹತ್ತು ದಿನ ಕಳೆದರೂ ನಮ್ಮ ವರದಿ ಬಂದಿಲ್ಲ ಎನ್ನುತ್ತಿದ್ದಾರೆ ಎಂದು ಆರೋಪಿಸಿ ವಲಸೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಟೆಸ್ಟ್ ವರದಿ ಬೇಗನೆ ನೀಡುವ ಮೂಲಕ ಕ್ವಾರಂಟೈನ್ ಅವಧಿ ಮುಗಿದವರನ್ನ ಮನೆಗೆ ಕಳುಹಿಸಿ ಕೊಡಿ, ಇಲ್ಲವಾದಲ್ಲಿ ನಾವು ಮನೆಗೆ ಹೋಗುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.