ಯಾದಗಿರಿ: ನಗರದ ಕೋಟಗೇರವಾಡ ಬಡಾವಣೆಯ ಖಾಸಗಿ ಶಾಲೆಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ವಲಸೆ ಕಾರ್ಮಿಕರನ್ನು ನಿನ್ನೆ ರಾತ್ರಿ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ. ಆದರೆ ಜನವಸತಿ ಪ್ರದೇಶ ಇರುವ ಕಾರಣಕ್ಕೆ ಈ ಸ್ಥಳದಲ್ಲಿ ಕ್ವಾರಂಟೈನ್ ಕೇಂದ್ರ ಮಾಡಿದ್ದು ತಪ್ಪು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಜಿಲ್ಲಾಡಳಿತದ ಮೇಲಿನ ಸಿಟ್ಟನ್ನು ವಲಸೆ ಕಾರ್ಮಿಕರ ಮೇಲೆ ತೋರಿಸಿರುವುದು ಬೇಸರದ ಸಂಗತಿ. ನಿನ್ನೆ ರಾತ್ರಿಯಿಂದ ಊಟ ನೀರಿಲ್ಲದೆ ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಮಿಕರು ಮಕ್ಕಳ ಜೊತೆಗೆ ಪರದಾಡುತ್ತಿದ್ದಾರೆ. ಇಷ್ಟಾದರೂ ಇಂದು ಬೆಳಗ್ಗೆ ಅಧಿಕಾರಿಗಳು ಕ್ವಾರಂಟೈನ್ನಲ್ಲಿರುವವರಿಗೆ ಊಟ ನೀಡಲು ಬಂದಾಗ ಸ್ಥಳೀಯರು ಅಧಿಕಾರಿಗಳನ್ನು ಬೈದು ವಾಪಸ್ ಕಳಿಸಿದ್ದಾರೆ. ಇನ್ನು ಕ್ವಾರಂಟೈನ್ ಕೇಂದ್ರಕ್ಕೆ ಹೋಗುವ ಎರಡೂ ಬದಿಯ ರಸ್ತೆಗೆ ಮುಳ್ಳು ಗಂಟಿಗಳನ್ನು ಹಾಕಿ ಸಂಪೂರ್ಣವಾಗಿ ರಸ್ತೆಯನ್ನು ಬಂದ್ ಮಾಡಿ ಯಾವುದೇ ವಾಹನ ಬರದಂತೆ ತಡೆದಿದ್ದಾರೆ.
ಸ್ಥಳೀಯರ ವರ್ತನೆಗೆ ಕ್ವಾರಂಟೈನ್ನಲ್ಲಿರುವ ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಕುಡಿಯಲು ನೀರು ಕೂಡಾ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. 'ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು' ಎನ್ನುವಂತೆ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವಿನ ಜಗಳದಲ್ಲಿ ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರ ಸ್ಥಳಾಂತರ ಮಾಡುವವರೆಗೆ ಊಟ ನೀರು ನೀಡಲು ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದ ಕಾರಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿದ್ದಾರೆ.