ಯಾದಗಿರಿ: ಇಂದು ಬೆಳಗ್ಗೆಯಿಂದ ಸಂಜೆ 6ರವರೆಗೆ ನಗರದ ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಮಾಡಿ ಧರಣಿ ನಡೆಸುತ್ತಿರುವ ವೈದ್ಯರು ಮಧ್ಯಾಹ್ನ 12 ಗಂಟೆಗೆ ತಮ್ಮ ಧರಣಿ ಕೈಬಿಟ್ಟಿದ್ದಾರೆ.
ಶನಿವಾರ ಮನಗಿನಾಳ ಗ್ರಾಮದ ಕಲಾವತಿ ಎಂಬುವರು ಹೆರಿಗೆ ವೇಳೆ ನಗರದ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಸ್ಪತ್ರೆ ವೈದ್ಯೆ ಪ್ರೇಮ ರೆಡ್ಡಿ ನಿಷ್ಕಾಳಜಿಯೇ ಕಲಾವತಿ ಸಾವಿಗೆ ಕಾರಣ ಎಂದು ಆರೋಪಿಸಿ ಆಸ್ಪತ್ರೆಯಲ್ಲಿ ಗಲಾಟೆ ನಡೆದಿತ್ತು. ಉದ್ರಿಕ್ತರು ಆಸ್ಪತ್ರೆ ಗಾಜು ಒಡೆದು ದಾಂಧಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದ ಸಂಜೆ 6 ಗಂಟೆವರೆಗೆ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯ ಸಂಸ್ಥೆ ಸದಸ್ಯರು ನಿರ್ಧರಿಸಿದ್ದರು.
ಆದರೆ, ರೋಗಿಗಳಿಗೆ ತೊಂದರೆಯಾಗುತ್ತಿರುವುದನ್ನು ಅರಿತು, ಬಂದ್ ನಿರ್ಧಾರವನ್ನ 12 ಗಂಟೆಗೆ ಮೊಟಕುಗೊಳಿಸಿದ್ದಾರೆ. ಸದ್ಯ ಎಂದಿನಂತೆ ನಗರದ ಎಲ್ಲ ಖಾಸಗಿ ಆಸ್ಪತ್ರೆ ಲ್ಯಾಬ್ಗಳನ್ನ ತೆರೆಯಲಾಗಿದ್ದು, ವೈದ್ಯಕೀಯ ಸೇವೆ ಲಭ್ಯವಿದೆ ಎಂದು ಭಾರತೀಯ ವೈದ್ಯ ಸಂಸ್ಥೆಯ ಸದಸ್ಯ ವೀರಬಸಂತ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.