ಸುರಪುರ: ಸಂಚಾರಿ ನಿಯಮಗಳನ್ನು ತಿಳಿಸುವುದು ಹಾಗೂ ವಿವಿಧ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸುರಪುರ ಪೊಲೀಸ್ ಉಪ ವಿಭಾಗದಿಂದ ಪದವಿ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು.
ಸುರಪುರ ಪೊಲೀಸ್ ವಿಭಾಗದ ವತಿಯಿಂದ ಸುರಪುರ ಶಹಾಪುರ ಮತ್ತು ಹುಣಸಗಿ ತಾಲೂಕುಗಳಲ್ಲಿನ 15 ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ ಕಿರು ಪರೀಕ್ಷೆ ನಡೆಸುವ ಮೂಲಕ ಸಂಚಾರಿ ನಿಯಮಗಳು ಸೇರಿದಂತೆ ವಿವಿಧ ಕಾನೂನುಗಳ ಕುರಿತು 25 ಪ್ರಶ್ನೆಗಳ ಪ್ರಶ್ನೆ ಪತ್ರಿಕೆಯನ್ನು ತಯಾರಿಸಿ ಅದರಲ್ಲಿ ಉತ್ತರಗಳನ್ನು ಬರೆಯುವ ಮೂಲಕ ವಿದ್ಯಾರ್ಥಿಗಳಿಗೆ ಇರುವ ಸಾಮಾನ್ಯ ಕಾನೂನುಗಳ ಅರಿವಿನ ಬಗ್ಗೆ ತಿಳಿದು ನಂತರ ಕಾನೂನುಗಳ ಬಗ್ಗೆ ಅರಿವು ಮೂಡಿಸಲಾಯಿತು.
ಒಟ್ಟು 15 ಕಾಲೇಜುಗಳಿಂದ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಿರು ಪರೀಕ್ಷೆಗೆ ಹಾಜರಾಗಿ ಉತ್ತರಿಸಿದ್ದಾರೆ. ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಸುರಪುರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ವೆಂಕೋಬ ಬಿರಾದರ್, ವಿದ್ಯಾರ್ಥಿಗಳಿಗೆ ಇಂತಹ ಒಂದು ಕಿರು ಪರೀಕ್ಷೆಯ ಮೂಲಕ ವಿವಿಧ ಕಾನೂನುಗಳ ಬಗ್ಗೆ ಅರಿವು ಮೂಡಿಸಿರುವುದು ಪೊಲೀಸ್ ಇಲಾಖೆಯ ಉತ್ತಮವಾದ ಕೆಲಸ ಎಂದರು.