ಸುರಪುರ: ತಾಲೂಕಿನ ಅರಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭಗೊಂಡು ಭರದಿಂದ ಸಾಗಿದ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳಿಂದ ಕಾರ್ಮಿಕರು ಖುಷಿಗೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘ ಸುರಪುರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಹಾಗೂ ಕೆಲಸ ಮಾಡಿದವರ ಕೂಲಿ ನೀಡಲು ಆಗ್ರಹಿಸಿ ಹೋರಾಟ ನಡೆಸಲಾಗಿತ್ತು.
ಹೋರಾಟಗಾರರ ಧ್ವನಿಗೆ ಸ್ಪಂದಿಸಿದ ಆಡಳಿತ ವರ್ಗ ಅರಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬದು ನಿರ್ಮಾಣ ಕಾಮಗಾರಿ ಆರಂಭಿಸಿ ಅನೇಕ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿದೆ. ಅನೇಕ ಜನ ಮಹಿಳೆಯರು ಹಾಗೂ ಪುರುಷರು ಖುಷಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಬಹುತೇಕರು ಮಾಸ್ಕ್ ಧರಿಸದೆ ಇರುವುದನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಿಸಬೇಕಿದೆ. ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸುವುದು ಅವಶ್ಯಕವಾಗಿದೆ ಎಂದು ಜನ ಆಗ್ರಹಿಸುತ್ತಿದ್ದಾರೆ.
ಇಂದು ಅರಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಸಿಕ್ಕಿದ್ದರಿಂದ ಇಲ್ಲಿಯ ಕಾರ್ಮಿಕರು ಖುಷಿಗೊಂಡಿದ್ದಾರೆ. ಇದೇ ರೀತಿಯಾಗಿ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಾರ್ಮಿಕರಿಗೆ ಕೆಲಸ ನೀಡಬೇಕು ಮತ್ತು ಕೂಲಿ ಹಣವನ್ನು ತ್ವರಿತವಾಗಿ ನೀಡಬೇಕು. ಆಗ ಗುಳೆ ಹೋಗುವುದನ್ನು ತಪ್ಪಿಸಬಹುದು ಎನ್ನುತ್ತಾರೆ ವಕೀಲ ಶರಣಪ್ಪ ಅನಕಸುಗೂರು.