ಗುರುಮಠಕಲ್ (ಯಾದಗಿರಿ): ಧಬೆ ಧಬೆ ಜಲಪಾತ ವೀಕ್ಷಿಸಲು ಬಂದ ಗೃಹಿಣಿಯೋರ್ವಳು ನೀರು ಪಾಲಾದ ಘಟನೆ ಇಂದು ನಡೆದಿದೆ. ಐಶ್ವರ್ಯ ಶರಣು (23) ಮೃತ ದುರ್ದೈವಿ. ಚಿತ್ತಾಪುರದಿಂದ ಧಬೆ ಧಬೆ ಜಲಪಾತ ನೋಡಲು ಕುಟುಂಬದ ಅತ್ತೆ, ಇಬ್ಬರು ಸೊಸೆಯಂದಿರೊಂದಿಗೆ ಅಕ್ಕಪಕ್ಕದ ಮಹಿಳೆಯರು ಸೇರಿ ಸುಮಾರು 7 ಜನರು ಮಕ್ಕಳೊಂದಿಗೆ ಆಗಮಿಸಿದ್ದರು.
ನಾಲ್ಕೈದು ಜನ ಮಹಿಳೆಯರು ನೀರಿನಲ್ಲಿ ಇಳಿದಿದ್ದಾರೆ. ನೀರಿನ ಸುಳಿಯಲ್ಲಿ ಸಿಲುಕಿದ ನಾಲ್ವರಲ್ಲಿ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ, ದುರಾದೃಷ್ಟವೆಂಬಂತೆ ಐಶ್ವರ್ಯ ನೀರು ಪಾಲಾಗಿದ್ದಾಳೆ. ಸುಮಾರು ಎರಡು ಗಂಟೆಗಳ ಕಾಲ ಹುಡುಕಾಟದ ನಂತರ ಮೃತದೇಹ ಪತ್ತೆಯಾಗಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. 14 ತಿಂಗಳ ಮಗು ತಾಯಿಯನ್ನು ಕಳೆದುಕೊಂಡಿದೆ.
ಜಿಲ್ಲಾಡಳಿತಕ್ಕೆ ಹಿಡಿಶಾಪ : ಇಲ್ಲಿಗೆ ಪ್ರತಿ ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ವುತ್ತಲೇ ಇದೆ. ಜತೆಗೆ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸುದ್ದಿ ತಿಳಿದು ಗುರುಮಠಕಲ್ ಪಿಐ ಖಾಜಾ ಹುಸೇನ್, ಪಿಎಸ್ಐ ಶ್ರೀಶೈಲ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗಂಗಾವತಿ : ಕಾಂಗ್ರೆಸ್ ಮುಖಂಡನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೆ ಯತ್ನಿಸಿದ ಬಿಜೆಪಿ ಲೀಡರ್