ಯಾದಗಿರಿ: ಜಿಲ್ಲೆಯಲ್ಲಿ ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ನಾಲ್ಕೈದು ಜನರು ಸೇರಿಕೊಂಡು ಮಹಿಳೆಯೊಬ್ಬರನ್ನ ಬೆತ್ತಲೆಯಾಗಿಸಿ, ಲೈಂಗಿಕ ದೌರ್ಜನ್ಯ ನಡೆಸಿ, ಮನ ಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.
ಹಲವು ತಿಂಗಳ ಹಿಂದೆ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆಯ ದೃಶ್ಯವನ್ನು ದುರುಳರು ಮೊಬೈಲ್ನಲ್ಲಿ ಸೆರೆಹಿಡಿದು ವಿಕೃತಿ ಮೆರೆದಿದ್ದಾರೆ. ಯಾದಗಿರಿಯ ಚಟ್ನಳ್ಳಿ ಹಾಗೂ ಹಳಿಸಗರ ಗ್ರಾಮ - ಈ ಎರಡು ಗ್ರಾಮಗಳ ಸುತ್ತ ಮುತ್ತ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗ ಬಳಿಕ ಘಟನೆ ಬೆಳಕಿಗೆ ಬಂದಿದೆ.
'ನಿಮ್ಮ ಕಾಲಿಗೆ ಬೀಳ್ತೀನಿ, ನನ್ನ ಬಿಟ್ಟು ಬಿಡಿ' ಎಂದು ಮಹಿಳೆ ಗೋಳಾಡಿದರೂ ಕಲ್ಲು ಹೃದಯದ ದುರುಳರು ಆಕೆಯ ಅಂಗಾಂಗಳನ್ನು ಮುಟ್ಟಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಪಿಗಳ ದುವರ್ತನೆಗೆ ಕಾರಣ ತಿಳಿದು ಬಂದಿಲ್ಲ. ತನಿಖೆ ಬಳಿಕ ನಿಖರ ಮಾಹಿತಿ ಹೊರ ಬರಲಿದೆ.
ನಾಲ್ಕು ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು
ಘಟನೆ ಬಗ್ಗೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 8 ತಿಂಗಳ ಹಿಂದೆ ಘಟನೆ ನಡೆದಿದೆ ಎಂಬುದು ಪೂರ್ವಭಾವಿ ವಿಚಾರಣೆಯಲ್ಲಿ ತಿಳಿದು ಬಂದಿದೆ. ಅಷ್ಟೇ ಅಲ್ಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ. ಆದರೆ ಆರೋಪಿಗಳು ಮಾತ್ರ ಈ ಘಟನೆ ನಡೆದದ್ದು ಒಂದೂವರೆ ವರ್ಷದ ಹಿಂದೆ ಎಂದು ಹೇಳ್ತಾ ಇದಾರೆ ಎಂದು ತಿಳಿಸಿದ್ದಾರೆ.
ಮಹಿಳೆಯ ಬಗ್ಗೆ ಇನ್ನೂವರೆಗೂ ಗೊತ್ತಾಗಿಲ್ಲ, ನಮ್ಮ ಸಂಪರ್ಕಕ್ಕೂ ಅವರು ಬಂದಿಲ್ಲ. ಇನ್ನು ಘಟನೆ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ವಿಡಿಯೋದಲ್ಲೇನಿದೆ?
ಮೊಬೈಲ್ನಲ್ಲಿನ ದೃಶ್ಯಗಳನ್ನು ಮಹಿಳೆಗೆ ತೋರಿಸಿ, ಇದು ನಿನ್ನದೆಯಾ ಎಂದು ಕೇಳುತ್ತ ಹೊಡೆಯುತ್ತಿರುವುದು ಹಾಗೂ ಕೂಗಾಡಿದರೆ ಪೆಟ್ರೋಲ್ ಹಾಕಿ ಸುಟ್ಟುಹಾಕುತ್ತೇನೆ ಎಂದು ಬೆದರಿಸುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿದೆ. ಅಪ್ಪ, ಅಣ್ಣ ಕಾಲಿಗೆ ಬೀಳುತ್ತೇನೆ ಎನ್ನುತ್ತ, ಮಹಿಳೆ ಗೋಳಾಡಿದರೂ ಕೂಡ ಕಲ್ಲು ಹೃದಯದ ದುರುಳರು ಆಕೆಯ ಅಂಗಾಂಗಳನ್ನು ಮುಟ್ಟಿ ಚಿತ್ರಹಿಂಸೆ ನೀಡುವುದಲ್ಲದೇ, ಹಲ್ಲೆ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಡಿಕೆಶಿ ಖಂಡನೆ
ಯಾದಗಿರಿ ಮಹಿಳೆ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಎಂಬುವುದೇ ತಿಳಿದಿಲ್ಲ ಎಂದು ಹರಿಹಾಯ್ದಿದ್ದಾರೆ.