ಯಾದಗಿರಿ: ಸನ್ನತಿ ಬ್ಯಾರೇಜ್ನಿಂದ ಭೀಮಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದ್ದು, ಇದರಿಂದ ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.
ಕಲಬುರಗಿಯ ಚಿತ್ತಾಪುರ ತಾಲೂಕಿನ ಸನ್ನತಿ ಬ್ಯಾರೇಜ್ನಿಂದ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಮತ್ತೆ ಭೀಮಾ ನದಿಗೆ 3 ಲಕ್ಷ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. 2.84 ಟಿಎಮ್ಸಿ ಸಾಮರ್ಥ್ಯ ಹೊಂದಿದ ಸನ್ನತಿ ಬ್ಯಾರೇಜ್ನಲ್ಲಿ 1.2 ಟಿಎಂಸಿ ನೀರು ಭರ್ತಿಯಾಗಿದೆ. ಬ್ಯಾರೇಜ್ನ ಒಳಹರಿವು 3 ಲಕ್ಷ 10 ಸಾವಿರದಷ್ಟು ಹೆಚ್ಚಾಗಿದ್ದು, 31 ಗೇಟ್ ಓಪನ್ ಮಾಡುವ ಮೂಲಕ ನದಿಗೆ ನೀರು ಹೊರ ಬಿಡಲಾಗುತ್ತಿದೆ. ಹೀಗಾಗಿ ಮತ್ತೆ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದ ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.
ಈಗಾಗಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ನದಿ ಪಾತ್ರದ 45 ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಇದರಲ್ಲಿ 12 ಗ್ರಾಮಸ್ಥರನ್ನು ವಿವಿಧ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.