ಯಾದಗಿರಿ: ಶಹಾಪುರ ತಾಲೂಕಿನ ವನದುರ್ಗ ಗ್ರಾಮದ ಹೊರ ವಲಯದಲ್ಲಿ ವೀರಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಈ ದೇವಸ್ಥಾನವನ್ನು ಸುರಪುರ ಅರಸರು 17ನೇ ಶತಮಾನದಲ್ಲಿ ಕೋಟೆ ನಿರ್ಮಿಸುವ ವೇಳೆ 7 ಅಡಿ ಎತ್ತರದ ಬೃಹತಾಕಾರದ ಏಕಶಿಲೆಯ ವೀರಾಂಜನೇಯ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂಬ ಪ್ರತೀತಿ ಇದೆ.
ವೀರಾಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ತನ್ನದೇ ಆದ ವಿಶಿಷ್ಟ ಇತಿಹಾಸ ಹೊಂದಿದ್ದು, ಜಾತ್ರೆ ನಡೆಯುವ ಒಂದು ವಾರ ಮುಂಚಿತವಾಗಿ ಕಳಸ ಪೂಜೆಯಿಂದ ಇದು ಪ್ರಾರಂಭವಾಗುತ್ತದೆ.
ಅಸ್ತಮಾದಿನದಂದು ದೇವಸ್ಥಾನದಲ್ಲಿ ಪವನ ಹೋಮ ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯೊಂದಿಗೆ ಸುರಪುರ ತಾಲೂಕಿನ ಶೆಳ್ಳಿಗಿ ಗ್ರಾಮದ ಹತ್ತಿರ ಹರಿಯುವ ಕೃಷ್ಣಾ ನದಿಗೆ ಗಂಗಾ ಸ್ನಾನಕ್ಕಾಗಿ ನೂರಾರು ಭಕ್ತರು ಭಾಜ ಭಜಂತ್ರಿಯೊಂದಿಗೆ ತೆರಳುತ್ತಾರೆ. ಮರುದಿನ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಧಿ ವಿಧಾನಗಳ ಮೂಲಕ ಗಂಗಾ ಸ್ನಾನ ಮಾಡಿಸಲಾಗುತ್ತದೆ.
ನಂತರ ಅಲ್ಲಿಂದ ಸುರಪುರದ ಅರಮನೆಯೊಳಗೆ ಪ್ರವೇಶಿಸಿ ಅಲ್ಲಿ ರಾಜ ಮನೆತನದವರಿಂದ ವಿಶೇಷ ಪೂಜೆ, ನೈವೇದ್ಯ ಸ್ವಾಮಿಗೆ ಸಮರ್ಪಿಸಲಾಗುತ್ತದೆ. ಅಲ್ಲಿಂದ ಪಲ್ಲಕ್ಕಿ ವನದುರ್ಗ ಗ್ರಾಮದ ಸೀಮೆಯನ್ನು ಪ್ರವೇಶಿಸಿ ಮರುದಿನ ಬ್ರಾಹ್ಮಿ ಮುಹೂರ್ತದಲ್ಲಿ ಅಗ್ನಿ ಪ್ರವೇಶದ ನಂತರ ಧಾರ್ಮಿಕ ಕಾರ್ಯಗಳು, ಹೇಳಿಕೆ ಹೇಳುವುದು ನಡೆಯುತ್ತದೆ.
ಮಕ್ಕಳಾಗದವರು ಈ ದೇವಸ್ಥಾನದಲ್ಲಿ 48 ದಿನ ಪೂಜೆ ಸಲ್ಲಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಹಾಗೂ ಸಮಸ್ಯೆ ಉಳ್ಳವರು, ಮಾನಸಿಕವಾಗಿ ನೊಂದವರು, ಇತರೆ ಆರೋಗ್ಯ ಕಾಯಿಲೆ ಇರುವವರು ಪೂಜೆ ಸಲ್ಲಿಸಿದರೆ ಅವರ ಕಷ್ಟಗಳೆಲ್ಲ ಪರಿಹಾರವಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಇದನ್ನೂ ಓದಿ:ಮನೆ ನಿರ್ಮಾಣ ಕಾಮಗಾರಿ ಸ್ಥಗಿತ: ಬಾಬುರಾವ್ ಚಿಂಚನಸೂರ್ ವಿರುದ್ಧ ಫಲಾನುಭವಿಗಳ ಆಕ್ರೋಶ