ಯಾದಗಿರಿ: ಅವಧಿಗೆ ಮುನ್ನ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿಧಾನಸಭೆ ಚುನಾವಣೆ ನಡೆಯುವುದಿಲ್ಲ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಜನಾದೇಶ 5 ವರ್ಷದವರೆಗೂ ಇದೆ. ಹೀಗಾಗಿ ಆಡಳಿತ ಪೂರ್ತಿಯಾಗಿ ನಡೆಸುತ್ತೇವೆ. ಅವಧಿಗೆ ಮುನ್ನ ಚುನಾವಣೆ ಬರಲಿದೆ ಎಂದು ಪ್ರತಿಪಕ್ಷಗಳು ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಹರಿಹಾಯ್ದರು.
ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ: ಪಿಎಸ್‌ಐ ಪರೀಕ್ಷೆಯಲ್ಲಿ ನಡೆದ ಅಕ್ರಮದ ದಾಖಲಾತಿಗಳು ನನ್ನ ಬಳಿ ಇವೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರಿಗೆ ಸಿಐಡಿ ನೋಟಿಸ್ ನೀಡಿದೆ. ವಿಚಾರಣೆಗೆ ಏಕೆ ಹಾಜರಾಗುತ್ತಿಲ್ಲ. ಅವರೇ ದಾಖಲಾತಿಗಳು ಇವೆ ಎಂದಾಗ ಪೊಲೀಸ್ ಇಲಾಖೆ ಸುಮ್ಮನೇ ಕೂರುವುದಿಲ್ಲ ಎಂದರು.
ಪೊಲೀಸ್ ಇಲಾಖೆಯು ಕಾನೂನು ಚೌಕಟ್ಟಿನಲ್ಲಿ ಖರ್ಗೆಗೆ ನೋಟಿಸ್ ನೀಡಿದ್ದಾರೆ. ನಿಮ್ಮ ಹತ್ತಿರ ಸಾಕ್ಷಿ ಇದೆ ಎಂದರೆ, ಕೊಡು ಅಂತ ಕೇಳುವುದು ತನಿಖಾಧಿಕಾರಿಯ ಜವಾಬ್ದಾರಿ. ಯಾವುದೇ ವ್ಯಕ್ತಿ, ಪಕ್ಷವನ್ನು ನೋಡದೇ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 27 ಕ್ಕೂ ಹೆಚ್ಚು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಇದಲ್ಲದೇ ಒಬ್ಬ ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಓದಿ: ಹೆಸರು ದುರ್ಬಳಕೆ ಮಾಡಿದ ಮಹಿಳೆ ವಿರುದ್ಧ ದೂರು ದಾಖಲಿಸಿದ ಶಾಸಕ ರಾಜೂಗೌಡ