ಸುರಪುರ: ಕಳೆದೆರಡು ತಿಂಗಳಿನಿಂದ ಲಾಕ್‌ಡೌನ್ ಘೋಷಣೆಯಾಗಿ ಜನರು ಮನೆಯಲ್ಲಿದ್ದು, ಆಗೊಮ್ಮೆ ಈಗೊಮ್ಮೆ ಹೊರಗೆ ಬಂದು ಹೋಗುತ್ತಿದ್ದರು. 4ನೇ ಹಂತದ ದಿಗ್ಬಂಧನದಿಂದ ಸಡಿಲಿಕೆ ಸಿಕ್ಕಿದ್ದರಿಂದ ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ಜನದಟ್ಟಣೆ ಕಂಡುಬಂತು.
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ತಂಡೋಪ ತಂಡವಾಗಿ ಮಾರುಕಟ್ಟೆಗಿಳಿದು ಖರೀದಿಗೆ ಮುಗಿ ಬಿದ್ದರು. ಬಟ್ಟೆ, ಆಭರಣ ಮತ್ತು ಪಾತ್ರೆ ಮಳಿಗೆಗಳು ಗ್ರಾಹಕರಿಂದ ತುಂಬಿದವು.
ಬಹುತೆಕ ಸಾರ್ವಜನಿಕರು ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಅಂಗಡಿಗಳಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಹಿಂದೇಟು ಹಾಕಿದ್ದರು. ಇದರ ಮಧ್ಯೆ ಕೆಲ ಬಟ್ಟೆ ಅಂಗಡಿಗಳ ಮಾಲೀಕರು ಸ್ಯಾನಿಟೈಸರ್ ಹಾಕಿ ಕೈ ಶುಚಿಗೊಳಿಸುವಂತೆ ಹೇಳುತ್ತಿದ್ದರು.
ಇಡೀ ಮಾರುಕಟ್ಟೆಯ ಮುಖ್ಯರಸ್ತೆಯ ಒಂದು ಬದಿ ಬೈಕ್‌ಗಳಿಂದ ತುಂಬಿತ್ತು. ಮದುವೆ ಸಮಾರಂಭಗಳಿಗೆ ಬಟ್ಟೆ, ಮಂಚ, ಪಾತ್ರೆಯಂತಹ ವಸ್ತುಗಳ ಖರೀದಿಗೆ ಜನ ನಿರತರಾಗಿದ್ದರು.
ಪೊಲೀಸರು ಹಾಗೂ ನಗರಸಭೆ ಸಿಬ್ಬಂದಿ ಜನಸಂದಣಿ ನಿಯಂತ್ರಣಕ್ಕೆ ಪ್ರಯತ್ನಿಸಿದರಾದರೂ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಈಗಾಗಲೇ ಸುರಪುರದಲ್ಲಿ ಕೊರೊನಾ ಸೊಂಕು ಕಾಣಿಸಿಕೊಂಡಿದ್ದು, ಜನರ ಈ ಬಗ್ಗೆ ಯಾವುದೇ ಆತಂಕವಿಲ್ಲದೆ ಓಡಾಡುತ್ತಿದ್ದರು.