ಸುರಪುರ: ಹುಣಸಗಿ ತಾಲೂಕಿನ ತಳ್ಳಳ್ಳಿ ಕೆ.ಗ್ರಾಮದಲ್ಲಿ ಚುನಾವಣೆ ಸಂದರ್ಭದಲ್ಲಿ ಗಲಾಟೆ ನಡೆದಿದ್ದು, ನಾಲ್ವರು ಗಾಯಗೊಂಡು ಒಬ್ಬನ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಒಂದೇ ಕೋಮಿನ ಎರಡು ಗುಂಪಿನ ಸದಸ್ಯರು ಚುನಾವಣೆಯ ಸಂದರ್ಭದಲ್ಲಿ ಸಂಜೆ ವೇಳೆಗೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಶಾಂತಿ ಕಾಪಾಡುವಂತೆ ಸೂಚಿಸಿದ್ದರು. ಆದರೆ ಚುನಾವಣೆ ಮುಗಿದು ಅಧಿಕಾರಿಗಳು ಮತಗಟ್ಟೆಯಿಂದ ತೆರಳಿದ ಬಳಿಕ ರಾತ್ರಿ 9ರ ಸುಮಾರಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದ ವ್ಯಕ್ತಿ ಹಾಗೂ ಆತನ ಸಹೋದರನ ಮೇಲೆ ಬೇರೊಂದು ಗುಂಪು ಹಲ್ಲೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಘಟನೆಯಲ್ಲಿ ಶ್ರೀನಿವಾಸ್ ಬಸವಂತ್ರಾಯ, ರಾಚಣ್ಣ ಬಸವಂತ್ರಾಯ, ಮಹಾಂತೇಶ ಬಸವಂತ್ರಾಯ ಹಾಗೂ ಅಯ್ಯಪ್ಪ ತಿಮ್ಮಣ್ಣ ಕಟಗಿ ಗಾಯಗೊಂಡಿದ್ದಾರೆ.
ಸ್ಥಳದಲ್ಲಿ ಹುಣಸಗಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.